ಮಡಿಕೇರಿ, ಆ. ೧೬: ವಿಶ್ವಮಟ್ಟದಲ್ಲಿ ಜರುಗುವ ಪ್ರತಿಷ್ಠಿತ ಕ್ರೀಡಾಕೂಟವಾದ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಈ ಬಾರಿ ಕೊಡಗಿನ ಇಬ್ಬರು ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಿದ್ದರು. ಬ್ಯಾಡ್‌ಮಿಂಟನ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಸ್ಕಾ÷್ವಷ್‌ನಲ್ಲಿ ಜೋಶ್ನಾ ಚಿಣ್ಣಪ್ಪ ಭಾಗವಹಿಸಿದ್ದರು. ಈ ಇಬ್ಬರು ಕ್ರೀಡಾಪಟುಗಳು ಸತತ ನಾಲ್ಕು ಕಾಮನ್‌ವೆಲ್ತ್ನಲ್ಲಿ ದೇಶವನ್ನು ಪ್ರತಿನಿಧಿಸಿರುವುದು ಕ್ರೀಡಾಜಿಲ್ಲೆ ಖ್ಯಾತಿಯ ಕೊಡಗಿಗೆ ಹಿರಿಮೆಯಾಗಿದೆ.

ಇದೀಗ ಮುಕ್ತಾಯಗೊಂಡ ೨೦೨೨ರ ಕ್ರೀಡಾಕೂಟದಲ್ಲಿ ಅಶ್ವಿನಿಪೊನ್ನಪ್ಪ ಬೆಳ್ಳಿ ಪದಕದ ಸಾಧನೆ ಮಾಡಿದ್ದಾರೆ. ಜೋಶ್ನಾ ಕೂಡ ಸ್ಕಾ÷್ವಷ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರೂ ಅವರಿಗೆ ಈ ಬಾರಿ ಪದಕಗಳಿಸುವ ಅವಕಾಶ ಸಿಗಲಿಲ್ಲ. ಆದರೆ ಇವರಿಬ್ಬರು ನಾಲ್ಕು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ತೋರಿರುವ ಪ್ರದರ್ಶನ ಗಮನಾರ್ಹವಾಗಿದೆ. ೨೦೧೦, ೨೦೧೪, ೨೦೧೮ ಹಾಗೂ ೨೦೨೨ರಲ್ಲಿ ಅಶ್ವಿನಿ ಹಾಗೂ ಜೋಶ್ನಾ ಕಾಮನ್‌ವೆಲ್ತ್ನಲ್ಲಿ ಪಾಲ್ಗೊಂಡಿದ್ದಾರೆ.

ಅಶ್ವಿನಿ ಸಾಧನೆ

ಬ್ಯಾಡ್‌ಮಿಂಟನ್‌ನಲ್ಲಿ ಭಾರತ ಪ್ರತಿನಿಧಿಸುತ್ತಿರುವ ಅಶ್ವಿನಿಪೊನ್ನಪ್ಪ ನಾಲ್ಕು ಕಾಮನ್‌ವೆಲ್ತ್ನಲ್ಲೂ ಪದಕ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ೨೦೧೦ರಲ್ಲಿ ಜ್ವಾಲಾಗುಟ್ಟಾ ಜತೆ ಡಬಲ್ಸ್ನಲ್ಲಿ ಚಿನ್ನದ ಪದಕ ಹಾಗೂ ತಂಡ ವಿಭಾಗದಲ್ಲಿ ಕಂಚಿನ ಪದಕ, ೨೦೧೪ರಲ್ಲಿ ಜ್ಞಾಲಗುಟ್ಟಾ ಜತೆ ಬೆಳ್ಳಿ ಪದಕ, ೨೦೧೮ರಲ್ಲಿ ಸಿಕಿರೆಡ್ಡಿ ಜತೆ ಕಂಚಿನ ಪದಕ ಹಾಗೂ ತಂಡ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಅಶ್ವಿನಿ ಭಾಜನರಾಗಿದ್ದಾರೆ. ಈ ಬಾರಿ (೨೦೨೨) ನಡೆದ ಕ್ರೀಡಾಕೂಟದ ತಂಡ ವಿಭಾಗದಲ್ಲಿ ಅಶ್ವಿನಿ ಬೆಳ್ಳಿ ಪದಕ ಗಳಿಸುವದ ರೊಂದಿಗೆ ನಾಲ್ಕೂ ಕ್ರೀಡಾಕೂಟಗಳಲ್ಲಿ ಪದಕಗಳಿಸಿ ಗಮನ ಸೆಳೆದಿದ್ದಾರೆ.

ಜೋಶ್ನಾರಿಂದಲೂ ಸಾಧನೆ

ಸ್ಕಾ÷್ವಷ್ ಕ್ರೀಡಾಪಟು ಜೋಶ್ನಾ ಕೂಡ ನಾಲ್ಕು ಕಾಮನ್‌ವೆಲ್ತ್ ಆಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ೨೦೧೦ರಲ್ಲಿ ಇವರಿಗೆ ಪದಕ ಸಿಗಲಿಲ್ಲ. ಆದರೆ ೨೦೧೪ರ ಕ್ರೀಡಾಕೂಟದಲ್ಲಿ ದೀಪಿಕಾಪಳ್ಳಿಕಲ್ ಜತೆಗೆ ಚಿನ್ನದ ಪದಕ, ೨೦೧೮ರಲ್ಲಿ ಬೆಳ್ಳಿಯ ಪದಕವನ್ನು ಇವರು ಪಡೆದಿದ್ದಾರೆ.

ಇದೀಗ ಮುಕ್ತಾಯಗೊಂಡ ೨೦೨೨ರ ಕ್ರೀಡಾಕೂಟದಲ್ಲಿ ಜೋಶ್ನಾ ೩ ವಿಭಾಗದಲ್ಲಿ ಆಡಿದ್ದಾರೆ. ಆದರೆ ಈ ಬಾರಿ ಅವರಿಗೆ ಪದಕದ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಕ್ರೀಡಾಕೂಟಕ್ಕೆ ಮುಂಚೆ ಆಕೆಯ ಕಾಲಿಗೆ ಪೆಟ್ಟಾಗಿದ್ದು, ಅವರಿಗೆ ಹಿನ್ನಡೆಯಾಗಿದೆ. ಆದರೂ ಸಿಂಗಲ್ಸ್ನಲ್ಲಿ ಹಾಗೂ ಮಿಕ್ಸೆಡ್ ಡಬಲ್ಸ್ನಲ್ಲಿ ಕ್ವಾರ್ಟರ್ ಫೈನಲ್ ಹಂತ ಹಾಗೂ ಡಬಲ್ಸ್ನಲ್ಲಿ ಪ್ರಿಕ್ವಾರ್ಟರ್ ಹಂತಕ್ಕೆ ತಲುಪಿ ಇವರು ಸಾಧನೆ ತೋರಿದ್ದಾರೆ. ಮುಂಬರಲಿರುವ ಏಷ್ಯಾಕಪ್‌ನಲ್ಲಿ ಪದಕದ ಸಾಧನೆಯ ನಿರೀಕ್ಷೆಯಲ್ಲಿ ಇವರಿದ್ದಾರೆ. -ಶಶಿ ಸೋಮಯ್ಯ