ಮಡಿಕೇರಿ, ಅ. ೨: ಮಕ್ಕಂದೂರು ಪ್ರೌಢಶಾಲಾ ಶಿಕ್ಷಕರಿಗೆ ಹತ್ತನೇ ತರಗತಿಯಲ್ಲಿ ಶಾಲೆಯು ಸತತವಾಗಿ ಶೇ. ೧೦೦ರ ಫಲಿತಾಂಶ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸಾಧನೆಯ ಹಿಂದಿರುವ ಶಿಕ್ಷಕ ವೃಂದವನ್ನು ದ.ಸಂ.ಸ. ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ದ.ಸಂ. ಸಮಿತಿಯ ಮಡಿಕೇರಿ ಜಿಲ್ಲಾ ಸಂಚಾಲಕ ದಿವಾಕರ್ ಹೆಚ್.ಎಲ್. ಪ್ರಾಸ್ತಾವಿಕವಾಗಿ ಮಾತನಾಡಿ ಸಂಘಟನೆಯು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಕಳೆದ ಮೂರು ದಶಕಗಳಿಂದ ಹಾಗೂ ಸರ್ಕಾರಿ ಶಾಲೆಯಲ್ಲಿ ಶೇ.ನೂರು ಫಲಿತಾಂಶ ಬಂದAತಹ ಶಾಲಾ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಹತ್ತು ವರ್ಷಗಳಿಂದ ಮಾಡುತ್ತಾ ಬಂದಿದ್ದು, ಮಡಿಕೇರಿ ನಗರಸಭೆಗೆ ಒಳಪಟ್ಟ ಮೂರು ಪ್ರಾಥಮಿಕ ಶಾಲೆಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಹತ್ತು ವರ್ಷಗಳಿಂದ ನೀಡುತ್ತಾ ಬಂದಿದೆ.

ಕೆಲ ವರ್ಷಗಳಿಂದ ಪದವಿ ವಿದ್ಯಾರ್ಥಿಗಳಿಗೆ ಐಎಎಸ್ ಮತ್ತು ಐಪಿಎಸ್ ತರಬೇತಿ ಶಿಬಿರ ಏರ್ಪಡಿಸುತ್ತಿದ್ದು, ಇದೆಲ್ಲಾ ಎಲ್ಲಾ ಕಾರ್ಯಕ್ರಮಗಳ ಮುಖ್ಯ ಉದ್ದೇಶ ಶಿಕ್ಷಣದ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣ ಮಾಡುವುದಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಸ್ಕೌಟ್ ಗೈಡ್ಸ್ನ ಬೇಬಿ ಮ್ಯಾಥ್ಯೂ ದಲಿತ ಸಂಘರ್ಷ ಸಮಿತಿ ಬಹಳಷ್ಟು ವರ್ಷಗಳಿಂದ ಇಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಇದು ಅನುಕರಣೀಯ ಕಾರ್ಯ. ಸರ್ಕಾರಿ ಶಾಲೆಯಲ್ಲಿ ಸಿಗುವ ಶಿಕ್ಷಣ ಉತ್ತಮವಾಗಿರುತ್ತದೆಯಲ್ಲದೆ, ಇಲ್ಲಿನ ಶಿಕ್ಷಕರು ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಾರೆ ಎಂದರು.

ಮತ್ತೋರ್ವ ಅತಿಥಿಯಾಗಿ ಭಾಗವಹಿಸಿದ ಕೆ.ನಿಡುಗಣೆ ಗ್ರಾ. ಪಂ ಸದಸ್ಯ ಜಾನ್ಸನ್ ಪಿಂಟೋ ಮಾತನಾಡಿ ಉತ್ತಮ ಸಮಾಜದ ನಿರ್ಮಾಣದ ಸಲುವಾಗಿ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಧಾರೆ ಎರೆಯುತ್ತಿರುವ ಶಿಕ್ಷಕರನ್ನು ಸನ್ಮಾನಿಸುವ ಕಾರ್ಯಕ್ರಮಗಳನ್ನು ದಲಿತ ಸಂಘರ್ಷ ಸಮಿತಿ ಮಾಡುತ್ತಿರುವುದು ಅಭಿನಂದನೀಯ ಎಂದರು.

ಮತ್ತೋರ್ವ ಅತಿಥಿ ಪತ್ರಕರ್ತ ಚಂದನ್ ನಂದರಬೆಟ್ಟು ಮಾತನಾಡಿ ಸಮಾಜದಲ್ಲಿ ಇಂದು ನಾವು ಗೌರವವನ್ನು ಪಡೆದುಕೊಳ್ಳುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಶಿಕ್ಷಕರು, ಅವರನ್ನು ಗೌರವಿಸುತ್ತಿರುವ ಡಿಎಸ್‌ಎಸ್‌ನ ಕಾರ್ಯ ಮಹತ್ವದ್ದು ಎಂದರು.

ಶಿಕ್ಷಕ ವೃಂದದವರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಸಂಚಾಲಕ ದೀಪಕ್ ಪೊನ್ನಪ್ಪ ಮಾತನಾಡಿ ಗುರುಗಳ ಮಹತ್ವದ ಕುರಿತಾಗಿ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಎಲ್ಲರಿಗೂ ಶಿಕ್ಷಣವನ್ನು ನೀಡುತ್ತಾ ವಿದ್ಯಾರ್ಥಿಗಳೆಲ್ಲರನ್ನೂ ಉನ್ನತ ಮಟ್ಟದಲ್ಲಿ ನೋಡುತ್ತಾ ಅವರು ಮಾತ್ರ ಅದೇ ಸ್ಥಾನದಲ್ಲಿದ್ದು ಸಂತೋಷಪಡುತ್ತಾರೆ ಎಂದರೆ ಅದು ಶಿಕ್ಷಕರಿಂದ ಮಾತ್ರ ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಡಿ.ಎಸ್.ಎಸ್ ಸಂಘಟನಾ ಕಾರ್ಯದರ್ಶಿ ವೇಲುಸ್ವಾಮಿ, ನಗರಸಂಚಾಲಕ ಸಿದ್ದೇಶ್ವರ್, ಮುಖ್ಯ ಶಿಕ್ಷಕ ಶುಕ್ರದೇವೇಗೌಡ, ಅಕ್ಷಯ್, ಮಹೇಶ್ ಹಾಗೂ ಶಿಕ್ಷಕ ವೃಂದದವರು ಮತ್ತು ಮಕ್ಕಳು ಹಾಜರಿದ್ದರು.