*ಗೋಣಿಕೊಪ್ಪ, ಆ. ೫: ಕಾವೇರಿ ಪದವಿಪೂರ್ವ ಕಾಲೇಜುವಿನ ರಾಷ್ಟಿçÃಯ ಸೇವಾ ಯೋಜನೆಯ ಶೈಕ್ಷಣಿಕ ವರ್ಷದ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಎಂ.ಎನ್. ಚಂದ್ರಮೋಹನ್ ಉದ್ಘಾಟಿಸಿ, ಮಾತನಾಡಿ, ನದಿ, ತೊರೆಗಳ ರಕ್ಷಣೆಗೆ ಖಾಯಂ ಜವಬ್ದಾರಿಯುತ ಸ್ಥಾನ ಇಲ್ಲದ ಕಾರಣ ಅನೈರ್ಮಲ್ಯ ಹೆಚ್ಚಾಗುತ್ತಿದೆ. ಯುವ ಸಮೂಹ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ. ಎನ್‌ಎಸ್‌ಎಸ್ ಮೂಲಕ ವಿದ್ಯಾರ್ಥಿ ಜೀವನದಲ್ಲಿ ಆಸಕ್ತಿ ರೂಡಿಸಿಕೊಂಡಾಗ ಪರಿಸರಕ್ಕೂ ಲಾಭವಾಗುತ್ತದೆ.

ಶಿಸ್ತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಪ್ರಾಂಶುಪಾಲ ಸಣ್ಣುವಂಡ ಎಸ್. ಮಾದಯ್ಯ ಮಾತನಾಡಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತದೆ. ಸಾಕಷ್ಟು ಪ್ರತಿಭೆಗಳಿಗೆ ವೇದಿಕೆಯಾಗಲಿದೆ. ಶಿಬಿರಗಳಿಂದ ಸಾಕಷ್ಟು ಕಲಿಯಲು ಅವಕಾಶ ದೊರೆಯಲಿದೆ ಎಂದರು.

ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವಿಶೇಷ ಶಕ್ತಿ ಹೊರಹೊಮ್ಮಲು ಎನ್‌ಎಸ್‌ಎಸ್ ಸಹಕಾರಿಯಾಗುತ್ತಿದೆ. ವಿಶೇಷವಾಗಿ ಗುರುತಿಸಿಕೊಳ್ಳಲು ತಮ್ಮ ಪ್ರತಿಭೆಗೆ ಪ್ರೋತ್ಸಾಹ ಕಲ್ಪಿಸಿಕೊಳ್ಳಬೇಕು ಎಂದರು.

ಎನ್‌ಎಸ್‌ಎಸ್ ಅಧಿಕಾರಿ ಕೆ.ಎಂ. ಕುಸುಮ್, ವಿದ್ಯಾರ್ಥಿ ಸಲಹಾ ಸಮಿತಿ ಅಧ್ಯಕ್ಷೆ ಪಿ.ಎಸ್. ದಿವ್ಯ ಇದ್ದರು. ಗ್ರೀಷ್ಮ, ವಿಪ್ರ ನೀಲಮ್ಮ ಕಾರ್ಯಕ್ರಮ ನಡೆಸಿಕೊಟ್ಟರು.