ಮತ್ತೆ ರೆಪೋ ದರ ಹೆಚ್ಚಿಸಿದ ಆರ್‌ಬಿಐ: ಹಣದುಬ್ಬರದ ಆತಂಕ!

ನವದೆಹಲಿ, ಆ. ೫: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ಮತ್ತೆ ರೆಪೋ ದರವನ್ನು ಶೇಕಡ ೦.೫೦ರಷ್ಟು ಹೆಚ್ಚಿಸಿದೆ. ಇದರೊಂದಿಗೆ ಬಡ್ಡಿ ದರ ಈಗ ಶೇ. ೫.೪೦ಕ್ಕೆ ಏರಿಕೆಯಾಗಿದೆ. ಇದು ೨೦೧೯ರಿಂದ ಗರಿಷ್ಠ ಏರಿಕೆಯಾಗಿದೆ. ಇಂದು ಮುಂಬೈನಲ್ಲಿ ಹಣಕಾಸು ನೀತಿ ಪ್ರಕಟಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು, ರೆಪೋ ದರವನ್ನು ೫೦ ಬೇಸಿಸ್ ಪಾಯಿಂಟ್ಸ್ಗಳಷ್ಟು ಹೆಚ್ಚಳ ಮಾಡುತ್ತಿರುವುದಾಗಿ ಘೋಷಿಸಿದರು. ನೂತನ ರೆಪೋ ದರ ಹೆಚ್ಚಳವು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ. ಕೇಂದ್ರೀಯ ಬ್ಯಾಂಕ್ ದೇಶವನ್ನು ನಿರಂತರ ಬೆಳವಣಿಗೆಯ ಹಾದಿಯಲ್ಲಿ ಇರಿಸಲು ಮತ್ತು ಬೆಲೆ ಸ್ಥಿರತೆಗೆ ಬದ್ಧವಾಗಿದೆ. ಹಣದುಬ್ಬರ ನಿಯಂತ್ರಣ ಮತ್ತು ಆರ್ಥಿಕ ಸ್ಥಿರತೆಗಾಗಿ ರೆಪೋ ದರ ಹೆಚ್ಚಳ ಅನಿವಾರ್ಯ ವಾಗಿದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ. ಆರ್‌ಬಿಐ ಈಗ ಸತತ ಮೂರನೇ ಬಾರಿಗೆ ರೆಪೋ ದರ ಹೆಚ್ಚಳ ಮಾಡಿದೆ. ಹಣದುಬ್ಬರ ಪ್ರಮಾಣವನ್ನು ನಿಯಂತ್ರಿಸುವ ಸಲುವಾಗಿ ಆರ್‌ಬಿಐ ಈ ನಿರ್ಧಾರ ಕೈಗೊಂಡಿದೆ. ಆರ್‌ಬಿಐ, ರೆಪೋ ದರವನ್ನು ಕಳೆದ ಮೇ ತಿಂಗಳಲ್ಲಿ ಶೇ. ೦.೪೦ ಹಾಗೂ ಜೂನ್‌ನಲ್ಲಿ ಶೇ. ೦.೫೦ ಹೆಚ್ಚಳ ಮಾಡಿತ್ತು. ರೆಪೋ ದರ ಹೆಚ್ಚಳದಿಂದ ಗೃಹ ಸಾಲ, ವಾಹನ ಸಾಲದ ಮೇಲಿನ ಬಡ್ಡಿದರ ಮತ್ತಷ್ಟು ಹೆಚ್ಚಳವಾಗಲಿದೆ.

ಸಂಸತ್ ಎದುರು ಪ್ರತಿಭಟನೆ ನಡೆಸಿದ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕರು ವಶಕ್ಕೆ

ನವದೆಹಲಿ, ಆ. ೫: ಬೆಲೆ ಏರಿಕೆ, ಹಣದುಬ್ಬರ ಹಾಗೂ ನಿರುದ್ಯೋಗಗಳ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸಂಸತ್ ಭವನದ ಎದುರು ಪ್ರತಿಭಟನೆ ನಡೆಸುತ್ತಿದ್ದ ಹಲವು ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಪ್ಪುಬಟ್ಟೆ ಧರಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಸಂಸತ್ ಭವನದ ಎದುರು ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಉತ್ತರಾಖಂಡ್ ಮಾಜಿ ಸಿಎಂ ಹರೀಶ್ ರಾವತ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದು ಬಸ್‌ನಲ್ಲಿ ಕರೆದೊಯ್ದಿದ್ದಾರೆ. ಪೊಲೀಸ್ ಅನುಮತಿ ನಿರಾಕರಣೆಯ ಹೊರತಾಗಿಯೂ ಕಾಂಗ್ರೆಸ್ ನಾಯಕರು ಪ್ರತಿಭಟನೆ ಮುಂದುವರೆಸಿದ್ದರು.

