ಸಿದ್ದಾಪುರ, ಜೂ. ೨೨: ಗ್ರಾಮ ಪಂಚಾಯಿತಿ ಸದಸ್ಯರುಗಳೇ ಲೆಕ್ಕಪರಿಶೋಧನೆ ಸಭೆಗೆ ಗೈರಾದ ಹಾಗೂ ಗ್ರಾಮಸ್ಥರ ಹಾಜರಾತಿ ಕೊರತೆ ಇದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಒತ್ತಾಯದ ಮೇರೆಗೆ ಸಿದ್ದಾಪುರ ಗ್ರಾಮ ಪಂಚಾಯಿತಿಯ ಸಾಮಾಜಿಕ ಲೆಕ್ಕ ಪರಿಶೋಧನೆ ಸಭೆಯನ್ನು ಮುಂದೂಡಲಾಯಿತು. ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೨೦೨೧-೨೨ ನೇ ಸಾಲಿನ ಸಾಮಾಜಿಕ ಲೆಕ್ಕಪರಿಶೋಧನಾ ಸಭೆಯು ಗ್ರಾ.ಪಂ ಅಧ್ಯಕ್ಷೆ ರೀನಾ ತುಳಸಿ ರವರ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿತ್ತು. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಸಮ್ಮದ್ ಮಾತನಾಡಿ ಸಿದ್ದಾಪುರ ಗ್ರಾ.ಪಂ ಯಲ್ಲಿ ೨೫ ಮಂದಿ ಸದಸ್ಯರಿದ್ದಾರೆ. ಆದರೆ ಈ ಪೈಕಿ ಕೆಲವು ಮಂದಿಯಷ್ಟೇ ಸಭೆಗೆ ಹಾಜರಾಗಿದ್ದು, ಅಲ್ಲದೇ ಗ್ರಾಮಸ್ಥರು ಕೂಡ ಬೆರಳೆಣಿಕೆಯಷ್ಟು ಮಂದಿ ಭಾಗವಹಿಸಿರುವುದರಿಂದ ಸಭೆಯನ್ನು ಮುಂದೂಡುವAತೆ ಒತ್ತಾಯಿಸಿದರು. ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳ ಲೆಕ್ಕಪರಿಶೋಧನಾ ಸಭೆಗೆ ಪಂಚಾಯಿತಿಯು ಸಮರ್ಪಕವಾದ ಮಾಹಿತಿ ನೀಡಿರುವುದಿಲ್ಲ. ಇದರಿಂದಾಗಿ ಸಭೆಗೆ ಗ್ರಾಮಸ್ಥರ ಕೊರತೆ ಎದ್ದು ಕಾಣುತ್ತಿದೆ ಎಂದು ಸಮ್ಮದ್ ಅಧ್ಯಕ್ಷರ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ ಮುಖಂಡ ಹೆಚ್.ಬಿ. ರಮೇಶ್ ಗ್ರಾ.ಪಂ.ಯಲ್ಲಿ ಅಧ್ಯಕ್ಷರ ಹಾಗೂ ಸದಸ್ಯರುಗಳ ನಡುವೆ ಸಮನ್ವಯದ ಕೊರತೆ ಇರುವ ಹಿನ್ನೆಲೆಯಲ್ಲಿ ಸಭೆಗೆ ಬಹುತೇಕ ಸದಸ್ಯರುಗಳು ಗೈರು ಹಾಜರಾಗಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು. ಜವಾಬ್ದಾರಿ ಸ್ಥಾನದಲ್ಲಿರುವ ಗ್ರಾ.ಪಂ ಸದಸ್ಯರುಗಳು ಸಭೆಗೆ ಗೈರು ಹಾಜರಾಗಿರುವುದು ಸರಿಯಲ್ಲ ಎಂದರು. ಲೆಕ್ಕಪರಿಶೋಧನಾ ಸಭೆಯನ್ನು ಮುಂದೂಡುವAತೆ ಅಧಿಕಾರಿಗಳ ಬಳಿ ಪಟ್ಟು ಹಿಡಿದರು. ಅಲ್ಲದೇ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೂಲಿ ಕಾರ್ಮಿಕರು ಕೆಲಸ ಮಾಡಿದಲ್ಲಿ ಅವರನ್ನು ಕೂಡ ಸಭೆಗೆ ಕರೆಸಬೇಕಾಗಿತ್ತು. ಆದರೆ ಕಾರ್ಮಿಕರಿಗೆ ಮಾಹಿತಿ ನೀಡದೆ ಸಭೆಯನ್ನು ಕಾಟಾಚಾರಕ್ಕೆ ನಡೆಸುವುದರಲ್ಲಿ ಅರ್ಥವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲೆಕ್ಕಪರಿಶೋಧನೆಯ ಅಧಿಕಾರಿ ಸತೀಶ್ ಮಾತನಾಡಿ ಲೆಕ್ಕಪರಿಶೋಧನೆಯ ಸಭೆಯಲ್ಲಿ ಹೆಚ್ಚಿನ ಮಂದಿ ಗ್ರಾ.ಪಂ ಸದಸ್ಯರುಗಳು ಗೈರು ಹಾಜರಾಗಿರುವುದು ಕಂಡು ಬಂದಿದೆ. ಸದಸ್ಯರುಗಳ ಪಾಲ್ಗೊಳ್ಳುವಿಕೆ ಅಗತ್ಯವೆಂದರು. ಹಾಗೂ ಉದ್ಯೋಗ ಖಾತ್ರಿಯಲ್ಲಿ ಕೂಲಿ ಕೆಲಸ ಮಾಡಿರುವ ಕಾರ್ಮಿಕರಿಗೂ ಕೂಡ ಸಭೆಯ ಬಗ್ಗೆ ಮಾಹಿತಿ ನೀಡಬೇಕೆಂದರು. ಕೋರಂ ಕೊರತೆಯಿಂದಾಗಿ ಸಭೆ ನಡೆಸಲು ಸಾಧ್ಯವಾಗುವುದಿಲ್ಲವೆಂದು ತಿಳಿಸಿದರು. ಪಂಚಾಯಿತಿಯ ಸದಸ್ಯರುಗಳು ತಮ್ಮ ವಾರ್ಡ್ನ ನಿವಾಸಿಗಳಿಗೆ ಸಭೆಯ ಬಗ್ಗೆ ಮಾಹಿತಿ ನೀಡಬೇಕೆಂದು ಸಲಹೆ ನೀಡಿದರು. ಸಭೆಯಲ್ಲಿ ಗ್ರಾ.ಪಂ ಅಧ್ಯಕ್ಷೆ ತುಳಸಿ, ನೋಡಲ್ ಅಧಿಕಾರಿ ರಾಜೇಶ್, ಪಿ.ಡಿ.ಓ ಮನ್‌ಮೋಹನ್, ಕಾರ್ಯದರ್ಶಿ ಮೋಹನ್ ಹಾಗೂ ಗ್ರಾ.ಪಂ ಸದಸ್ಯರುಗಳು ಹಾಜರಿದ್ದರು.

