*ಸಿದ್ದಾಪುರ ಆ. ೫: ವಾಲ್ನೂರು ಗ್ರಾಮ ವ್ಯಾಪ್ತಿಯಲ್ಲಿ ಮಹಾ ಮಳೆಯಿಂದ ನೂರಾರು ಎಕರೆ ಪ್ರದೇಶದ ಕಾಫಿ ಫಸಲು ಕೊಳೆ ರೋಗಕ್ಕೆ ತುತ್ತಾಗಿದೆ. ಆದರೆ ಇಲ್ಲಿಯವರೆಗೆ ಅಧಿಕಾರಿಗಳು ಬೆಳೆ ನಷ್ಟದ ಸರ್ವೆ ಕಾರ್ಯಕ್ಕೆ ಆಸಕ್ತಿ ತೋರಿಲ್ಲವೆಂದು ಬೆಳೆಗಾರರು ಹಾಗೂ ಗ್ರಾ.ಪಂ. ಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜುಲೈ ತಿಂಗಳಿನಲ್ಲಿ ಸುರಿದ ಭಾರೀ ಗಾಳಿ, ಮಳೆಗೆ ಈ ಭಾಗದ ಬಹುತೇಕ ಕಾಫಿ ತೋಟಗಳು ಕೊಳೆ ರೋಗಕ್ಕೆ ತುತ್ತಾಗಿವೆ. ತಿಂಗಳಾAತ್ಯದಲ್ಲಿ ಕಂಡು ಬಂದ ಬಿಸಿಲಿನಿಂದ ಕೊಂಚ ನಿಟ್ಟುಸಿರು ಬಿಡುವ ಹೊತ್ತಿನಲ್ಲೇ ಇದೀಗ ಮತ್ತೆ ಮಳೆ ತೀವ್ರತೆಯನ್ನು ಪಡೆದು ಕೊಂಡಿದೆ. ಇದರಿಂದ ಸಂಪೂರ್ಣ ಬೆಳೆ ಕೊಳೆತು ಉದುರಲಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಗ್ರಾ.ಪಂ. ಸದಸ್ಯರುಗಳಾದ ಭುವನೇಂದ್ರ, ಚಂದ್ರಕಾAತ್, ಹೆಚ್.ಎಸ್. ಕಾರ್ಯಪ್ಪ ಹಾಗೂ ವಿವೇಕ್ ಕೊಳೆ ರೋಗ ವ್ಯಾಪಿಸುತ್ತಿರುವ ಕುರಿತು ಕಳೆದ ತಿಂಗಳು ಕುಶಾಲನಗರ ತಾಲೂಕು ತಹಶೀಲ್ದಾರ್ ಅವರ ಗಮನ ಸೆಳೆದು ನಷ್ಟದ ಸರ್ವೆಗೆ ಮನವಿ ಸಲ್ಲಿಸಿದ್ದರು. ಆದರೆ ಇಲ್ಲಿಯವರೆಗೆ ಯಾವುದೇ ಅಧಿಕಾರಿಗಳು ವಾಲ್ನೂರಿನ ತೋಟಗಳಿಗೆ ಭೇಟಿ ನೀಡಿಲ್ಲವೆಂದು ಅವರುಗಳು ಆರೋಪಿಸಿದ್ದಾರೆ.

ನಿರಂತರ ಮಳೆ ಮತ್ತು ಹವಾಗುಣದ ವೈಪರೀತ್ಯದಿಂದ ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು, ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಕಂದಾಯ ಇಲಾಖೆ ಹಾಗೂ ಕಾಫಿ ಮಂಡಳಿಯ ಅಧಿಕಾರಿಗಳು ವಾಲ್ನೂರು ಭಾಗದಲ್ಲಿ ಕಾಫಿ ಕೊಳೆ ರೋಗದ ಸರ್ವೆ ನಡೆಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಆ ಮೂಲಕ ಸೂಕ್ತ ಪರಿಹಾರ ಬಿಡುಗಡೆಗೆ ಶಿಫಾರಸ್ಸು ಮಾಡಬೇಕೆಂದು ಗ್ರಾ.ಪಂ. ಸದಸ್ಯರು ಒತ್ತಾಯಿಸಿದ್ದಾರೆ.