ಕುಶಾಲನಗರ, ಆ. ೧೬: ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಕುಶಾಲನಗರ ಪಟ್ಟಣದಲ್ಲಿ ೭೫ ಗಿಡಗಳನ್ನು ನೆಡಲಾಯಿತು. ಕುಶಾಲನಗರ ಅರಣ್ಯ ಇಲಾಖೆ ಆಶ್ರಯದಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಮತ್ತು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಹಯೋಗದೊಂದಿಗೆ ನಡೆದ ‘ಗಿಡ ಸಂಭ್ರಮ' ಕಾರ್ಯಕ್ರಮದಲ್ಲಿ ಕುಶಾಲನಗರ ಸರಕಾರಿ ಬಸ್ ನಿಲ್ದಾಣ ಆವರಣದಲ್ಲಿ ಮತ್ತು ಪಟ್ಟಣದ ಶೈಲಜಾ ಬಡಾವಣೆಯ ಬಳಿ ನದಿ ತಟದಲ್ಲಿ ಒಟ್ಟು ೭೫ ಗಿಡಗಳನ್ನು ನೆಡಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್ ಮಾತನಾಡಿ, ಪಟ್ಟಣದ ಹಸಿರೀಕರಣ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಸಹಯೋಗದೊಂದಿಗೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪ್ರತಿ ಬಡಾವಣೆಯಲ್ಲಿ ಗಿಡಗಳನ್ನು ನೆಡುವ ಯೋಜನೆ ಮುಂದುವರೆದಿದೆ. ಕುಶಾಲನಗರ ಪಟ್ಟಣದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಪ್ರಮುಖರು ಕಳೆದ ಹಲವಾರು ವರ್ಷಗಳಿಂದ ಪಟ್ಟಣದ ವಿವಿಧ ಸಾರ್ವಜನಿಕ ಪ್ರದೇಶಗಳಲ್ಲಿ ನೂರಾರು ಗಿಡಗಳನ್ನು ನೆಟ್ಟು ಬೆಳೆಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಚಂದ್ರಮೋಹನ್ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಆವರಣವನ್ನು ಪಟ್ಟಣ ಪಂಚಾಯಿತಿ ಪೌರಕಾರ್ಮಿಕರು ಸ್ವಚ್ಛಗೊಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕುಶಾಲನಗರ ವಲಯ ಅರಣ್ಯ ಅಧಿಕಾರಿ ಶಿವರಾಮ್ ಮಾತನಾಡಿ ಪ್ರತಿಯೊಬ್ಬರೂ ಉತ್ತಮ ಪರಿಸರ ನಿರ್ಮಾಣ ಹಿನ್ನೆಲೆಯಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವ ಕಾರ್ಯದಲ್ಲಿ ಕೈಜೋಡಿಸಬೇಕೆಂದು ಕರೆ ನೀಡಿದರು. ಪಟ್ಟಣ ಪಂಚಾಯಿತಿ ಸದಸ್ಯರಾದ ಪ್ರಮೋದ್ ಮುತ್ತಪ್ಪ, ಪಟ್ಟಣ ಪಂಚಾಯಿತಿ ಆರೋಗ್ಯ ಅಧಿಕಾರಿ ಉದಯ್ ಕುಮಾರ್, ವೈಲ್ಡ್ ಲೈಫ್ ಸೊಸೈಟಿಯ ಕಾರ್ಯದರ್ಶಿ ಸಿ.ಪಿ. ಅಯ್ಯಪ್ಪ, ಸರ್ಕಾರಿ ಬಸ್ ನಿಲ್ದಾಣದ ನಿಯಂತ್ರಣ ಅಧಿಕಾರಿ ಶಾಮ ಶೆಟ್ಟಿ, ಕರ್ನಾಟಕ ಕಾವಲು ಪಡೆ ಜಿಲ್ಲಾಧ್ಯಕ್ಷ ಎಂ. ಕೃಷ್ಣ, ಅರಣ್ಯ ಇಲಾಖೆ ಉಪ ವಲಯ ಅರಣ್ಯ ಅಧಿಕಾರಿ ದೇವಯ್ಯ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಡಿ.ಆರ್. ಸೋಮಶೇಖರ್ ಮತ್ತು ಅರಣ್ಯ ಇಲಾಖೆ ಆರ್‌ಆರ್‌ಟಿ ತಂಡದ ಸಿಬ್ಬಂದಿಗಳು ಇದ್ದರು.