ಮಡಿಕೇರಿ, ನ. ೨೧: ಜಿಲ್ಲೆಯಲ್ಲಿ ವನ್ಯಜೀವಿ ಹಾವಳಿಯಿಂದ ಎದುರಾಗುತ್ತಿರುವ ಗಂಭೀರ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕ ನೇತೃತ್ವದಲ್ಲಿ ಆದಿವಾಸಿ, ಕಾರ್ಮಿಕ ಸಂಘಟನೆಗಳು ಒಂದುಗೂಡಿ ‘ಅರಣ್ಯ ಭವನ ಚಲೋ’ ಮೂಲಕ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ, ಸೂಕ್ತ ಕ್ರಮಕೈಗೊಳ್ಳಲು ಒತ್ತಾಯಿಸಿದವು.

ಜಿಲ್ಲೆಯ ವಿವಿಧೆಡೆಗಳಿಂದ ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ರಚಿಸಿ ಘೋಷಣೆ ಕೂಗಿ ಕಾಲ್ನಡಿಗೆ ಮೂಲಕ ಅರಣ್ಯ ಭವನಕ್ಕೆ ಸಾಗಿದರು. ವನ್ಯಜೀವಿ ಉಪಟಳಕ್ಕೆ ಮುಕ್ತಿ ನೀಡದಿದ್ದಲ್ಲಿ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಅರಣ್ಯ ಇಲಾಖೆಗೆ ಪ್ರತಿಭಟನಾಕಾರರು ಎಚ್ಚರಿಸಿದರು.

ಸರಕಾರ ವಿಫಲ - ನಾಗೇಂದ್ರ

ಅರಣ್ಯ ಭವನದಲ್ಲಿ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲೆಯಲ್ಲಿ ವನ್ಯಜೀವಿಗಳ ಉಪಟಳದಿಂದ ಸಾವು-ನೋವು ಸಂಭವಿಸುತ್ತಿದೆ. ಹಲವು ವರ್ಷಗಳಿಂದ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಎಲ್ಲಾ ರೀತಿಯ ಹೋರಾಟ ನಡೆಸಿದರು. ಅರಣ್ಯ ಇಲಾಖೆ ಹಾಗೂ ಜನಪ್ರತಿನಿಧಿಗಳು ಸ್ಪಂದನ ನೀಡದೆ, ಜನವಿರೋಧಿ ನಡೆ ತೋರುತ್ತಿದ್ದಾರೆ. ರೈತರು, ಆದಿವಾಸಿಗಳು ನೈಜ ಅರಣ್ಯ ರಕ್ಷಕರು. ಅರಣ್ಯ ಉಳಿದಿದೆ ಎಂದಾದರೆ ಅದಕ್ಕೆ ಇವರೇ ಕಾರಣ. ಅರಣ್ಯ ಇಲಾಖೆಗೆ ಜನರ ಸಮಸ್ಯೆ ತಿಳಿದಿಲ್ಲ. ವೈಜ್ಞಾನಿಕವಾಗಿ ಪರಿಹಾರ ಹುಡುಕುವಲ್ಲಿ ಇಲಾಖೆ ವಿಫಲವಾಗಿದೆ. ಸರಕಾರವೂ ಜನರನ್ನು ಮರೆತಿದೆ ಎಂದು ದೂರಿದರು.