ಪಿಎಸ್‌ಐ ಹಗರಣ: ಮತ್ತೆ ೮ ಮಂದಿ ಬಂಧನ

ಕಲಬುರಗಿ, ಆ. ೫: ಪಿಎಸ್‌ಐ ಸಿಇಟಿ ಹಗರಣದ ಸಂಬAಧ ಸಿಐಡಿ ಅಧಿಕಾರಿಗಳು ಮತ್ತೆ ೮ ಮಂದಿಯನ್ನು ಕಲಬುರಗಿಯಲ್ಲಿ ಬಂಧಿಸಿ ಕೋರ್ಟ್ ಎದುರು ಹಾಜರುಪಡಿಸಿದ್ದಾರೆ. ಪಿಎಸ್‌ಐ ಸಿಇಟಿಯಲ್ಲಿ ಹೈದರಾಬಾದ್ ಕರ್ನಾಟಕ ಕೋಟಾದ ಅಡಿಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದ ಜೇವರ್ಗಿಯ ಭಾಗ್ಯವಂತರಾಯ ಜೋಗೂರ್, ರಾಯಚೂರಿನಲ್ಲಿ ಈಗ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ, ಸಿಇಟಿಯಲ್ಲಿ ೪ನೇ ಶ್ರೇಣಿ ಪಡೆದಿದ್ದ ಕಲ್ಲಪ್ಪ ಸಿದ್ದಪ್ಪ ಅಲ್ಲಾಪುರ್, ಹೈದರಾಬಾದ್ ಕರ್ನಾಟಕ ಕೋಟಾದಡಿ ೨೨ನೇ ಶ್ರೇಣಿ ಪಡೆದಿದ್ದ ಶ್ರೀಶೈಲ್ ಹಚ್ಛಾದ್, ರವಿರಾಜ್, ಪೀರಪ್ಪ ಸಿಂದಾಳ್, ಸಿದ್ದುಗೌಡ ಶರಣಪ್ಪ ಪಾಟೀಲ್, ಸೋಮನಾಥ್ ಹಾಗೀ ವಿಜಯ್ ಕುಮಾರ್ ಗುಡೂರ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿ ಸಿದ್ದುಗೌಡ ಪಾಟಿಲ್, ಹಗರಣದ ಪ್ರಮುಖ ಆರೋಪಿ, ಕಿಂಗ್‌ಪಿನ್ ಆರ್.ಡಿ. ಪಾಟೀಲ್ ಅವರ ಪತ್ನಿಯ ಸಹೋದರನಾಗಿದ್ದು, ಪ್ರಸ್ತುತ ಆತ ಯಾದಗಿರಿ ಜಿಲ್ಲೆಯ ಮುದ್ನಾಳ್‌ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಫ್‌ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಮುಖ ಆರೋಪಿ ನೀಡಿದ್ದ ಮಾಹಿತಿಯ ಆಧಾರದಲ್ಲಿ ೮ ಮಂದಿಯನ್ನು ಬಂಧಿಸಲಾಗಿದೆ. ಡಿವೈಎಸ್ ಪಿಗಳಾದ ಶಂಕರ್ ಗೌಡ ಪಾಟಿಲ್, ಪ್ರಕಾಶ್ ರಾಥೋಡ್, ವೀರೇಂದ್ರಕುಮಾರ್ ಹಾಗೂ ಡಿಟೆಕ್ಟಿವ್ ವಿಂಗ್‌ನ ಪಿಎಸ್‌ಐಗಳಾದ ಆನಂದ್, ಯಶ್ವಂತ್ ಹಾಗೂ ಶಿವಪ್ರಸಾದ್ ನೆಲ್ಲೂರ್ ಅವರಿರುವ ತಂಡ ಆರೋಪಿಗಳ ವಿಚಾರಣೆ ನಡೆಸುತ್ತಿದೆ.

ಪುನೀತ್ ರಾಜ್‌ಕುಮಾರ್‌ಗೆ ಮರಣೋತ್ತರ ‘ಕರ್ನಾಟಕ ರತ್ನ'

