ಆ್ಯಸಿಡ್ ದಾಳಿ ಪ್ರಕರಣದ ಆರೋಪಿ ಬಂಧನ

ಬೆAಗಳೂರು, ಮೇ ೧೩: ಕಳೆದ ೧೬ ದಿನಗಳಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತಪ್ಪಿಸಿಕೊಂಡಿದ್ದ ಕಾಮಾಕ್ಷಿ ಪಾಳ್ಯ ಆ್ಯಸಿಡ್ ದಾಳಿ ಪ್ರಕರಣದ ಆರೋಪಿ ನಾಗೇಶ್‌ನನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದಿದ್ದ ಯುವತಿ ಮೇಲಿನ ಆ್ಯಸಿಡ್ ದಾಳಿ ಆರೋಪಿ ನಾಗೇಶ್ ನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ನಾಗೇಶ್‌ನನ್ನು ಕರ್ನಾಟಕ ಪೊಲೀಸರು ತಮಿಳುನಾಡಿನ ತಿರುವಣ್ಣಾ ಮಲೈನಲ್ಲಿ ಬಂಧಿಸಿದ್ದಾರೆ. ಪ್ರಕರಣ ಸಂಭವಿಸಿ ಬರೋಬ್ಬರಿ ೧೬ ದಿನಗಳ ಬಳಿಕ ಆರೋಪಿ ನಾಗೇಶ್‌ನನ್ನು ಬಂಧಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಬಂಧನದ ವೇಳೆ ಆರೋಪಿ ನಾಗೇಶ್ ಸ್ವಾಮೀಜಿ ವೇಶದಲ್ಲಿದ್ದ ಎನ್ನಲಾಗಿದೆ. ಈ ಹಿಂದೆ ಕೂಡ ನಾಗೇಶ್ ಬೇರೆ ಬೇರೆ ಯುವತಿಯರನ್ನ ಪ್ರೀತಿಸುವಂತೆ ಕಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಾಗೇಶ್ ಮೂಲತಃ ಕೃಷ್ಣಗಿರಿ ಜಿಲ್ಲೆಯ ಕೊಡಿಯಾಲಂ ನಿವಾಸಿಯಾಗಿದ್ದು, ೭ ವರ್ಷದ ಹಿಂದೆ ಬೆಂಗಳೂರಿಗೆ ಬಂದು ಯುವತಿ ದೊಡ್ಡಮ್ಮ ಮನೆಯಲ್ಲಿ ಬಾಡಿಗೆಗೆ ಇದ್ದ. ಪ್ರೀತಿ ಮಾಡು ಅಂತಾ ಯುವತಿಯ ಹಿಂದೆ ಬಿದ್ದಿದ್ದ. ಮನೆ ಖಾಲಿ ಮಾಡಿಸಿದ ಬಳಿಕ ತಮ್ಮ ಸ್ವಂತ ಊರು ಕೊಡಿಯಾಲಂಗೆ ಹೋಗಿದ್ದ. ಯುವತಿಗೆ ಪ್ರೀತಿಸುವಂತೆ ಪೀಡಿಸಿದ್ದ. ಪ್ರೀತಿ ತಿರಸ್ಕರಿಸಿದಕ್ಕೆ ಆ್ಯಸಿಡ್ ಹಾಕಿ ಪರಾರಿಯಾಗಿದ್ದ.

