(ಹೆಚ್.ಕೆ.ಜಗದೀಶ್)ಗೋಣಿಕೊಪ್ಪಲು, ಜೂ.೨೨: ಕೊಡಗು ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಗೊಂದಲ ನಿರ್ಮಾಣವಾಗುತ್ತಿದೆ. ಇದರಿಂದ ಸಹಜವಾಗಿಯೇ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಸಮಾಧಾನವನ್ನು ಹೊರ ಹಾಕಿದ್ದಾರೆ.ತಾ.೨೪ರಂದು ಮಾಜಿ ಸಚಿವ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸೀತಾರಾಮ್‌ರವರು ತಮ್ಮ ಬೆಂಬಲಿಗರ ಸಭೆಯನ್ನು ಬೆಂಗಳೂರಿನಲ್ಲಿ ಆಯೋಜಿಸಿದ್ದಾರೆ. ಈ ಸಭೆಗೆ ರಾಜ್ಯದ ಎಲ್ಲಾ ಜಿಲ್ಲೆ ಗಳಿಂದಲೂ ಇವರ ಅಭಿಮಾನಿಗಳು ತೆರಳಲಿದ್ದಾರೆ. ಇದರಂತೆ ಕೊಡಗು ಜಿಲ್ಲೆಯಿಂದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಮಾಜಿ ಉಸ್ತುವಾರಿ ಸಚಿವರಾದ ಸೀತಾರಾಮ್‌ರವರ ಆಪ್ತ ಕದ್ದಣಿಯಂಡ ಹರೀಶ್ ಬೋಪಣ್ಣ ಮುಂದಾಳತ್ವದಲ್ಲಿ ಕೊಡಗು ಜಿಲ್ಲೆಯಿಂದ ಹತ್ತು ಬಸ್ಸುಗಳಲ್ಲಿ ಸೀತಾರಾಮ್ ಅವರು ಆಯೋಜಿಸಿರುವ ಸಭೆಗೆ ತೆರಳಲು ವೇದಿಕೆ ಸಿದ್ಧಗೊಂಡಿದೆ.

ಕಳೆದ ಮೂರು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಕೊಡಗು ಜಿಲ್ಲೆಗೆ ಆಗಮಿಸಿದ ಸಂದರ್ಭ ಸಭೆಯಲ್ಲಿ ಕಾರ್ಯ ಕರ್ತರನ್ನು ಉದ್ದೇಶಿಸಿ ಮಾತನಾಡಿದ ಧರ್ಮಜ ಉತ್ತಪ್ಪ ಈ ಸಭೆಗೆ ತೆರಳದಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದರು. ಈ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ ತೊಡಗಿದೆ. ಧರ್ಮಜ ಉತ್ತಪ್ಪನವರ ಮೇಲೆ ಹಲವರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಧರ್ಮಜ ಉತ್ತಪ್ಪ ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಪಕ್ಷ ಸಂಘಟನೆ ನಡೆಯಲಿಲ್ಲ ಎಂಬುದು ಆರೋಪ.

ಕೊಡಗು ಜಿಲ್ಲೆಯಲ್ಲಿ ಮಾಜಿ ಸಚಿವರ ವಿಶೇಷ ಅನುದಾನದಲ್ಲಿ ಹಲವಷ್ಟು ಪ್ರಗತಿ ಕೆಲಸಗಳನ್ನು ಮಾಡಿಸುವಲ್ಲಿ ಕದ್ದಣಿಯಂಡ ಹರೀಶ್ ಬೋಪಣ್ಣ ಸಫಲರಾಗಿದ್ದರು.

ಕಳೆದ ವಿಧಾನಪರಿಷತ್ತಿನ ಚುನಾವಣೆ ಸಂದರ್ಭ ಮಾಜಿ ಸಚಿವ ಎಂ.ಆರ್. ಸೀತಾರಾಮ್‌ರವರಿಗೆ ಕೊನೆ ಘಳಿಗೆಯಲ್ಲಿ ಅವಕಾಶ ತಪ್ಪಿದ ಹಿನೆÀ್ನಲೆಯಲ್ಲಿ ಸಹಜವಾಗಿಯೇ ಸೀತಾರಾಮ್‌ರವರಿಗೆ ಅಸಮಾಧಾನ ಉಂಟಾಗಿತ್ತು. ಈ ಬಗ್ಗೆ ಆಪ್ತ ಬಳಗದಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದರು. ಸೀತಾರಾಮ್ ರವರು ತಮ್ಮ ಶಕ್ತಿ ಪ್ರದರ್ಶನ ತೋರಿಸುವ ಸಲುವಾಗಿ ತಮ್ಮ ಬೆಂಬಲಿಗರ ಸಭೆಯನ್ನು ತಾ. ೨೪ರಂದು ಆಯೋಜಿಸಿದ್ದಾರೆ. ಈ ಸಭೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತೆರಳದಂತೆ ಕೊಡಗು ಜಿಲ್ಲೆಯ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರು ಸೂಚನೆ ನೀಡಿದ್ದಾರೆ.