ತಹಶೀಲ್ದಾರ್ ಗೋವಿಂದರಾಜು-ತಾ.ಪA. ಸಾಮಾನ್ಯ ಸಭೆ

ಸೋಮವಾರಪೇಟೆ, ಮೇ ೨೫: ಕಳೆದ ೨೦೧೮ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಂತಹ ಘಟನೆಗಳು ಈ ಬಾರಿಯೂ ಸಂಭವಿಸಬಹುದು ಎಂದು ವರದಿಗಳು ತಿಳಿಸಿದ್ದು, ಇಂತಹ ವಿಕೋಪಗಳನ್ನು ಎದುರಿಸಲು ತಾಲೂಕು ಆಡಳಿತ ಸನ್ನದ್ಧವಾಗಿದೆ. ಈಗಾಗಲೇ ಅಗತ್ಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ತಾಲೂಕು ತಹಶಿಲ್ದಾರ್ ಆರ್. ಗೋವಿಂದರಾಜು ತಿಳಿಸಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಡಳಿತಾಧಿಕಾರಿ ರಾಜಗೋಪಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಯೋಜನೆಗಳ ವಾರ್ಷಿಕ ಕ್ರಿಯಾ ಯೋಜನೆ ಅನುಮೋದನೆ ಹಾಗೂ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಈಗಾಗಲೇ ಗ್ರಾಮ ಪಂಚಾಯಿತಿ, ತಾಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿಗಳನ್ನು ರಚಿಸಲಾಗಿದೆ. ದಿನದ ೨೪ ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿ ಕೇಂದ್ರವನ್ನು ತಾಲೂಕು ಕಚೇರಿಯಲ್ಲಿ ಜೂನ್ ೧ರಿಂದ ತೆರೆಯಲಾಗುವುದು. ನದಿ ತೀರದ ನಿವಾಸಿಗಳಿಗೆ ನೋಟೀಸ್ ನೀಡಲು ಕ್ರಮವಹಿಸಲಾಗಿದೆ. ಈಗಾಗಲೇ ಹೋಬಳಿ ಮಟ್ಟದ ನೋಡಲ್ ಅಧಿಕಾರಿ, ಸಹಾಯಕ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಇತರ ಇಲಾಖೆಗಳೂ ಸಹ ತಾಲೂಕು ಆಡಳಿತದೊಂದಿಗೆ ಕೈ ಜೋಡಿಸಬೇಕು ಎಂದರು.

ತಾಲೂಕಿನಾದ್ಯAತ ಸ್ಮಶಾನ, ಕಸ ವಿಲೇವಾರಿಗಳಿಗೆ ಗುರುತಿಸಿದ್ದ ಜಾಗವನ್ನು ಸಂಬAಧಿಸಿದ ಪ್ರಾಧಿಕಾರಕ್ಕೆ ಮಂಜೂರಾತಿ ಮಾಡಲಾಗಿದೆ. ಮುಂದಿನ ದಿನಗಳಲ್ಲೂ ಪ್ರಸ್ತಾವನೆ ಬಂದರೆ ತಕ್ಷಣ ಸ್ಪಂದಿಸಲಾಗುವುದು ಎಂದು ಗೋವಿಂದರಾಜು ಹೇಳಿದರು.

ಕಳೆದುಹೋದ ಮಕ್ಕಳು, ದೌರ್ಜನ್ಯಕ್ಕೆ ಒಳಗಾದ ಮಕ್ಕಳು, ವೈದ್ಯಕೀಯ ನೆರವು ಅಗತ್ಯವಿರುವ, ಪೋಷಣೆ ಮತ್ತು ರಕ್ಷಣೆಯ ಅಗತ್ಯವಿರುವ ಎಲ್ಲಾ ಮಕ್ಕಳ ನೆರವಿಗೆ ಚೈಲ್ಡ್ ಲೈನ್ ೧೦೯೮ಗೆ ಕರೆ ಮಾಡಿದರೆ ತಕ್ಷಣ ಸ್ಪಂದಿಸಲಾಗುವುದು ಎಂದು ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳು ಮಾಹಿತಿ ನೀಡಿದರು.

ವಿವಿಧ ಇಲಾಖೆಗಳ ಮೂಲಕ ಕೈಗೊಳ್ಳಲು ಉದ್ದೇಶಿಸಲಾಗಿರುವ ವಾರ್ಷಿಕ ಕ್ರಿಯಾ ಯೋಜನೆಯನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಯಿತು. ಎಲ್ಲಾ ಯೋಜನೆಗಳನ್ನು ಕರ್ನಾಟಕ ಪಾರದರ್ಶಕ ನಿಯಮಗಳಡಿಯಲ್ಲಿ ಸಮರ್ಪಕವಾಗಿ ಪ್ರಾರಂಭಿಸಿ, ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಆಡಳಿತಾಧಿಕಾರಿ ರಾಜಗೋಪಾಲ್ ಸೂಚಿಸಿದರು. ವೇದಿಕೆಯಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ನಿರ್ದೇಶಕ ರವೀಶ್ ಉಪಸ್ಥಿತರಿದ್ದರು.