ಬೆಂಗಳೂರು, ಆ. ೫: ಉದ್ಯಾನ ನಗರಿಯ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರö್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವಕ್ಕೆ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ ಮುಖ್ಯ ಆಕರ್ಷಣೆ. ಕೋವಿಡ್-೧೯ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳ ಕಾಲ ರದ್ದಾಗಿದ್ದ ಫಲಪುಷ್ಪ ಪ್ರದರ್ಶನ ಈ ವರ್ಷ ಮತ್ತೆ ಆರಂಭವಾಗಿದೆ. ಇಂದು ಲಾಲ್ ಬಾಗ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದರು. ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ಈ ಬಾರಿ ಪುಷ್ಪ ಪ್ರದರ್ಶನ ನಡೆಯುತ್ತಿರುವುದು ವಿಶೇಷ. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಗೌರವವನ್ನು ನವೆಂಬರ್ ೧ ಕನ್ನಡ ರಾಜ್ಯೋತ್ಸವದಂದು ನೀಡಲಾಗುವುದು ಎಂದು ಪ್ರಕಟಿಸಿದರು. ನವೆಂಬರ್ ೧ ರಂದು ಕರ್ನಾಟಕ ರತ್ನ ನೀಡಲು ತಯಾರಿ ಮಾಡಲಿದ್ದು, ಇದಕ್ಕಾಗಿ ಸಣ್ಣ ಸಮಿತಿ ರಚನೆ ಮಾಡಿದ್ದೇವೆ. ಆ ದಿನ ರಾಜ್ ಕುಮಾರ್ ಕುಟುಂಬ ಉಪಸ್ಥಿತವಿರುತ್ತದೆ ಎಂದರು. ತಾ. ೧೫ ವರೆಗೆ ಪುಷ್ಪ ಪ್ರದರ್ಶನ ನಡೆಯಲಿದ್ದು, ಪುನೀತ್ ರಾಜ್‌ಕುಮಾರ್ ಪರಿಕಲ್ಪನೆಯಲ್ಲಿ ವಿನ್ಯಾಸ ಮಾಡಲಾಗಿದ್ದು, ೨.೫ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ ೭೦ ರೂಪಾಯಿಗಳಿದ್ದರೆ, ವಾರಂತ್ಯದಲ್ಲಿ ೭೫ ರೂಪಾಯಿಗಳನ್ನು ನಿಗದಿ ಪಡಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ ಹೇಳಿದ್ದಾರೆ. ಸಮವಸ್ತç ಧರಿಸಿ ಬರುವ ಶಾಲಾ ಮಕ್ಕಳಿಗೆ ಈ ಪ್ರದರ್ಶನ ಉಚಿತವಾಗಿರಲಿದೆ.

ಚೀನಾದಿಂದ ತೈವಾನ್ ವಿರುದ್ಧ ೧೦೦ ಯುದ್ಧ ವಿಮಾನಗಳ ಬಲ ಪ್ರದರ್ಶನ

ಬೀಜಿಂಗ್, ಆ. ೫: ಈ ವಾರ ತೈವಾನ್‌ಗೆ ಭೇಟಿ ನೀಡಿದ ಅಮೇರಿಕಾ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ವಿರುದ್ಧ ಚೀನಾ ವಿದೇಶಾಂಗ ಸಚಿವಾಲಯ ಶುಕ್ರವಾರ ನಿರ್ಬಂಧಗಳನ್ನು ಘೋಷಿಸಿದೆ. ಪೆಲೋಸಿ ಅವರು ಚೀನಾದ ಆಂತರಿಕ ವ್ಯವಹಾರಗಳಲ್ಲಿ ಗಂಭೀರವಾಗಿ ಮಧ್ಯಪ್ರವೇಶಿಸುತ್ತಿದ್ದಾರೆ ಮತ್ತು ಚೀನಾದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆಯನ್ನು ಗಂಭೀರವಾಗಿ ಹಾಳು ಮಾಡುತ್ತಿದ್ದಾರೆ. ಹೀಗಾಗಿ ಪೆಲೋಸಿ ಮತ್ತು ಅವರ ಕುಟುಂಬದ ಮೇಲೆ ನಿರ್ಬಂಧಗಳನ್ನು ವಿಧಿಸುತ್ತಿರುವುದಾಗಿ ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿದೆ. ಆದರೆ ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಆದರೆ ಇಂತಹ ನಿರ್ಬಂಧಗಳು ಸಾಮಾನ್ಯವಾಗಿ ಸಾಂಕೇತಿಕ ಸ್ವರೂಪದಲ್ಲಿರುತ್ತವೆ. ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿಯಿಂದ ಆಕ್ರೋಶಗೊಂಡಿರುವ ಚೀನಾ ಕಳೆದ ಎರಡು ದಿನಗಳಿಂದ ತೈವಾನ್ ಸುತ್ತಮುತ್ತಲಿನ ಪ್ರದೇಶದಲ್ಲಿ ದೊಡ್ಡ ಸೇನಾ ತಾಲೀಮು ನಡೆಸುತ್ತಿದ್ದು, ಅದರಲ್ಲಿ ೧೦೦ಕ್ಕೂ ಹೆಚ್ಚು ಯುದ್ಧ ವಿಮಾನಗಳು ಮತ್ತು ೧೦ ಯುದ್ಧ ನೌಕೆಗಳು ಭಾಗವಹಿಸಿವೆ ಎಂದು ಬೀಜಿಂಗ್ ಶುಕ್ರವಾರ ಪ್ರಕಟಿಸಿದೆ. ಇನ್ನು ತೈವಾನ್ ಜಲಸಂಧಿಯಲ್ಲಿ ಚೀನೀ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರವಾಗಿ ಖಂಡಿಸಿದ ಅಮೇರಿಕಾ, ಇದು ತೈವಾನ್ ಜಲಸಂಧಿಯಾದ್ಯAತ ಮತ್ತು ಆ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವ ದೀರ್ಘಾವಧಿಯ ಉದ್ದೇಶಕ್ಕೆ ವಿರುದ್ಧವಾದ ಕ್ರಮ ಎಂದು ಹೇಳಿದೆ. ಅಲ್ಲದೆ ನಾವೂ ಎಲ್ಲದ್ದಕ್ಕೂ ಸಿದ್ಧರಾಗಿದ್ದೇವೆ ಎಂದು ಎಚ್ಚರಿಕೆ ನೀಡಿದೆ.

