ಕುಶಾಲನಗರ, ಜೂ.೨೩: ಮಗುವಿನ ನಾಮಕರಣಕ್ಕೆ ಬಂದಿದ್ದ ನೆಂಟರನ್ನು ಆಟೋದಲ್ಲಿ ಕಳುಹಿಸಿ ನಂತರ ಬೈಕಿನಲ್ಲಿ ಕುಶಾಲನಗರ ಕಡೆಗೆ ರಾತ್ರಿ ವೇಳೆ ತೆರಳುತ್ತಿದ್ದ ಸಂದರ್ಭ ಎದುರಿನಿಂದ ಬಂದ ಕಾರಿಗೆ ಬೈಕ್ ಡಿಕ್ಕಿಯಾಗಿ ಮಗುವಿನ ತಂದೆ ಸೇರಿದಂತೆ ಇಬ್ಬರು ಮೃತಪಟ್ಟ ಘಟನೆ ಬುಧವಾರ ರಾತ್ರಿ ಸಮೀಪದ ಗುಡ್ಡೆಹೊಸೂರು ಬಳಿ ಹೆದ್ದಾರಿಯಲ್ಲಿ ನಡೆದಿದೆ.

ಬಸವನಹಳ್ಳಿಯ ನಿವಾಸಿ ರಂಜಿತ್ (೨೬) ಮತ್ತು ಗೋಣಿಕೊಪ್ಪದ ನಿವಾಸಿ ಸಚಿನ್ ಅಲಿಯಾಸ್ ದೀಕ್ಷಿತ್ (೨೪) ಮೃತಪಟ್ಟವರು.

ಬಸವನಹಳ್ಳಿಯ ರಂಜಿತ್ ಪುತ್ರಿಯ ನಾಮಕರಣ ಬುಧವಾರ ಮಧ್ಯಾಹ್ನ ನಡೆದಿದ್ದು ರಾತ್ರಿ ವೇಳೆ ನೆಂಟರನ್ನು ಆಟೋರಿಕ್ಷಾ ಮೂಲಕ ಕುಶಾಲನಗರಕ್ಕೆ ಕಳುಹಿಸಿ ಬಳಿಕ ರಂಜಿತ್ ತಮ್ಮ ಚಿಕ್ಕಪ್ಪನ ಮಗ ಸಚಿನ್ ಜೊತೆಗೆ ಬೈಕ್‌ನಲ್ಲಿ (ಕೆ.ಎ. ೦೩ ಇ.ಟಿ. ೪೫೪) ಕುಶಾಲನಗರಕ್ಕೆ ತೆರಳುತ್ತಿದ್ದ ಸಂದರ್ಭ ಕುಶಾಲನಗರದಿಂದ ಸುಂಟಿಕೊಪ್ಪದ ಕಡೆಗೆ ಸಾಗುತ್ತಿದ್ದ ಕಾರಿಗೆ (ಕೆ.ಎ.೩೨ ಎನ್. ೫೯೦೯) ಗುಡ್ಡೆಹೊಸೂರು ಬಳಿ ಹೆದ್ದಾರಿಯಲ್ಲಿ ಮುಖಾಮುಖಿ ಡಿಕ್ಕಿ ಆಗಿದೆ. ಪರಿಣಾಮ ರಂಜಿತ್ ಸ್ಥಳದಲ್ಲೇ ಮೃತಪಟ್ಟಿದ್ದು, ತೀವ್ರ ಗಾಯಗೊಂಡ ಸಚಿನ್

(ಮೊದಲ ಪುಟದಿಂದ) ಕುಶಾಲನಗರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಗೆ ಸಾಗಿಸ ಲಾಯಿತಾದರೂ ಮಡಿಕೇರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ. ಅತಿಯಾದ ವೇಗ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಪಘಾತದಿಂದ ಬೈಕ್ ಮತ್ತು ಕಾರು ಸಂಪೂರ್ಣ ಹಾನಿಗೊಳಗಾಗಿದೆ.

ಮೃತ ರಂಜಿತ್ ಸ್ಥಳೀಯ ಕಾಫಿತೋಟದಲ್ಲಿ ರೈಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ೩ ತಿಂಗಳ ಮಗುವಿಗೆ ನಾಮಕರಣ ಸಮಾರಂಭ ಬುಧವಾರ ನಡೆದಿತ್ತು. ಅಪಘಾತದಲ್ಲಿ ಮೃತಪಟ್ಟ ಸಚಿನ್ ಅಲಿಯಾಸ್ ದೀಕ್ಷಿತ್ ಅವಿವಾಹಿತನಾಗಿದ್ದು, ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಗೋಣಿಕೊಪ್ಪದಲ್ಲಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ.

ಕುಶಾಲನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಸಂಚಾರಿ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿಕೊಂಡು ಕಾರಿನ ಚಾಲಕ ಸುಂಟಿಕೊಪ್ಪ ಇಲಿಯಾಸ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.