ಸಿದ್ದಾಪುರ, ಸೆ. ೨೨: ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ವತಿಯಿಂದ ಕೊಡಗು ಜಿಲ್ಲೆಯ ಉರಗ ತಜ್ಞರಿಗೆ ವೃತ್ತಿ ಕಾರ್ಯಾಗಾರ ಸಿದ್ದಾಪುರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಉಪಾಧ್ಯಕ್ಷ ಬೋಸ್ ಮಾದಪ್ಪ, ಹಾವುಗಳು, ಜೀವನ ಕ್ರಮ, ಸೆರೆ ಹಿಡಿಯುವ ವಿಧಾನ ಮುಂತಾದವುಗಳ ಬಗ್ಗೆ ಉರಗ ತಜ್ಞರಿಗೆ ಮಾಹಿತಿ ನೀಡಿದರು. ಹಾವುಗಳನ್ನು ಸೆರೆ ಹಿಡಿಯುವ ಸಂದರ್ಭ ಮುನ್ನೆಚ್ಚರಿಕೆ ವಹಿಸಬೇಕು. ಸೆರೆಯಾದ ಹಾವುಗಳನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡುವ ವಿಧಾನಗಳ ಬಗ್ಗೆ ಮಾತನಾಡಿದರು.

ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಸಿ.ಪಿ. ಅಯ್ಯಪ್ಪ ಮಾತನಾಡಿ, ಜಿಲ್ಲೆಯ ಹಲವು ಭಾಗಗಳಲ್ಲಿ ಹಾವನ್ನು ಸೆರೆ ಮಾಡುವ ಉರಗ ಪ್ರೇಮಿಗಳಿದ್ದು, ಜನರಿಗೆ ಮಾಹಿತಿಯ ಕೊರತೆ ಇದೆ. ಹಾಗಾಗಿ ಉರಗ ತಜ್ಞರ ಊರು, ದೂರವಾಣಿ ಸಂಖ್ಯೆಯೊAದಿಗೆ ಮಾಹಿತಿಯನ್ನು ಎಲ್ಲಾ ಭಾಗಗಳಲ್ಲೂ ತಲುಪಿಸಬೇಕಾಗಿದ್ದು, ಆಯಾಯ ಭಾಗದಲ್ಲಿ ಹಾವು ಕಾಣಿಸಿಕೊಂಡಾಗ ಸ್ಥಳೀಯ ಉರಗ ತಜ್ಞರನ್ನು ಕರೆಸಲು ಸುಲಭವಾಗಲಿದೆ. ಹಾವನ್ನು ರಕ್ಷಿಸುವ ಉರಗ ಪ್ರೇಮಿಗಳಿಗೆ ಅರಣ್ಯ ಇಲಾಖೆಯಿಂದ ಗುರುತಿನ ಚೀಟಿ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.

ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಅಧ್ಯಕ್ಷ ಕೆ.ಎ. ಚಂಗಪ್ಪ ಮಾತನಾಡಿ, ಉರಗ ಪ್ರೇಮಿಗಳು ತಮ್ಮ ಜೀವದ ಹಂಗು ತೊರೆದು ಹಾವನ್ನು ರಕ್ಷಣೆ ಮಾಡುತ್ತಿದ್ದಾರೆ. ಅವರಿಗೆ ವಿಮೆ ಮಾಡಿಸಲು ಪ್ರಯತ್ನಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು ೧೫ ಉರಗ ತಜ್ಞರು ಭಾಗವಹಿಸಿದ್ದರು. ಈ ಸಂದರ್ಭ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಸದಸ್ಯರಾದ ಪಟ್ಟಡ ಶ್ಯಾಂ ಅಯ್ಯಪ್ಪ, ಪಟ್ಟಡ ಬೋಪಣ್ಣ, ಕರ್ನಲ್ ಸಿ.ಪಿ. ಮುತ್ತಣ್ಣ, ವಿಶಾಲ್ ಪೊನ್ನಪ್ಪ, ಕೊಂಗೇರ ವಿಜಯ ಸೇರಿದಂತೆ ಇನ್ನಿತರರು ಇದ್ದರು.