ನೀಟ್ ಪಿಜಿ ಪರೀಕ್ಷೆ ಮುಂದೂಡಲು ಸುಪ್ರೀಂ ನಕಾರ

ನವದೆಹಲಿ, ಮೇ ೧೩: ವೈದ್ಯರ ಮನವಿಯ ಮೇರೆಗೆ ನೀಟ್-ಪಿಜಿ-೨೦೨೨ ಪರೀಕ್ಷೆಯನ್ನು ಮುಂದೂಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಪರೀಕ್ಷೆ ವಿಳಂಬವಾದರೆ ವೈದ್ಯರ ಅಲಭ್ಯತೆ ಉಂಟಾಗುತ್ತದೆ ಮತ್ತು ರೋಗಿಗಳ ಆರೈಕೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ. ನೀಟ್ ಪಿಜಿ-೨೦೨೨ ಪರೀಕ್ಷೆ ಮುಂದೂಡುವAತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಸೂರ್ಯ ಕಾಂತ್ ಅವರ ಪೀಠ, ಪರೀಕ್ಷೆ ಮುಂದೂಡುವುದರಿAದ "ಅವ್ಯವಸ್ಥೆ ಮತ್ತು ಅನಿಶ್ಚಿತತೆ" ಸೃಷ್ಟಿಸುತ್ತದೆ ಮತ್ತು ಪರೀಕ್ಷೆಗೆ ನೋಂದಾಯಿಸಿದ ವಿದ್ಯಾರ್ಥಿಗಳ ದೊಡ್ಡ ವಿಭಾಗದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ. ವಿದ್ಯಾರ್ಥಿಗಳಲ್ಲಿ ಎರಡು ವರ್ಗಗಳಿವೆ - ಒಂದು ಮುಂದೂಡಿಕೆಯನ್ನು ಬಯಸುತ್ತಿದೆ ಮತ್ತು ಪರೀಕ್ಷೆಗೆ ನೋಂದಾ ಯಿಸಿಕೊಂಡ ಎರಡು ಲಕ್ಷದ ಆರು ಸಾವಿರ ಅಭ್ಯರ್ಥಿಗಳ ದೊಡ್ಡ ವರ್ಗ - ಪರೀಕ್ಷೆ ಬರೆಯಲು ಸಿದ್ಧವಾಗಿದೆ ಎಂದು ಸುಪ್ರೀಂ ಪೀಠ ಹೇಳಿದೆ. ಕಳೆದ ಶುಕ್ರವಾರವಷ್ಟೇ ೧೫,೦೦೦ ಅಭ್ಯರ್ಥಿಗಳು ಮೇ ೨೧ಕ್ಕೆ ನಿಗದಿಯಾಗಿರುವ ೨೦೨೨ನೇ ಸಾಲಿನ ನೀಟ್-ಪಿಜಿ ಪರೀಕ್ಷೆಯನ್ನು ಮುಂದೂಡುವAತೆ ಒತ್ತಾಯಿಸಿ ಪ್ರಧಾನಿ ಮೋದಿಯವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದರು. ಅಲ್ಲದೆ ನೀಟ್-ಪಿಜಿ ಪರೀಕ್ಷೆಯನ್ನು ಮುಂದೂಡುವAತೆ ಭಾರತೀಯ ವೈದ್ಯಕೀಯ ಸಂಘ(ಐಎAಎ) ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಪತ್ರ ಬರೆದು ಮನವಿ ಮಾಡಿದೆ.

ಅವಧಿ ಪೂರ್ವದಲ್ಲೇ ಮಾನ್ಸೂನ್ ಪ್ರವೇಶ

ನವದೆಹಲಿ, ಮೇ ೧೩: ಭಾರತದ ಕೃಷಿ ಆಧಾರಿತ ಆರ್ಥಿಕತೆಯ ಜೀವನಾಡಿ ಎಂದು ಪರಿಗಣಿಸಲಾದ ನೈಋತ್ಯ ಮಾನ್ಸೂನ್ ಅವಧಿ ಪೂರ್ವದಲ್ಲೇ ಕೇರಳಕ್ಕೆ ಪ್ರವೇಶಿಸುವ ಸಾಧ್ಯತೆಯಿದೆ. ತಾ. ೨೭ ರ ವೇಳೆಗೆ ಕೇರಳಕ್ಕೆ ಸಾಮಾನ್ಯ ಆರಂಭದ ದಿನಾಂಕಕ್ಕಿAತ ಮುಂಚಿತವಾಗಿ ಮೊದಲ ಮಳೆಯನ್ನು ತರುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ತಿಳಿಸಿದೆ. ಕೇರಳದಲ್ಲಿ ಮಾನ್ಸೂನ್‌ನ ಸಾಮಾನ್ಯ ಆರಂಭದ ದಿನಾಂಕ ಜೂನ್ ೧ ಆಗಿದೆ. ಆದರೆ ಈ ವರ್ಷ ಕೇರಳದ ಮೇಲೆ ನೈಋತ್ಯ ಮಾನ್ಸೂನ್, ಸಾಮಾನ್ಯ ಆರಂಭದ ದಿನಾಂಕಕ್ಕಿAತ ೪ ದಿನ ಮುಂಚೆಯೇ ಬರುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಹೇಳಿದೆ. ನೈಋತ್ಯ ಮಾನ್ಸೂನ್‌ನ ಆರಂಭಿಕ ಆಗಮನವು ವಾಯುವ್ಯ ಭಾರತದ ಭಾಗಗಳು ಅತ್ಯಂತ ಹೆಚ್ಚಿನ ಗರಿಷ್ಠ ತಾಪಮಾನವನ್ನು ಅನುಭವಿಸುತ್ತಿರುವ ಸಮಯದಲ್ಲಿ ಬರುತ್ತಿದೆ. ತಾ. ೧೫ ರ ವೇಳೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಾನ್ಸೂನ್ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಇಬ್ಬರು ಭಯೋತ್ಪಾದಕರು ಹತ

