ಶನಿವಾರಸಂತೆ, ಆ. ೫: ಮನೆ ಮನೆಗೆ ತೆರಳಿ ತಾಳೆಗರಿಯಲ್ಲಿದ್ದ ವಚನಗಳನ್ನು ಸಂಗ್ರಹಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಡಾ. ಘ.ಗು. ಹಳಕಟ್ಟಿ ಅವರ ಕಾರ್ಯಕ್ಕೆ ಸಮಸ್ತ ಕನ್ನಡ ನಾಡು ಕೃತಜ್ಞವಾಗಿದೆ ಎಂದು ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಸೋಮಶೇಖರ್ ಅಭಿಪ್ರಾಯಪಟ್ಟರು. ಸಮೀಪದ ಕೊಡ್ಲಿಪೇಟೆಯ ಹಲಸಿನಮರ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಡಾ. ಘ.ಗು. ಹಳಕಟ್ಟಿ ಜನ್ಮದಿನದ ಪ್ರಯುಕ್ತ ನಡೆದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ವಿದ್ಯಾಸಂಸ್ಥೆ ಉಪಾಧ್ಯಕ್ಷ ಶಂಭುಲಿAಗಪ್ಪ ಮಾತನಾಡಿ, ಡಾ. ಘ.ಗು. ಹಳಕಟ್ಟಿ ಅವರು ಕನ್ನಡ ನಾಡಿಗೇ ಮಾತ್ರವಲ್ಲ, ಜಗತ್ತಿಗೆ ಅಮೂಲ್ಯವಾದ ವಚನ ಸಾಹಿತ್ಯವನ್ನು ಬೆಳಕಿಗೆ ತಂದರು ಎಂದರು.

ಕಾಲೇಜಿನ ಪ್ರಾಂಶುಪಾಲ ಎಂ.ಆರ್. ನಿರಂಜನ್ ಮಾತನಾಡಿ, ಡಾ. ಘ.ಗು. ಹಳಕಟ್ಟಿ ಅವರು ಶ್ರಮಿಸದೇ ಹೋಗಿದ್ದರೆ ಕನ್ನಡ ನಾಡು ಮತ್ತು ಜಗತ್ತಿನ ವಚನ ಸಾಹಿತ್ಯ ಮುದ್ರಿತ ರೂಪದಲ್ಲಿ ಸಿಗುತ್ತಿರಲಿಲ್ಲ ಎಂದರು.

ಅಧ್ಯಕ್ಷತೆಯನ್ನು ಸಂಸ್ಥೆ ನಿರ್ದೇಶಕ ಯತೀಶ್ ವಹಿಸಿದ್ದರು. ಕಾರ್ಯಕ್ರಮ ಅಂಗವಾಗಿ ಮೈಸೂರಿನ ಕಲಾವಿದ ಪುರುಷೋತ್ತಮ ಮತ್ತು ತಂಡದವರಿAದ ವಚನ ಗೀತ ಗಾಯನ ನಡೆಯಿತು. ಪಿ.ಯು. ಕಾಲೇಜಿನ ಪ್ರಾಂಶುಪಾಲ ಬಾಬು ರಾಜೇಂದ್ರ ಪ್ರಸಾದ್, ಉಪನ್ಯಾಸಕರಾದ ಶಶಿಕಲಾ, ಯೋಗೇಂದ್ರ, ಅಭಿಲಾಷ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್ ಉಪಸ್ಥಿತರಿದ್ದರು.