ಸೋಮವಾರಪೇಟೆ, ಫೆ. ೪: ಕಳೆದ ೧೯೯೫ ರಿಂದ ೧೯೯೮ರ ಅವಧಿಯಲ್ಲಿ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಆಗಿದ್ದ ಈರಯ್ಯ ಅವರ ಸಹಿಯನ್ನು ನಕಲು ಮಾಡಿ ಕೆಲ ಭ್ರಷ್ಟ ಅಧಿಕಾರಿಗಳು ಹಾಗೂ ಸಮಾಜ ಸೇವಕರ ಸೋಗಿನಲ್ಲಿದ್ದವರು, ಅಮಾಯಕ ಮಂದಿಗೆ ನಕಲಿ ಹಕ್ಕುಪತ್ರಗಳನ್ನು ವಿತರಿಸಿದ್ದು, ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬರುತ್ತಿದೆ.
ಸರ್ಕಾರಿ ಜಾಗಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದ ಮಂದಿಗೆ ಹಕ್ಕುಪತ್ರವನ್ನು ವಿತರಿಸುವ ನಾಟಕವಾಡಿ, ಅವರುಗಳಿಂದ ಹಣವನ್ನು ಪಡೆದು ಅನಧಿಕೃತವಾಗಿ ಹಕ್ಕುಪತ್ರಗಳನ್ನು ವಿತರಿಸಿರುವುದು ತಡವಾಗಿ ಬೆಳಕಿಗೆ ಬರುತ್ತಿದ್ದು, ಹಣ ನೀಡಿ ನಕಲಿ ಹಕ್ಕುಪತ್ರ ಪಡೆದುಕೊಂಡವರು ತಲೆಮೇಲೆ ಕೈಹೊತ್ತು ಕುಳಿತುಕೊಂಡಿದ್ದಾರೆ.
೧೯೯೫ ರಿಂದ ೯೮ರ ಅವಧಿಯಲ್ಲಿ ಸೋಮವಾರಪೇಟೆಯ ತಹಶೀಲ್ದಾರ್ ಆಗಿ ಈರಯ್ಯ ಎಂಬವರು ಅಧಿಕಾರದಲ್ಲಿದ್ದರು. ಈ ಸಂದರ್ಭ ಕೆಲ ಗ್ರಾಮ ಸಹಾಯಕರು, ಸಮಾಜ ಸೇವಕರ ಸೋಗಿನಲ್ಲಿದ್ದ ಖದೀಮರೊಂದಿಗೆ ಸೇರಿಕೊಂಡು, ಅಮಾಯಕ ಮಂದಿಗೆ ನಕಲಿ ಹಕ್ಕುಪತ್ರ ನೀಡಿ, ಇದೇ ಅಧಿಕೃತ ಎಂದು ನಂಬಿಸಿದ್ದಾರೆ. ಇಂತಹ ಹಕ್ಕುಪತ್ರಗಳಿಗೆ ಆ ಕಾಲದಲ್ಲಿಯೇ ೧೦ ರಿಂದ ೧೫ ಸಾವಿರ ಹಣ ಪಡೆಯಲಾಗಿದೆ ಎಂಬ ಮಾಹಿತಿ ಹೊರಬೀಳುತ್ತಿದೆ. ತಾಲೂಕು ತಹಶೀಲ್ದಾರ್‌ರ ಮುದ್ರೆಯನ್ನು ಖಾಸಗಿಯಾಗಿ ತಯಾರಿಸಿ, ಅಂದಿನ ತಹಶೀಲ್ದಾರ್ ಈರಯ್ಯ ಅವರ ಸಹಿಯನ್ನು ನಕಲು ಮಾಡಿ ಹಕ್ಕುಪತ್ರ ವಿತರಿಸಲಾಗಿದ್ದು, ಕುಶಾಲನಗರವನ್ನೂ ಒಳಗೊಂಡAತೆ ತಾಲೂಕಿನ ವಿವಿಧ ಭಾಗಗಳಲ್ಲಿ ವಿತರಿಸಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಸೋಮವಾರಪೇಟೆಯ ಕಿರಗಂದೂರು, ತಾಕೇರಿ ಭಾಗದಲ್ಲಿ ಇಂತಹ ನಕಲಿ ಹಕ್ಕುಪತ್ರಗಳು ಹೆಚ್ಚು ವಿತರಣೆಯಾಗಿದೆ ಎನ್ನಲಾಗಿದೆ.