ಅತಂತ್ರ ಪರಿಸ್ಥಿತಿ ನಿರ್ಮಾಣ - ಮನು ಸೋಮಯ್ಯ

ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ಜಿಲ್ಲೆಯ ಎಲ್ಲಾ ವರ್ಗದ ಜನರನ್ನು ಕಾಡುತ್ತಿರುವ ವನ್ಯಜೀವಿ ಮಾನವ ಸಂಘರ್ಷ ವಿಷಯದಲ್ಲಿ ಸರಕಾರ ಕಿವುಡತನ ಪ್ರದರ್ಶಿಸುತ್ತಿದೆ. ಕಾಟಾಚಾರಕ್ಕೆ ಕ್ರಮವಹಿಸಿದ್ದೇವೆ ಎಂಬ ಸಬೂಬು ಹೇಳಿ ಜನರಿಂದ ನುಣುಚಿಕೊಳ್ಳುವ ಯತ್ನ ಮಾಡುತ್ತಿದೆ. ಜವಾಬ್ದಾರಿಯುತ ಜನಪ್ರತಿನಿಧಿಗಳು ಶಾಶ್ವತ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದ ಅವರು, ರೈತರು ತೋಟ, ಗದ್ದೆ ಮಾರಿ ನಗರಕ್ಕೆ ವಲಸೆ ಹೋಗುವ ಸ್ಥಿತಿ ಸೃಷ್ಟಿಯಾಗಿದೆ. ಅರಣ್ಯ ಇಲಾಖೆ ಕೇವಲ ಪ್ರಯೋಗಗಳನ್ನು ನಡೆಸುತ್ತಿದೆ ಹೊರತು ವೈಜ್ಞಾನಿಕ ಪರಿಹಾರಕ್ಕೆ ಚಿಂತಿಸುತ್ತಿಲ್ಲ. ನಮ್ಮ ಬದುಕು, ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸುತ್ತಾರೆ ಎಂದು ಹಲವು ಅವಕಾಶಗಳನ್ನು ನೀಡಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಅರಣ್ಯದಲ್ಲಿ ಪ್ರವಾಸೋದ್ಯಮ ರೂಪಿಸುವುದರಿಂದ ಜನರಿಗೆ ಸಮಸ್ಯೆಯಾಗುತ್ತದೆ. ವನ್ಯಜೀವಿಗಳು ಅರಣ್ಯ ಪ್ರವೇಶಿಸುತ್ತವೆ. ಇದನ್ನು ಸ್ಥಗಿತಗೊಳಿಸಬೇಕು. ಕಾಡನ್ನು ಕಾಡಾಗಿಯೇ ಉಳಿಸುವಂತೆ ಒತ್ತಾಯಿಸಿದ ಮನು ಸೋಮಯ್ಯ, ಇದನ್ನು ಪ್ರಶ್ನಿಸಿದರೆ ನಾವು ಬೇಟೆಗಾರರ ಪರ ಇರುವುದಾಗಿ ಬಿಂಬಿಸುವ ಕೆಲಸ ಇಲಾಖೆಯ ಅಧಿಕಾರಿಗಳು ಮಾಡುತ್ತಿದ್ದಾರೆ. ಬೇಟೆಯನ್ನು ಬೆಂಬಲಿಸುವುದಾದರೆ ‘ನಾವು ಹಸಿರು ಶಾಲು ಧರಿಸಿ ಬರುವುದಿಲ್ಲ. ಕೋವಿ ಹಿಡಿದು ಬರುತ್ತಿದ್ದೆವು’ ಎಂದು ಅರಣ್ಯ ಇಲಾಖೆ ವಿರುದ್ಧ ಹರಿಹಾಯ್ದರು.

ಪಕ್ಷಾತೀತವಾಗಿ ಒಂದಾಗಬೇಕು - ವೀಣಾ ಅಚ್ಚಯ್ಯ

ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಮಾತನಾಡಿ, ಹಲವು ಬಾರಿ ವನ್ಯಜೀವಿ ಹಾವಳಿಯ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ್ದೇನೆ. ಆದರೆ, ಸರಕಾರದಿಂದ ಯಾವುದೇ

(ಮೊದಲ ಪುಟದಿಂದ) ಸ್ಪಂದನ ಇದುವರೆಗೂ ದೊರೆತಿಲ್ಲ. ಈ ಸಮಸ್ಯೆಯಿಂದ ಎಲ್ಲಾ ವರ್ಗದವರು ತೊಂದರೆಗೀಡಾಗಿದ್ದಾರೆ. ಅರಣ್ಯ ಇಲಾಖೆ ಕಾನೂನಿನ ಹೆಸರಿನಲ್ಲಿ ಜನರಿಗೆ ಕಿರುಕುಳ ನೀಡುತ್ತಿದೆ. ಇದರ ವಿರುದ್ಧ ಕಾನೂನು ಹೋರಾಟ ಅತ್ಯಗತ್ಯ ಎಂದ ಅವರು, ಸರಕಾರ ಯಾವುದೇ ಇರಲಿ. ಕೊಡಗಿನ ಉಳಿವಿಗೆ ಪ್ರತಿಯೊಬ್ಬರು ಒಂದಾಗಬೇಕು. ಅನ್ಯಾಯದ ವಿರುದ್ಧ ಧ್ವನಿಎತ್ತಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾನೂನು ಹೋರಾಟ ಅಗತ್ಯ - ಎ.ಎಸ್.ಪೊನ್ನಣ್ಣ

ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಮಾತನಾಡಿ, ಆತಂಕದ ನಡುವೆ ನಾವೆಲ್ಲ ಜೀವನ ಸಾಗಿಸುವ ಸ್ಥಿತಿ ಸೃಷ್ಟಿಯಾಗಿದೆ. ಜಿಲ್ಲೆಯ ೪ ದಿಕ್ಕುಗಳಲ್ಲಿಯೂ ಅರಣ್ಯ ಸುತ್ತುವರೆದಿದೆ. ಜಿಲ್ಲೆ ಬಹುತೇಕ ಅರಣ್ಯ ಇಲಾಖೆಯ ನಿಯಂತ್ರಣದಲ್ಲಿದೆ. ವ್ಯವಸ್ಥಿತವಾಗಿ ಜನರನ್ನು ಒಕ್ಕಲೆಬ್ಬಿಸಿ ಜಿಲ್ಲೆಯನ್ನೇ ಅರಣ್ಯ ಮಾಡುವ ಷಡ್ಯಂತ್ರವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕೊಡಗಿನ ಅಸ್ತಿತ್ವ ಉಳಿಸಲು ಕಾನೂನಿನ ಹೋರಾಟ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಜನ ರಾಜಕೀಯ, ಜಾತಿ, ಧರ್ಮವನ್ನು ಬದಿಗೊತ್ತಿ ಒಂದಾಗಬೇಕು ಎಂದು ಪೊನ್ನಣ್ಣ ಕರೆ ನೀಡಿದರು.

