..

ಕಣಿವೆ, ಆ. ೫ : ಕುಶಾಲನಗರ ಪಟ್ಟಣದಲ್ಲಿ ಹರಿದಿರುವ ಕಾವೇರಿ ನದಿಗೆ ಇಲ್ಲಿನ ಹಲವಾರು ಬಡಾವಣೆಗಳಿಂದ ಹರಿದು ಬರುವ ತ್ಯಾಜ್ಯ ನೀರು ನೇರವಾಗಿ ನದಿಯ ಪರಿಶುದ್ಧ ನೀರಿನಲ್ಲಿ ಸೇರುತ್ತಿದ್ದರೂ ಕೂಡ ಸ್ಥಳೀಯ ಪಂಚಾಯಿತಿ ಆಡಳಿತ ವ್ಯವಸ್ಥೆ ಕ್ರಮ ವಹಿಸುವಲ್ಲಿ ವಿಫಲವಾಗಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ.

ಗುಡ್ಡೆಹೊಸೂರು ಕಡೆಯಿಂದ ಪೂರ್ವಾಭಿಮುಖವಾಗಿ ಹರಿದು ಬಂದ ಕಾವೇರಿ ಕುಶಾಲನಗರ ಪಟ್ಟಣವನ್ನು ‘ಎಲ್’ ಆಕಾರದಲ್ಲಿ ಒಂದು ಸುತ್ತು ಹಾಕಿ ಉತ್ತರಾಭಿಮುಖವಾಗಿ ಕೂಡಿಗೆಯತ್ತ ಹರಿಯುತ್ತಾಳೆ. ಆದರೆ ಅದೇ ಕೂಡಿಗೆಯ ಬಳಿ ದಕ್ಷಿಣಾಭಿಮುಖವಾಗಿ ಹರಿದು ಬರುವ ಹಾರಂಗಿ ನದಿ ಹಳೆ ಕೂಡಿಗೆಯ ಬಳಿ ಇದೇ ಕಾವೇರಿ ಒಡಲಿಗೆ ಸೇರಿ ಮುಂದೆ ಸಾಗಿ ಲೋಕ ಪಾವನಿಯಾಗಿದ್ದಾಳೆ.

ಆದರೆ, ಕುಶಾಲನಗರ ಪಟ್ಟಣದ ಬಹುತೇಕ ಬಡಾವಣೆಗಳ ಸಾವಿರಾರು ಮನೆಗಳಲ್ಲಿ ದಿನಂಪ್ರತಿ ಉತ್ಪತ್ತಿಯಾಗುವ ಗೃಹ ಬಳಕೆಯ ತ್ಯಾಜ್ಯ ನೀರು, ಶೌಚ ಗೃಹಗಳ ಮಲಿನ ನೀರು, ಹೊಟೇಲ್, ಮಾಂಸದ ಮಳಿಗೆಗಳಲ್ಲಿ ಬಳಕೆಯಾಗುವ ನೀರು ನೇರವಾಗಿ ಚರಂಡಿಯಲ್ಲಿ

(ಮೊದಲ ಪುಟದಿಂದ) ಹರಿದು ಕಾವೇರಿ ನದಿ ಸೇರುತ್ತಿರುವುದು ಸಾರ್ವಜನಿಕರಲ್ಲಿ ಕುಡಿಯುವ ಕಾವೇರಿ ನೀರಿನ ಮೇಲೆ ಜಿಗುಪ್ಸೆ ಮೂಡಿಸಿದೆ.

ಅಂದರೆ ಕುಶಾಲನಗರದ ಜಲ ಮಂಡಳಿಯವರು ಮನೆಗಳಿಗೆ ಸರಬರಾಜು ಮಾಡುವ ಕಾವೇರಿ ನೀರಿನ ಮೇಲೆ ವ್ಯಾಕರಿಕೆ ಮೂಡಿಸುವಂತಿದೆ.

