ಗೋಣಿಕೊಪ್ಪ ವರದಿ, ಆ. ೧೬: ಅಖಿಲ ಅಮ್ಮಕೊಡವ ಸಮಾಜದ ವತಿಯಿಂದ ಕಿತ್ತಳೆ ಬೆಳೆಗಾರರ ಸಂಘದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಕ್ಕಡ ಪದ್‌ನೆಟ್ಟ್ ಕಾರ್ಯಕ್ರಮದಲ್ಲಿ ಕಕ್ಕಡ ತಿಂಗಳ ವಿಶೇಷ ತಿಂಡಿಗಳ ಪ್ರದರ್ಶನದ ಮೂಲಕ ಅಮ್ಮ ಕೊಡವತಿಯರು ಸಂಭ್ರಮಿಸಿದರು.

ಕಕ್ಕಡ ಆಚರಣೆ ವಿಶೇಷ ತಿನಿಸುಗಳಾದ ಔಷಧೀಯ ಗುಣಗಳುಳ್ಳ ತಿನಿಸು ಪ್ರದರ್ಶನಕ್ಕೆ ಇಡಲಾಗಿತ್ತು. ಪುರಾತನ ಕಾಲದಿಂದ ಅಮ್ಮಕೊಡವರು ಕಕ್ಕಡ ತಿಂಗಳಲ್ಲಿ ವಿಶೇಷವಾಗಿ ಬಳಸುವ ತಿನಿಸುಗಳು ಗಮನ ಸೆಳೆದವು. ಕೇಂಬು ಪಜ್ಜಿ, ಕೈಪುಳಿ ಪಜ್ಜಿ, ಈಂಡಿಕೊಡಿ ಪಜ್ಜಿ, ಎಲಿಕೆಮಿ ಪಜ್ಜಿ, ದೊಡ್ಪಾತ್ರೆ ಸೊಪ್ಪು ಪಜ್ಜಿ, ಪೇರಳಿ ಪಜ್ಜಿ, ಜೇನು, ಮದ್ದ್ಪುಟ್ಟ್, ಮದ್ದ್ಕೂಳ್, ಕೇಂಬೆಲೆ ಪುಟ್ಟ್, ಮಾವಿನ ಹಣ್ಣಿನ ಸಾರು, ಕೇಂಬು ಸಾರು ಪ್ರದರ್ಶನ ನೀಡಿದರು. ಅತಿಥಿಗಳು ತಿನಿಸುಗಳ ರುಚಿ ನೋಡಿ ಕುಶಿಪಟ್ಟರು.

ವಿಜೇತರು : ಪುರುಷರಿಗೆ ನಡೆದ ಏರ್‌ಗನ್‌ನಲ್ಲಿ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪುತ್ತಾಮನೆ ಅನಿಲ್ ಪ್ರಸಾದ್ ಪ್ರಥಮ, ಪುತ್ತಾಮನೆ ಯತೀಶ್ ದ್ವಿತೀಯ, ಹೆಮ್ಮಚ್ಚಿಮನೆ ಚಮನ್ ತೃತೀಯ ಸ್ಥಾನ ಪಡೆದುಕೊಂಡರು. ಮಹಿಳೆಯರಿಗೆ ನಡೆದ ಪಾಸಿಂಗ್‌ದ ಬಾಲ್ ಸ್ಪರ್ಧೆಯಲ್ಲಿ ಹೆಮ್ಮಚ್ಚಿನಮನೆ ರಮ್ಯ (ಪ್ರ), ಬಲ್ಯಂಡ ಕಾಂತಿ (ದ್ವಿ), ಕೊಂಡಿಜಮ್ಮAಡ ಕಸ್ತೂರಿ (ತೃ), ಬಿಂದಿ ಅಂಟಿಸುವ ಸ್ಪರ್ಧೆಯಲ್ಲಿ ನೆರೆಯಂಡಮ್ಮAಡ ಗೀತಾ (ಪ್ರ), ಪುತ್ತಾಮನೆ ಪೂಜಾ (ದ್ವಿ), ಬಲ್ಯಂಡ ಕಾಂತಿ (ತೃ). ಬಹುಮಾನ ಪಡೆದರು.