ಹೆಲ್ಮೆಟ್ ಧರಿಸಿ ಸಭೆಗೆ ಹಾಜರು!

ಸಾಮಾಜಿಕ ಲೆಕ್ಕಪರಿಶೋಧನಾ ಸಭೆಯನ್ನು ಸಿದ್ದಾಪುರ ಗ್ರಾ.ಪಂ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಆದರೆ ಸಭಾಂಗಣದ ಮೇಲ್ಛಾವಣಿಯ ಮರಗಳು, ಅಂಚುಗಳು ಹಳೆಯದಾಗಿದ್ದು, ಕೆಳಗೆ ಬೀಳುವ ಸಾಧ್ಯತೆ ಇದೆ ಎಂದು ಕಾರ್ಮಿಕ ಮುಖಂಡ ರಮೇಶ್ ರವರು ಸಭೆಯಲ್ಲಿ ತಲೆಗೆ ಹೆಲ್ಮೆಟ್ ಧರಿಸಿಕೊಂಡು ಕುಳಿತಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಮೇಶ್ ತಾನು ಹಲವಾರು ಬಾರಿ ಗ್ರಾಮ ಸಭೆ ಹಾಗೂ ಇನ್ನಿತರ ಸಭೆಗಳಲ್ಲಿ ಪಿಡಿಓ ಹಾಗೂ ಜಿಲ್ಲಾಧಿಕಾರಿಗಳ ಬಳಿ ಕೂಡ ಸಭಾಂಗಣದ ಮೇಲ್ಛಾವಣಿ ದುರಸ್ಥಿಪಡಿಸುವಂತೆ ತಿಳಿಸಿದ್ದೇನೆ. ಆದರೆ ಅಧಿಕಾರಿಗಳು ನಿರ್ಲಕ್ಷö್ಯ ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಯದಿಂದ ತಾನು ಹೆಲ್ಮೆಟ್ ಧರಿಸಿರುವುದಾಗಿ ತಿಳಿಸಿದರು.

-ಚಿತ್ರ ವರದಿ: ವಾಸು