ಟೆಕ್ಸಸ್, ಮೇ ೨೫: ಅಮೇರಿಕಾದ ದಕ್ಷಿಣ ಭಾಗದ ಟೆಕ್ಸಸ್ ರಾಜ್ಯದ ಶಾಲೆಯೊಂದಕ್ಕೆ ನುಸುಳಿದ ಯುವಕ ಗುಂಡು ಹಾರಿಸಿ ೧೯ ವಿದ್ಯಾರ್ಥಿಗಳು ಸೇರಿದಂತೆ ಇಬ್ಬರು ಶಿಕ್ಷಕರನ್ನು ಹತ್ಯೆಗೈದ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಘಟನೆಯಲ್ಲಿ ಇನ್ನೂ ಹಲವಾರು ಮಂದಿಗೆ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತಪಟ್ಟ ವಿದ್ಯಾರ್ಥಿಗಳೆಲ್ಲ ೭ ರಿಂದ ೧೦ ವರ್ಷದವರು ಎಂಬುದಾಗಿ ತಿಳಿದುಬಂದಿದೆ. ಘಟನೆ ಬಳಿಕ ಆರೋಪಿಯನ್ನು ಪೊಲೀಸರು ಗುಂಡು ಹಾರಿಸಿ ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಟೆಕ್ಸಸ್‌ನ ಎಲಿಮೆಂಟರಿ ಶಾಲೆಗೆ ಇಂದು ಬೆಳಿಗ್ಗೆ ಶಾಲಾ ಸಮಯದಲ್ಲಿಯೇ ಸುಮಾರು ೧೧:೩೦ ಕ್ಕೆ ತರಗತಿಯೊಂದರೊಳಗೆ ನುಗ್ಗಿದ ಸಲ್ವಾಡೋರ್ ರಾಮೋಸ್ ಎಂಬ ೧೮ ವರ್ಷದ ಯುವಕ ಇದ್ದಕ್ಕಿದ್ದ ಹಾಗೆ ತರಗತಿಯಲ್ಲಿನ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ನಡುವೆ ಹಲವಾರು ಮಂದಿ ತಪ್ಪಿಸಿಕೊಂಡರಾದರೂ ೧೯ ವಿದ್ಯಾರ್ಥಿಗಳು ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ವಿದ್ಯಾರ್ಥಿಗಳನ್ನು ರಕ್ಷಿಸಲೆಂದು ಮುಂದಾದ ಓರ್ವ ಶಿಕ್ಷಕಿ ಸೇರಿದಂತೆ ಒಟ್ಟು ಇಬ್ಬರು ಶಿಕ್ಷಕರು ಸಹ ಮೃತಪಟ್ಟಿದ್ದಾರೆ. ಆರೋಪಿಯನ್ನು ಅದೇ ಶಾಲೆಯ ಪ್ರೌಢಶಾಲಾ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಅಮೇರಿಕಾದ ಅಧ್ಯಕ್ಷ ಜೋ ಬಿಡೆನ್ ಘಟನೆಗೆ ತೀವ್ರ ವಿಷಾಧ ವ್ಯಕ್ತಪಡಿಸಿದ್ದಾರೆ.

ವರ್ಷದಲ್ಲಿ ೨೭ ‘ಸ್ಕೂಲ್ ಶೂಟಿಂಗ್’

ಅಮೇರಿಕಾದಲ್ಲಿ ಶಾಲೆಯೊಳಗೆ ನುಸುಳಿ ಗುಂಡಿನ ದಾಳಿ ನಡೆಸುವ ಘಟನೆಗಳು ಅತ್ಯಂತ ಸಾಮಾನ್ಯ ವಾಗಿದ್ದು, ಈ ವರ್ಷದಲ್ಲೆ ೨೭ ಬಾರಿ ಈ ರೀತಿಯ ಘಟನೆಗಳು ನಡೆದಿರುವುದಾಗಿ ತಿಳಿದುಬಂದಿದೆ. ಆದರೆ ಕಳೆದ ೧೦ ವರ್ಷಗಳಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಗುಂಡಿನ ದಾಳಿ ಆಗಿರಲಿಲ್ಲ ಎಂದು ಅಮೇರಿಕಾ ದೇಶದ ಸುದ್ದಿ ವಾಹಿನಿಗಳು ವರದಿ ಮಾಡಿವೆ. ಕಳೆದ ೧೦ ದಿನಗಳ ಹಿಂದಷ್ಟೆ ಅಮೇರಿಕಾದ ನ್ಯೂಯಾರ್ಕ್ನ ‘ಸೂಪರ್ ಮಾರ್ಕೆಟ್’ಒಂದರ ಮೇಲೆ ಗುಂಡಿನ ದಾಳಿ ನಡೆಸಿದ್ದ ಓರ್ವ ೧೦ ಮಂದಿಯ ಪ್ರಾಣ ತೆಗೆದಿದ್ದನು. ಅಮೇರಿಕಾದಲ್ಲಿ ಕೋವಿ ಮಾಲಿಕತ್ವ ನಿಯಮ ಪರಿಷ್ಕರಣೆಗೆ ದೇಶದ ಪ್ರಮುಖರು ಒತ್ತಾಯಿಸಿದ್ದಾರೆ.