ಭಾರೀ ಮಳೆಗೆ ಬೆಂಗಳೂರಿನಲ್ಲಿ ಬಾಯ್ತೆರೆದ ಮ್ಯಾನ್‌ಹೋಲ್‌ಗಳು!

ಬೆಂಗಳೂರು, ಆ. ೫: ಬೆಂಗಳೂರು ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಒಳಚರಂಡಿಗಳಲ್ಲಿ ನೀರಿನ ಹೆಚ್ಚುವರಿ ಹರಿವು ಮತ್ತು ಒತ್ತಡದ ಹೆಚ್ಚಳದಿಂದಾಗಿ ಕಳೆದ ೮ ರಿಂದ ೧೦ ದಿನಗಳಲ್ಲಿ ನಗರದಾದ್ಯಂತ ಸುಮಾರು ೧೦೩ ಮ್ಯಾನ್‌ಹೋಲ್‌ಗಳು ತೆರೆದಿವೆ. ಹೀಗಾಗಿ ರಸ್ತೆಗಳು ಚರಂಡಿ ನೀರು ಮತ್ತು ಹೊಲಸು ಕಾಲುವೆಗಳಾಗಿ ಮಾರ್ಪಟ್ಟಿವೆ. ಬೆಂಗಳೂರು ಸಂಚಾರಿ ಪೊಲೀಸ್ ಅಧಿಕಾರಿಗಳು ಈ ಸ್ಥಳಗಳನ್ನು ಗುರುತಿಸಿದ್ದಾರೆ. ಮಾತ್ರವಲ್ಲದೆ, ಈ ಮ್ಯಾನ್‌ಹೋಲ್‌ಗಳನ್ನು ಸರಿಪಡಿಸಲು ಬೆಂಗಳೂರು ಒಳಚರಂಡಿ ಮಂಡಳಿ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಬಿ.ಆರ್. ರವಿಕಾಂತೇಗೌಡ, ಈ ತೆರೆದ ಮ್ಯಾನ್‌ಹೋಲ್‌ಗಳು ಸಂಭಾವ್ಯ ಸಾವಿನ ಬಲೆಗಳಾಗಿವೆ. ಹೊಸದಾಗಿ ನಿರ್ಮಿಸಲಾದ ಮನೆಗಳು ತಮ್ಮ ಆವರಣದಿಂದ ನೀರನ್ನು ಭೂಗತ ಚರಂಡಿಗಳಿಗೆ ಬಿಡುತ್ತವೆ. ಇದು ಈಗಾಗಲೇ ಅಸ್ತಿತ್ವದಲ್ಲಿರುವ ಒಳಚರಂಡಿಗಳ ಒತ್ತಡವನ್ನು ಹೆಚ್ಚಿಸುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ನಾವು ಬೆಂಗಳೂರು ಒಳಚರಂಡಿ ಮಂಡಳಿಯೊAದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು. ಕಳೆದ ಕೆಲವು ದಿನಗಳಲ್ಲಿ ರಸ್ತೆಗಳಲ್ಲಿನ ಹೊಂಡಗಳು ದೊಡ್ಡದಾಗಿ ಮತ್ತು ಆಳವಾಗಿವೆ ಎಂದು ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮಳೆಗಾಲದ ಮುನ್ನವೇ ಬಿಬಿಎಂಪಿ ಆದ್ಯತೆ ಮೇರೆಗೆ ಈ ಗುಂಡಿಗಳನ್ನು ಸರಿಪಡಿಸಬೇಕಿತ್ತು ಎಂದರು.