ಶ್ರೀನಗರ, ಮೇ ೧೩: ಇತ್ತೀಚೆಗಷ್ಟೇ ಕಾಶ್ಮೀರದೊಳಗೆ ನುಸುಳಿದ್ದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕರನ್ನು ಬಂಡಿಪೋರಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಶುಕ್ರವಾರ ನಡೆಸಿದ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಉತ್ತರ ಕಾಶ್ಮೀರದ ಬಂಡಿಪೋರಾದ ಅರಗಮ್ ಪ್ರದೇಶದ ಬ್ರಾರ್‌ನಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಮಾಹಿತಿ ನೀಡಿದ ನಂತರ ಭದ್ರತಾ ಪಡೆಗಳು ಕ್ವಾರ್ಡನ್ ಮತ್ತು ಸರ್ಚ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಡಗಿದ್ದ ಭಯೋತ್ಪಾದಕರಿಗಾಗಿ ಭದ್ರತಾ ಪಡೆಗಳು ಶೋಧ ಕಾರ್ಯ ನಡೆಸುತ್ತಿದ್ದಾಗ ಸಿಬ್ಬಂದಿಯ ಮೇಲೆ ಉಗ್ರರು ಗುಂಡು ಹಾರಿಸಿದ್ದಾರೆ. ಈ ವೇಳೆ ಯೋಧರು ಎನ್‌ಕೌಂಟರ್ ಆರಂಭಿಸಿದ್ದು, ಈ ವೇಳೆ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಮೃತ ಭಯೋತ್ಪಾದಕರ ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ರಮ್ಯಾ ಟ್ವೀಟ್‌ನಿಂದ ಡಿಕೆಶಿ ಬಣ್ಣ ಬಯಲು : ಅಶ್ವತ್ಥನಾರಾಯಣ

