ಮಡಿಕೇರಿ, ನ. ೨೩: ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ, ಮಡಿಕೇರಿ ಮತ್ತು ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ೬೭ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ, ಪುಸ್ತಕ ಬಿಡುಗಡೆ, ದತ್ತಿ ಪ್ರದಾನ ಹಾಗೂ ಜಾನಪದ ನೃತ್ಯ ಸ್ಪರ್ಧೆ ಕಾರ್ಯಕ್ರಮವು ಮಡಿಕೇರಿಯ ಲಯನ್ಸ್ ಸಭಾಂಗಣದಲ್ಲಿ ತಾ.೨೫ರ ಶುಕ್ರವಾರ ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ವಹಿಸಲಿದ್ದಾರೆ.

ಉದ್ಘಾಟನೆಯನ್ನು ಕೊಡಗು ಜಿಲ್ಲಾ ಉಪ ವಿಭಾಗಾಧಿಕಾರಿಗಳಾದ ಡಾ. ಯತೀಶ್ ಉಳ್ಳಾಲ್ ನೆರವೇರಿಸಲಿದ್ದಾರೆ.

ನವೋದಯ ವಿದ್ಯಾಲಯದ ಉಪನ್ಯಾಸಕ ದಾಸಣ್ಣನವರ ಎರಡು ಕೃತಿಗಳಾದ "ಕಣ್ಣ ಹಿಂದಿನ ಕಡಲು" ಕವನ ಸಂಕಲನ ಮತ್ತು "ಅಕ್ಕತಂಗ್ಯಾರು" ಕಥೆಗಳ ಪುಸ್ತಕವು ಬಿಡುಗಡೆಗೊಳ್ಳಲಿವೆ. ಜಿಲ್ಲೆಯ ಕವಿ, ಸಾಹಿತಿ ಮತ್ತು ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಕಾಜೂರು ಸತೀಶ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ಮಧ್ಯಾಹ್ನ ೨ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಜಾನಪದ ನೃತ್ಯ ಸ್ಪರ್ಧೆ ಬಹುಮಾನ ವಿತರಣೆ ಹಾಗೂ ೨೦೨೧-೨೨ನೇ ಸಾಲಿನಲ್ಲಿ ಕೊಡಗು ಜಿಲ್ಲೆಯ ೧೦ನೇ ತರಗತಿಯ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತೀ ಹೆಚ್ಚು ಅಂಕ ಪಡೆದ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಬಿ.ಎಂ. ಇಂಚರಳಿಗೆ ಟಿ.ಪಿ. ರಮೇಶ್ ದತ್ತಿನಿಧಿ ಸನ್ಮಾನ, ಗೌರವ ಸಮರ್ಪಣೆ ಮತ್ತು ನಗದು ಬಹುಮಾನ ನೀಡಲಾಗುತ್ತದೆ.