ಸಭಾ ಕಾರ್ಯಕ್ರಮ : ಮಾಜಿ ಎಂಎಲ್ಸಿ ಚೆಪ್ಪುಡೀರ ಅರುಣ್ ಮಾಚಯ್ಯ ಸನ್ಮಾನ ಸ್ವೀಕರಿಸಿ ಮಾತನಾಡಿ, ಹಿಂದಿನ ಕಾಲದ ತಿನಿಸು ಉತ್ತಮ ಆರೋಗ್ಯಕ್ಕೆ ಸಹಕಾರಿ. ಮುಂದಿನ ಪೀಳಿಗೆಗೆ ಆಹಾರ ಪದ್ಧತಿಯನ್ನು ಪರಿಚಯಿಸಬೇಕು ಎಂದು ಸಲಹೆ ನೀಡಿದರು.

ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಎನ್ ಪ್ರತ್ಯು ಮಾತನಾಡಿ, ಜನಾಂಗದ ಒಗ್ಗಟ್ಟಿಗೆ ಎಲ್ಲರ ಸಹಕಾರ ಅಗತ್ಯವಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗುವುದರಿಂದ ಜನಾಂಗ ಅಭಿವೃದ್ದಿಯಾಗಲಿದೆ ಎಂದರು.

ಕಾವೇರಿ ಅಮ್ಮಕೊಡವ ಮಹಿಳಾ ಸಂಘ ಅಧ್ಯಕ್ಷೆ ರೇವತಿ ಪರಮೇಶ್ವರ ಮಾತನಾಡಿ, ಅಮ್ಮಕೊಡವರು ಹಿಂದಿನಿAದಲೂ ಕಾವೇರಿ ಮಾತೆಯನ್ನು ಶುದ್ಧ ಮನಸ್ಸಿನಿಂದ ಪೂಜಿಸುತ್ತಾ ಬರುತ್ತಿದ್ದಾರೆ. ಇದಕ್ಕೆ ಸರಿಯಾಗಿ ಕಾವೇರಿ ಮಾತೆ ನಮ್ಮನ್ನು ಹರಸುತ್ತಿದ್ದಾಳೆ. ಎಂತಹದ್ದೇ ಪರಿಸ್ಥಿತಿ ಬಂದರೂ ಅಮ್ಮಕೊಡವರನ್ನು ಕೈಬಿಡುತ್ತಿಲ್ಲ. ಅತಿವೃಷ್ಠಿ ಸಂದರ್ಭ ಕೂಡ ಅಮ್ಮಕೊಡವರನ್ನು ರಕ್ಷಣೆ ಮಾಡಿದ್ದಾಳೆ. ದೇವಿ ಆರಾಧನೆಗೆ ಮಹಿಳೆಯರು ವಿಶೇಷವಾಗಿ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ವಿದ್ಯಾಭಿವೃದ್ದಿ ಸಂಘದ ಅಧ್ಯಕ್ಷ ಉಮೇಶ್ ಕೇಚಮಯ್ಯ ಮಾತನಾಡಿ, ಕಕ್ಕಡ ಸಂದರ್ಭದ ಹಣ್ಣು, ತಿನಿಸುಗಳನ್ನು ಆಹಾರ ಪದ್ದತಿಯಲ್ಲಿ ಅಳವಡಿಸಿಕೊಳ್ಳಲು ಸಲಹೆ ನೀಡಿದರು.

ಹಿರಿಯರಾದ ನೆರೆಯಂಡಮ್ಮAಡ ಪ್ರಭು ಮಾತನಾಡಿ, ಮಕ್ಕಳಿಗೆ ಕಾಡು ಹಣ್ಣು ತಿನ್ನಿಸುವ ಅಭ್ಯಾಸವನ್ನು ಪಾಲಕರು ಮಾಡಬೇಕಿದೆ. ಹಲಸು, ಮಾವು ಸೇರಿದಂತೆ ಕಾಡಿನಲ್ಲಿ ದೊರೆಯುವ ಹಣ್ಣುಗಳ ಸೇವನೆ ಆರೋಗ್ಯ ಪೂರಕ ಎಂಬುವುದನ್ನು ತಿಳಿಸಬೇಕಿದೆ ಎಂದರು.

ಕಿರುಗೂರು ಗ್ರಾ.ಪಂ. ಅಧ್ಯಕ್ಷ ಪುತ್ತಾಮನೆ ಜೀವನ್, ಜಿ.ಪಂ. ಮಾಜಿ ಸದಸ್ಯ ಮುರಳಿ ಕರುಂಬಮಯ್ಯ, ಕಾನೂರು ಗ್ರಾ.ಪಂ. ಸದಸ್ಯೆ ಧರಣಿ, ಪೊನ್ನಂಪೇಟೆ ಗ್ರಾ.ಪಂ. ಸದಸ್ಯೆ ಅಮ್ಮತ್ತೀರ ಆಶಾ ಇದ್ದರು.