ಕುಶಾಲನಗರದ ಮಾದಾಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಮುಂಬದಿ, ಗಂಧದ ಕೋಟಿ ಬಳಿ, ಯೋಗಾನಂದ ಬಡಾವಣೆ, ಬೈಚನಹಳ್ಳಿಯ ಮಾರಮ್ಮ ದೇವಾಲಯದ ಹಿಂಬದಿ ಬಡಾವಣೆಗಳು, ಕನ್ನಡ ಭಾರತಿ ಕಾಲೇಜು ಬಳಿ ಹರಿದಿರುವ ರಾಜಕಾಲುವೆಯ ಮಲಿನ ನೀರು, ದಂಡಿನಪೇಟೆ, ರಸೂಲ್ ಬಡಾವಣೆ, ಆದಿಶಂಕರಾಚಾರ್ಯ ಬಡಾವಣೆ, ಸಾಯಿ ಬಡಾವಣೆ, ಮುಳ್ಳುಸೋಗೆಯ ಕುವೆಂಪು ಬಡಾವಣೆ ಹೀಗೆ ಜನವಸತಿ ಬೆಳೆದು ನಿಂತಿರುವ ಕುಶಾಲನಗರದ ಬಹುತೇಕ ಬಡಾವಣೆಗಳಲ್ಲಿ ಕಲುಷಿತ ನೀರು ನೇರವಾಗಿ ಕಾವೇರಿ ನದಿಯೊಳಗೆ ಸೇರುತ್ತಿದೆ.

ವೈಜ್ಞಾನಿಕ ಕ್ರಮಕ್ಕೆ ಆಗ್ರಹ

ತಗ್ಗು ಪ್ರದೇಶಕ್ಕೆ ಹರಿಯುವ ನೀರನ್ನು ಯಾರೂ ಕೂಡ ತಡೆಯಲಾಗದು ಎಂಬುದು ವಾಸ್ತವಿಕ ಸಂಗತಿ. ಆದರೆ ಸ್ಥಳೀಯ ಸಂಸ್ಥೆಯ ಆಡಳಿತಗಳು ನದಿಗೆ ಮಲೀನ ನೀರು ನೇರವಾಗಿ ಸೇರದಂತೆ ಇಂಗು ಗುಂಡಿಗಳನ್ನು ತೆಗೆಯುವ ಮೂಲಕ ವೈಜ್ಞಾನಿಕ ಪದ್ಧತಿಗಳನ್ನು ಅನುಸರಿಸಬಹುದಲ್ಲವೇ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಹೊಟೇಲ್‌ಗಳ ತ್ಯಾಜ್ಯ ನೀರು, ಮನೆಗಳ ಶೌಚ ನೀರು ನೇರವಾಗಿ ಚರಂಡಿ ಸೇರದಂತೆ ಅಲ್ಲಲ್ಲಿ ಅವರವರ ಪರಿಧಿಯೊಳಗೆ ಇಂಗು ಗುಂಡಿಗಳನ್ನು ತೆರೆದು ಸಾಧ್ಯವಾದ ಕ್ರಮಗಳನ್ನು ಪಾಲಿಸಿದರೆ ನದಿಗೆ ನೇರವಾಗಿ ಸೇರುವ ತ್ಯಾಜ್ಯ ನೀರನ್ನು ತಡೆಯುವ ಪ್ರಾಮಾಣಿಕ ಪ್ರಯತ್ನ ವಾದರೆ ಅದೇ ಕಾವೇರಿಗೆ ಸಲ್ಲಿಸುವ ಗೌರವವಾಗಬಲ್ಲದು.

ಅವೈಜ್ಞಾನಿಕ ಯುಜಿಡಿ ಕಾಮಗಾರಿ

ಕುಶಾಲನಗರ ಪಟ್ಟಣದಲ್ಲಿ ಕಳೆದ ಒಂದೂವರೆ ದಶಕದಿಂದ ನಡೆಯುತ್ತಲೇ ಇರುವ ಅವೈಜ್ಞಾನಿಕ ಒಳಚರಂಡಿ ಕಾಮಗಾರಿಯ ಫಲದಿಂದ ಕುಶಾಲನಗರದ ಕಾವೇರಿ ನದಿಗೆ ಈ ಪ್ರಮಾಣದ ತ್ಯಾಜ್ಯ ನೀರು ಸೇರುತ್ತಿದೆ.