ಕಾರ್ಮಿಕ ಮುಖಂಡ ಪಿ.ಆರ್. ಭರತ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ೧೨೫ ಮಂದಿ ವನ್ಯಜೀವಿ ದಾಳಿಯಿಂದ ಸಾವನ್ನಪ್ಪಿದ್ದಾರೆ. ಹಲವು ಮಂದಿ ಶಾಶ್ವತ ಅಂಗವೈಫಲ್ಯದಿAದ ಬಳಲುತ್ತಿದ್ದಾರೆ. ರೈತರು ಬೆಳೆ ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅರಣ್ಯ ಸಂರಕ್ಷಣೆ ಹೆಸರಿನಲ್ಲಿ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ. ಇದನ್ನು ಜನ ಅರಿತುಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಮಿಕ ಮುಖಂಡ ಎನ್.ಡಿ. ಪುಟ್ಟಪ್ಪ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರದ ಧೋರಣೆ ವಿರೋಧನೀಯ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ರೈತ ಹೋರಾಟದ ರೀತಿಯಲ್ಲಿ ತಾರ್ಕಿಕ ಅಂತ್ಯದ ತನಕ ನಾವು ಹೋರಾಡಬೇಕು. ನ್ಯಾಯಯುತ ಹೋರಾಟಕ್ಕೆ ಇಡೀ ಸಮಾಜ ಸಹಕಾರ ನೀಡಬೇಕೆಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಮಾತನಾಡಿ, ಕಸ್ತೂರಿ ರಂಗನ್, ಸೂಕ್ಷö್ಮ ಪ್ರದೇಶ ಎಂಬ ನೀತಿ ಅನುಷ್ಠಾನದ ಮೂಲಕ ಜಿಲ್ಲೆಯನ್ನು ಕಾಡು ಮಾಡಲು ಸರಕಾರ ಹೊರಟಿದೆ. ಇದರ ವಿರುದ್ಧ ಒಗ್ಗೂಡಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ವ್ಯತಿರಿಕ್ತ ಪರಿಣಾಮ ಬೀರುವುದು ಖಂಡಿತ ಎಂದರು.

ಸಾಮಾಜಿಕ ಹೋರಾಟಗಾರ ನಂದ ಸುಬ್ಬಯ್ಯ ಮಾತನಾಡಿ, ಮನುಷ್ಯನ ಜೀವನ, ಜೀವವನ್ನು ಚಿಂತಿಸುವವರು ಯಾರೂ ಇಲ್ಲದಂತ ಸನ್ನಿವೇಶ ಸೃಷ್ಟಿಯಾಗಿದೆ. ಕೆಲವು ಸ್ವಯಂ ಸೇವಾ ಸಂಸ್ಥೆಗಳು ನ್ಯಾಯಾಂಗವನ್ನು ದುರುಪಯೋಗಪಡಿಸಿಕೊಂಡು ಸಮಸ್ಯೆ ಸೃಷ್ಟಿಸುತ್ತಿವೆ ಎಂದು ಆರೋಪಿಸಿದರು.

ಸಾಮಾಜಿಕ ಕಾರ್ಯಕರ್ತ ಇಸ್ಮಾಯಿಲ್, ಆದಿವಾಸಿ ಮುಖಂಡ ಪಿ.ಸಿ.ರಾಮು, ಎ.ಐ.ಟಿ.ಯು.ಸಿ. ಜಿಲ್ಲಾಧ್ಯಕ್ಷ ಸೋಮಪ್ಪ, ಸೋಮವಾರಪೇಟೆ ರೈತ ಸಂಘದ ಪ್ರಮುಖ ಪೂವಯ್ಯ ಸೇರಿದಂತೆ ಇನ್ನಿತರರು ಮಾತನಾಡಿದರು.

ಈ ಸಂದರ್ಭ ಮೈಸೂರು ಜಿಲ್ಲಾಧ್ಯಕ್ಷ ಬಸವರಾಜು, ಮಂಡ್ಯ ಜಿಲ್ಲಾಧ್ಯಕ್ಷ ಪ್ರಸನ್ನ ಗೌಡ, ಕೊಡಗು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಸಂಘಟನಾ ಕಾರ್ಯದರ್ಶಿ ಪುಚ್ಚಿಮಾಡ ಸುಭಾಷ್, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಆಲೆಮಾಡ ಮಂಜುನಾಥ್, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಮುಖಂಡರುಗಳಾದ ರಾಯ್ ಮಾದಪ್ಪ, ಚೆಟ್ಟಂಗಡ ಕಂಬ ಕಾರ್ಯಪ್ಪ, ಚಂಗುಲAಡ ಸೂರಜ್, ಮಂಡೇಪAಡ ಬೋಪಣ್ಣ, ಕಾನೂನು ಸಲಹೆಗಾರ ಹೇಮಚಂದ್ರ, ಗಿರಿ ಉತ್ತಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.