ಹೊದ್ದೂರು, ಜು. ೨೦: ಕೋಡಂಬೂರು ವಿದ್ಯುತ್ ಉಪಕೇಂದ್ರದಿAದ ಹೊದ್ದೂರು ಪಂಚಾಯಿತಿಯ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಲ್ಲಿ ಪದೆ-ಪದೇ ವ್ಯತ್ಯಯ ಉಂಟಾಗುತ್ತಿದೆ. ಇದನ್ನು ಸರಿಪಡಿಸುವ ಸಲುವಾಗಿ ನೂತನ ಫೀಡರ್ ಮಾರ್ಗ ಅಳವಡಿಕೆಗೆ ಮಾರ್ಗದ ಮೋಜಣಿ (ಸರ್ವೆ) ಕಾರ್ಯ ಮುಗಿದಿದೆ. ಮೂರ್ನಾಡಿನ ಸೆಸ್ಕ್ ಕಚೇರಿಯ ಮುಂಭಾಗದ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ “ಗ್ರಾಹಕರ ಆದಾಲತ್” ಸಭೆಯಲ್ಲಿ ಈ ವಿಷಯ ತಿಳಿಸಿದರು.
ಹೊದ್ದೂರು ಪಂಚಾಯಿತಿ ವಿದ್ಯುತ್ ಬಳಕೆದಾರರ ಅಧ್ಯಕ್ಷ ಕೂಡಂಡ ರವಿ ನೀಡಿರುವ ಅರ್ಜಿಯನ್ನು ಪರಿಶೀಲಿಸಿ, ಈ ಕ್ರಮ ಕೈಗೊಳ್ಳಲಾಗಿದೆ. ಡಿಸೆಂಬರ್ ಮಾಸಾಂತ್ಯಕ್ಕೆ ಉದ್ದೇಶಿತ ಕಾಮಗಾರಿ ಮುಗಿಯುವ ನಿರೀಕ್ಷೆ ಹೊಂದಲಾಗಿದೆ. ಫೀಡರ್ ಕಾರ್ಯಾರಂಭ ಮಾಡಿದ್ದಲ್ಲಿ, ಹೊದ್ದೂರು ಪಂಚಾಯಿತಿಯ ಗ್ರಾಮಗಳಾದ ಹೊದ್ದೂರು, ಕುಯ್ಯಂಗೇರಿ, ಕುಂಬಳದಾಳಿಗೆ ಅನಿಯಮಿತವಾಗಿ ವಿದ್ಯುತ್ ಪೂರೈಕೆಗೆ ಸಹಕಾರಿಯಾಗಲಿದೆ ಎಂದು ಮಡಿಕೇರಿ ಉಪ ವಿಭಾಗದ ಕಿರಿಯ ಸಹಾಯಕ ಅಭಿಯಂತರ ವಿನಯ್ ಕುಮಾರ್ ಹೇಳಿದರು.
೧೯೭೦ರಲ್ಲಿ ಅಂದು ಗದ್ದೆಗಳಾಗಿದ್ದ ಕಡೆ ಫೀಡರ್ ಮಾರ್ಗ ಅಳವಡಿಸಲಾಗಿತ್ತು. ಆ ಮಾರ್ಗದ ಇಕ್ಕೆಲಗಳಲ್ಲಿ ಇದೀಗ ಅಡಿಕೆ ತೋಟ, ಬಿದಿರು ಮೆಳೆಗಳು ಬೆಳೆದು ವಿದ್ಯುತ್ ಪ್ರವಹಿಸಲು ಪದೆ-ಪದೇ ಅಡ್ಡಿ- ಆತಂಕಗಳು ಎದುರಾಗುತ್ತಿವೆ. ಖಾಸಗಿ ಜಮೀನಿನ ಮೂಲಕ ಹಾದು ಹೋಗಿರುವ ಹಳೇ ಫೀಡರ್ ಅನ್ನು ಆಗಾಗ್ಗೆ ಸರಿಪಡಿಸುವುದೇ ಸವಾಲಿನಂತಾಗಿದೆ. ಈ ಹಿನ್ನೆಲೆ ನೂತನ ಫೀಡರ್ ಅಳವಡಿಕೆಗೆ ಸಂಸ್ಥೆ ಮುಂದಾಗಿದೆ. ಈ ಬಗ್ಗೆ ಪ್ರಸ್ತಾವನೆಯನ್ನು ಮೇಲಾಧಿಕಾರಿಗಳ ಅನುಮೋದನೆಗಾಗಿ ಸಲ್ಲಿಸಲಾಗಿದೆ ಎಂದು ವಿನಯ್ ವಿವರವಿತ್ತರು.