ಏಕೆಂದರೆ ನದಿಯ ದಂಡೆಯ ಉದ್ದಕ್ಕೂ ಕೋಟ್ಯಂತರ ರೂಪಾಯಿಗಳನ್ನು ವ್ಯಯ ಮಾಡಿ ರೂಪಿಸಿರುವ ಬೃಹತ್ ಪೈಪ್ ಲೈನ್ ಕಾಮಗಾರಿಯಿಂದಾಗಿ ಈ ಸಮಸ್ಯೆ ಉದ್ಭವಿಸಿದೆ. ಏಕೆಂದರೆ ಕುಶಾಲನಗರದಲ್ಲಿ ಕಾವೇರಿ ನದಿಯ ಪ್ರವಾಹ ಬಂದ ಸಂದರ್ಭ ನದಿ ದಂಡೆಯ ಆಯಕಟ್ಟಿನ ಪ್ರದೇಶಗಳಲ್ಲಿ ಬಹುತೇಕ ಕಡೆ ಮಣ್ಣು ಕುಸಿತ ಗೊಂಡು ಜಲಮಂಡಳಿಯವರು ಅಳವಡಿಸಿದ್ದ ಪೈಪ್ ಗಳ ಜೋಡಣೆ ಕುಸಿದು ಬಿದ್ದ ಪರಿಣಾಮದಿಂದಾಗಿ ತ್ಯಾಜ್ಯ ನೀರು ನದಿಗೆ ಸೇರುತ್ತಿದೆ.

ಜನರಿಗೆ ಮಾರಕವಾಗುತ್ತಿರುವ ಕಲುಷಿತ ನೀರು

ಕುಶಾಲನಗರದ ಸಾರ್ವಜನಿಕರಿಗೆ ಕುಡಿಯುವ ನೀರು ಹರಿಸಲು ಪಟ್ಟಣದ ಬೈಚನಹಳ್ಳಿಯ ಮಾರಮ್ಮ ದೇವಾಲಯದ ಹಿಂಬದಿಯ ಕಾವೇರಿ ನದಿ ದಂಡೆಯಲ್ಲಿ ನೀರೆತ್ತುವ ಯಂತ್ರಾಗಾರ ಅಳವಡಿಸಲಾಗಿದೆ.

ಅಂದರೆ ಇಲ್ಲಿಂದ ಹಿಂಭಾಗದಲ್ಲಿರುವ ಯೋಗಾನಂದ ಬಡಾವಣೆ, ಗಂಧದ ಕೋಟಿ, ಮಾದಾಪಟ್ಣಣ ಹಾಗೂ ಗುಡ್ಡೆ ಹೊಸೂರು ಭಾಗದ ಮುಖ್ಯ ರಸ್ತೆಯಲ್ಲಿರುವ ಹೊಟೇಲ್‌ಗಳ ತ್ಯಾಜ್ಯ ನೀರು ನದಿಗೆ ಸೇರುವುದರಿಂದ ಆ ನೀರು ಬೈಚನಹಳ್ಳಿಯ ಬಳಿ ಇರುವ ಯಂತ್ರಾಗಾರದ ಮುಖೇನ ಜಲಮಂಡಳಿಯ ನೀರು ಸರಬರಾಜು ತೊಟ್ಟಿಗಳಿಗೆ ಬಂದು ಅಲ್ಲಿಂದ ಮನೆಗಳಿಗೆ ಸರಬರಾಜಾಗುತ್ತಿದೆ. ಇನ್ನು ಬೈಚನಹಳ್ಳಿಯ ಕೆಳ ಭಾಗದಲ್ಲಿನ ಕುಶಾಲನಗರದ ಇನ್ನುಳಿದ ಬಡಾವಣೆಗಳ ನೀರು ನದಿ ಸೇರುತ್ತದೆ.