ಬೆಂಗಳೂರು, ಮೇ ೧೩: ತಮ್ಮದೇ ಪಕ್ಷದ ನಾಯಕ ಎಂ.ಬಿ.ಪಾಟೀಲ್ ಮತ್ತು ನನ್ನ ಹೆಸರು ಹೇಳಿಕೊಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದರು. ಆದರೆ ರಮ್ಯಾ ಅವರ ಟ್ವೀಟ್ ಡಿಕೆಶಿ ಬಣ್ಣವನ್ನು ಬಯಲು ಮಾಡಿತು. ರಾಂಗ್ ನಂಬರ್ ಡಯಲ್ ಮಾಡಿದ ಶಿವಕುಮಾರ್ ಪೆಚ್ಚು ಮೋರೆ ಹಾಕಿಕೊಂಡು ಓಡಾಡಬೇಕಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವತ್ಥನಾರಾಯಣ ಅವರು ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ಸಿನಲ್ಲಿ ನಡೆಯುತ್ತಿರುವ ಟ್ವೀಟ್ ಕಿತ್ತಾಟದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಟ್ವೀಟ್ ಕಿತ್ತಾಟ ಕಾಂಗ್ರೆಸ್ಸಿನ ಆಂತರಿಕ ವಿಚಾರ. ಆದರೆ, ನನ್ನ ಹೆಸರನ್ನು ಇಲ್ಲಿ ಎಳೆದು ತಂದಿದ್ದರಿAದ ನಾನು ಪ್ರತಿಕ್ರಿಯೆ ನೀಡುತ್ತಿದ್ದೇನಷ್ಟೆ. ಶಿವಕುಮಾರ್ ಅವರ ಮಾತುಗಳನ್ನು ಅವರ ಪಕ್ಷದ ನಾಯಕರುಗಳೇ ಖಂಡಿಸಿರುವುದು ಸ್ವಾಗತಾರ್ಹ. ವೈಯಕ್ತಿಕ ಸಂಬAಧ ಮತ್ತು ರಾಜಕಾರಣ ಎರಡನ್ನೂ ಬೆರೆಸುವುದು ನೀಚ ಮನಸ್ಥಿತಿ ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಶಿವಕುಮಾರ್ ಅವರು ಇನ್ನಾದರೂ ಪ್ರಬುದ್ಧವಾಗಿ ವರ್ತಿಸಬೇಕು. ಇಂತಹ ಒಬ್ಬ ವ್ಯಕ್ತಿಯನ್ನು ಅಧ್ಯಕ್ಷರಾಗಿ ಇಟ್ಟುಕೊಂಡಿರುವುದಕ್ಕೆ ಆ ಪಕ್ಷ ಮುಜುಗರ ಅನುಭವಿಸುತ್ತಿದೆ ಎಂದು ಅಶ್ವತ್ಥನಾರಾಯಣ ಟಾಂಗ್ ನೀಡಿದರು.

ಕಲಿಕಾ ಚೇತರಿಕೆಯೊಂದಿಗೆ ಶಾಲೆಗಳು ಆರಂಭ

ಬೆAಗಳೂರು, ಮೇ ೧೩: ರಾಜ್ಯದಲ್ಲಿ ತಾ. ೧೬ ರಿಂದ ಕಲಿಕಾ ಚೇತರಿಕೆಯೊಂದಿಗೆ ಶಾಲೆಗಳು ಆರಂಭವಾಗಲಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಚಿವ ನಾಗೇಶ್ ಅವರು ತಿಳಿಸಿದರು. ಕೋವಿಡ್ ಕಾರಣ ೨ ವರ್ಷಗಳಿಂದ ಉಂಟಾಗಿರುವ ಕಲಿಕಾ ಹಿನ್ನಡೆಯಲ್ಲಿ ಸರಿದೂಗಿಸಲು ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರದಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇತರ ರಾಜ್ಯಗಳಿಗೂ ಕರ್ನಾಟಕದ ಯೋಜನೆ ಮಾದರಿಯಾಗಿದೆ. ಕಲಿಕಾ ಚೇತರಿಕೆ ಯೋಜನೆಯು ವರ್ಷವಿಡೀ ನಡೆಯಲಿದೆ. ಈ ಹಿನ್ನೆಲೆಯಲ್ಲಿ ೨೦೨೨-೨೩ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷವೆಂದು ಘೋಷಿಸಲಾಗಿದೆ ಎಂದು ಸಚಿವ ನಾಗೇಶ್ ತಿಳಿಸಿದರು. ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಅನುಷ್ಠಾನಗೊಳಿಸಲು ಅಗತ್ಯವಾದ ಸಂಪನ್ಮೂಲಗಳನ್ನು (ವಿದ್ಯಾರ್ಥಿಗಳಿಗೆ ಕಲಿಕಾ ಹಾಳೆ ಮತ್ತು ಶಿಕ್ಷಕರ ಕೈಪಿಡಿ) ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಅಲ್ಲದೇ, ಶಿಕ್ಷಣ ಸಂಸ್ಥೆಗಳು ಬಯಸಿದರೆ ಅಗತ್ಯ ತರಬೇತಿಯನ್ನು ನೀಡಲು ಶಿಕ್ಷಣ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದರು.