ಮಡಿಕೇರಿ, ಮೇ ೨೫: ಗಡಿಗಳಲ್ಲಿ ಇರುವ ಮೂಲಭೂತ ಸಮಸ್ಯೆಗಳು ದೂರವಾದಲ್ಲಿ ಸಹಜವಾಗಿ ಕರ್ನಾಟಕ ಸರಕಾರದ ಮೇಲೆ ನಂಬಿಕೆ ಮೂಡಿ ಕನ್ನಡ ಭಾಷೆಯ ಮೇಲೆ ಅಭಿಮಾನ ಹೆಚ್ಚಾಗುತ್ತದೆ. ಜೊತೆಗೆ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕೆಂಬ ಅಭಿಪ್ರಾಯಗಳು ಗಡಿ ಸಾಂಸ್ಕೃತಿಕ ಉತ್ಸವದಲ್ಲಿ ಕೇಳಿಬಂದವು.

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕೊಡಗು ಜಿಲ್ಲಾ ಲೇಖಕ ಹಾಗೂ ಕಲಾವಿದರ ಬಳಗದ ವತಿಯಿಂದ ಆಯೋಜಿಸಿದ್ದ ಗಡಿ ಸಾಂಸ್ಕೃತಿಕ ಉತ್ಸವದ ಅಂಗವಾಗಿ 'ಕೊಡಗು ಗಡಿನಾಡ ಸಮಸ್ಯೆಗಳು ಮತ್ತು ಪರಿಹಾರದ ಮಾರ್ಗೋಪಾಯಗಳು' ಎಂಬ ವಿಷಯದಲ್ಲಿ ಸಂವಾದ ನಡೆಯಿತು.

ಕೃಷಿಕ ಹಾಗೂ ಬರಹಗಾರ ಗೋಪಾಲ್ ಪೆರಾಜೆ ಮುಖ್ಯ ಭಾಷಣಗಾರರಾಗಿ ಭಾಗವಹಿಸಿ ಮಾತನಾಡಿ, ಕರ್ನಾಟಕದಲ್ಲಿ ಸಾವಿರಾರು ಜಾತಿ, ಭಾಷೆಗಳಿವೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಸಂಸ್ಕೃತಿ ಇದೆ. ಯಾವುದೇ ಭಾಷೆಗಳ ನಡುವೆ ಘರ್ಷಣೆ ಉಂಟಾಗಬಾರದು. ಅದು ಎದುರಾದಲ್ಲಿ ಉಭಯ ರಾಜ್ಯಗಳ ನಡುವೆ ಸಹಜವಾಗಿ ವೈರುಧÀ್ಯ ಉಂಟಾಗುತ್ತದೆ. ಗಡಿ ಜಿಲ್ಲೆಗಳಲ್ಲಿ ಕನ್ನಡ ಶಾಲೆಗಳ ಅಭಿವೃದ್ಧಿಯಾಗಬೇಕು. ಶಿಕ್ಷಕರ ಕೊರತೆ ನೀಗಿಸಬೇಕು. ಶೈಕ್ಷಣಿಕ ವ್ಯವಸ್ಥೆ ಗಡಿಗಳಲ್ಲಿ ಬದಲಾವಣೆಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದÀ ಅವರು, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಆಳವಾದ ಅಧ್ಯಯನ ನಡೆಸಿ ನಿರ್ಧಿಷ್ಟ ಸಮಸ್ಯೆಯನ್ನು ಪಟ್ಟಿಮಾಡಿ ಹಂತಹAತವಾಗಿ ಪರಿಹರಿಸುವ ಪರಿಣಾಮಕಾರಿ ಕೆಲಸ ಮಾಡಬೇಕು. ಗ್ರಂಥಾಲಯಗಳು ಹೆಚ್ಚಾಗಿ ಸ್ಥಾಪನೆಯಾಗಬೇಕು. ಭಾಷಾಭಿಮಾನ ಮೂಡಿಸುವ ನಿಟ್ಟಿನಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಾಯ ಪಡೆದು ಕಾರ್ಯಕ್ರಮ ಆಯೋಜಿಸಬೇಕು. ಗಡಿ ಭಾಗದಲ್ಲಿ ವಾಸಿಸುತ್ತಿರುವ ಹಿಂದುಳಿದವರು ಸಮಾಜದ ಮುಖ್ಯವಾಹಿನಿಗೆ ಬಂದರೆ ಸರಕಾರದ ಮೇಲೆ ನಂಬಿಕೆ ಬಂದು ಸಹಜವಾಗಿ ರಾಜ್ಯದ ಮೇಲೆ ಗೌರವ ಹೆಚ್ಚಾಗುತ್ತದೆ ಎಂದು ಹೇಳಿದರು.

ಅಮೆಚೂರು ಲೋಕನಾಥ್ ಮಾತನಾಡಿ, ಕರ್ನಾಟಕ-ಕೇರಳ ಗಡಿಯಲ್ಲಿ ಮಲೆಯಾಳ ಭಾಷೆ ಪ್ರಭಾವ ಹೆಚ್ಚಾಗುತ್ತಿದೆ. ಅಲ್ಲಿನವರು ನಮ್ಮ ಜಿಲ್ಲೆಯಲ್ಲಿ ಭೂಮಿ ಖರೀದಿಸಿ ಪ್ರಭಾಲ್ಯ ಸಾಧಿಸುತ್ತಿದ್ದಾರೆ. ಇದರಿಂದ ಬೇರೆ ರಾಜ್ಯದವರ ಹಿಡಿತದಲ್ಲಿ ಗಡಿಗ್ರಾಮ ಸಿಲುಕಿಕೊಳ್ಳುತ್ತಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ನೆರವಂಡ ಉಮೇಶ್ ಮಾತನಾಡಿ, ಕರ್ನಾಟಕ-ಕೇರಳ ಗಡಿಯಲ್ಲಿ ಮಲೆಯಾಳ ಆವರಿಸಿದೆ. ಬೆರಳೆಣಿಕೆ ಜನರು ಕನ್ನಡ ಭಾಷೆ ಮಾತನಾಡುತ್ತಿರುವುದು ವಿಷಾದನೀಯ. ಕೇರಳ ಸರಕಾರದ ಸ್ವಾಮ್ಯದಲ್ಲಿರುವ ಹಾಲು ಖರೀದಿ ಮಾಡುವ ಡೈರಿಗಳು ಜಿಲ್ಲೆಯ ಭಾಗಮಂಡಲದ ತನಕ ಬಂದು ರೈತರಿಂದ ಹೆಚ್ಚಿನ ದರ ನೀಡಿ ಹಾಲು ಖರೀದಿಸುತ್ತಿದ್ದಾರೆ. ಇದು ಬೇರೆ ರಾಜ್ಯವನ್ನು ಸಹಜವಾಗಿ ಸೆಳೆಯುತ್ತದೆ ಎಂದು ಹೇಳಿದರು.

ಕುಡಿಯರ ಮುತ್ತಪ್ಪ ಮಾತನಾಡಿ, ಗಡಿಯಲ್ಲಿ ಹೆಚ್ಚಾಗಿ ಬುಡಕಟ್ಟು ಜನಾಂಗ ವಾಸಿಸುತ್ತಿದ್ದಾರೆ. ಅವರುಗಳು ಇಂದಿಗೂ ಸಮಸ್ಯೆಯ ನಡುವೆ ಬದುಕು ಕಟ್ಟಿಕೊಂಡಿದ್ದಾರೆ. ಅರಣ್ಯ ಹಕ್ಕು ಕಾಯ್ದೆ ೧೪ ವರ್ಷಗಳ ಹಿಂದೆ ಜಾರಿಯಾದರೂ ಕೂಡ ಸಮಸ್ಯೆ ದೂರವಾಗದಿರುವುದು ವಿಪರ್ಯಾಸ. ನಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕದಿದ್ದಲ್ಲಿ ಜನರು ಬೇಸತ್ತು ಪಕ್ಕದ ರಾಜ್ಯಗಳಿಗೆ ಸ್ಥಳಾಂತರಗೊಳ್ಳುತ್ತಾರೆ ಎಂದರು.

ನಾಪಂಡ ರವಿ ಕಾಳಪ್ಪ ಮಾತನಾಡಿ, ಕನ್ನಡಿಗರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ನಮ್ಮ ಸಂಸ್ಕೃತಿ ಮೇಲೆ ದಾಳಿಯಾಗುತ್ತಿವೆ. ಭಾಷೆ, ಸಂಸ್ಕೃತಿ, ಪದ್ಧತಿ ಮೇಲೆ ಅತ್ರಿಕಮಣ ಆಗುತ್ತಿದೆ. ಈ ಬಗ್ಗೆ ಜಾಗೃತಿಯಾಗಬೇಕು. ಒಗ್ಗಟ್ಟಿನ ಪ್ರದರ್ಶನ ಮಾಡಬೇಕು. ಗಡಿ ಸಮಸ್ಯೆ ಪರಿಹಾರಕ್ಕೆ ಸರಕಾರದ ಮಟ್ಟದಲ್ಲಿ ಗಮನ ಸೆಳೆಯಬೇಕು. ಗಡಿ ಉತ್ಸವದ ಸಂಸ್ಕೃತಿಯ ಅನಾವರಣವಾಗಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪತ್ರಕರ್ತ ಶ್ರೀಧರ್ ನೆಲ್ಲಿತಾಯ, ಕನ್ನಡ ಹಾಗೂ ಖಾಸಗಿ ಶಾಲೆಗಳ ನಡುವೆ ಇರುವ ವ್ಯತ್ಯಾಸ ಸೃಷ್ಟಿಸುತ್ತಿರುವುದು ವಿಪರ್ಯಾಸ. ಶಿಕ್ಷಣ ವ್ಯವಸ್ಥೆಯಲ್ಲಿ ಭಾಷೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸವಾಗಬೇಕು. ಆಡಳಿತ ಗಡಿ ಉತ್ಸವಕ್ಕೆ ಕೈಜೋಡಿಸಿದರೆ ಗಡಿ ಸಮಸ್ಯೆ ಪರಿಹಾರವಾಗುತ್ತೆ. ನಾವು ಕನ್ನಡಿಯಾಗಿದ್ದು, ಸರಕಾರ ಬಿಂಬವಾಗಿರಬೇಕು. ಅಧಿಕಾರಿಗಳು ಉತ್ಸವದಲ್ಲಿ ಪಾಲ್ಗೊಳ್ಳದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ಪ್ರಾಧಿಕಾರ ರಚನೆಯಾಗಿ ದಶಕ ಕಳೆದರೂ ಸಮಸ್ಯೆ ಮಾತ್ರ ದೂರವಾಗಿಲ್ಲ. ಕರಿಕೆ, ಮಾಕುಟ್ಟ ಗಡಿಗಳಲ್ಲಿ ಮಲೆಯಾಳಂ ಭಾಷೆ ಹೆಚ್ಚಾಗಿದೆ. ಕನ್ನಡ ನಾಮಫಲಕ ಮಾಯವಾಗಿದೆ. ಭಾಷಭಿಮಾನ ಮರೆತು ಬೇರೆ ಭಾಷೆಗಳ ವ್ಯಾಮೋಹ ಹೆಚ್ಚಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಂವಾದದಲ್ಲಿ ಕೆ.ಯು. ರಂಜಿತ್, ಕೋಡೀರ ವಿನೋದ್ ನಾಣಯ್ಯ, ಸ್ಮಿತಾ ಅಮೃತರಾಜ್ ಹಾಜರಿದ್ದರು.