ಪಿರಿಯಾಪಟ್ಟಣದ ನಿವಾಸಿಗಳಿಗೂ ಕುಶಾಲನಗರದ ತ್ಯಾಜ್ಯ ನೀರು

ಬೈಚನಹಳ್ಳಿಯ ಬಳಿ ಕುಶಾಲನಗರದ ೩೦ ಸಾವಿರ ಜನಸಂಖ್ಯೆಗೆ ಸರಬರಾಜು ಮಾಡುವ ಯಂತ್ರಾಗಾರದ ಬಳಿ ನದಿಯ ಬಲ ದಂಡೆಯಲ್ಲಿ ಪಿರಿಯಾಪಟ್ಟಣದ ನಿವಾಸಿಗಳಿಗೆ ಪೂರೈಸುವ ಯಂತ್ರಾಗಾರವೂ ಇರುವುದರಿಂದ ಕುಶಾಲನಗರದ ಬಡಾವಣೆಗಳ ತ್ಯಾಜ್ಯ ನೀರನ್ನು ಕಾವೇರಿಯ ತೀರ್ಥವೆಂದು ಆ ಭಾಗದ ನಿವಾಸಿಗಳು ಕುಡಿಯುವಂತಾಗಿದೆ. ಅಂದರೆ ಆ ಮಂದಿ ಕಾವೇರಿ ನದಿಗೆ ಸೇರುವ ಕಲುಷಿತ ನೀರನ್ನು ನೋಡುವುದಿಲ್ಲ. ಕುಶಾಲನಗರದ ನಿವಾಸಿಗಳು ನೋಡುತ್ತಿದ್ದೇವೆ. ಇಷ್ಟೇ ಇಲ್ಲಿ ವ್ಯತ್ಯಾಸ. ಆದ್ದರಿಂದ ಎಲ್ಲ ಅವ್ಯವಸ್ಥೆಗಳನ್ನು ಅವೈಜ್ಞಾನಿಕ ಕ್ರಮ ಎಂದು ದೂರುವ ಮುನ್ನ ಕಾವೇರಿ ನೀರು ಕುಡಿಯುವ ಪ್ರತಿ ನಿವಾಸಿಯೂ ಕೂಡ ನಾನು ನನ್ನ ಮನೆಯ ಕಲುಷಿತ ನೀರನ್ನು, ಶೌಚ ನೀರನ್ನು ಚರಂಡಿಗೆ ಹರಿಸುವುದು ಎಷ್ಟು ಸರಿ? ಎಂದು ತಮ್ಮ ತಮ್ಮ ಆತ್ಮ ಸಾಕ್ಷಿಗೆ ಪ್ರಶ್ನಿಸಿಕೊಂಡು ಇನ್ನಾದರೂ ಎಚ್ಚೆತ್ತುಕೊಂಡರೆ ಲೋಕಪಾವನೆ ಕಾವೇರಿಯನ್ನು ಮಾಲಿನ್ಯದಿಂದ ತಡೆಗಟ್ಟಿ ಪುಣ್ಯ ಕಟ್ಟಿಕೊಳ್ಳಬಹುದು.

ಸಾರ್ವಜನಿಕರು, ಸಂಘ ಸಂಸ್ಥೆಗಳು, ಸ್ಥಳೀಯ ಆಡಳಿತ ಸಂಸ್ಥೆಗಳಾದಿಯಾಗಿ ಕಾವೇರಿ ನದಿಯ ನೀರು ಅವಲಂಬಿಸಿರುವ ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಯೋಚಿಸಿದಲ್ಲಿ ಕಾವೇರಿ ಯಾವತ್ತೂ ಕೂಡ ಜೀವ ಸಂಜೀವಿನಿ ಯಾಗುತ್ತಾಳೆ. (ವಿಶೇಷ ವರದಿ: ಕೆ.ಎಸ್. ಮೂರ್ತಿ)