ಸೋಮವಾರಪೇಟೆ, ಜ. ೨೫: ಪಟ್ಟಣದ ಬಹುತೇಕ ಎಲ್ಲಾ ಖಾಸಗಿ ಕ್ಲಿನಿಕ್ ಹಾಗೂ ಮೆಡಿಕಲ್ ಅಂಗಡಿಗಳಲ್ಲಿ ರೋಗಿಗಳ ಸರತಿ ಸಾಲು ಕಂಡುಬರುತ್ತಿದೆ. ಶೀತ, ಜ್ವರ, ತಲೆನೋವಿನಿಂದ ಅನೇಕರು ಬಳಲುತ್ತಿದ್ದು, ಸರ್ಕಾರಿ ಆಸ್ಪತ್ರೆಗೆ ಹೋದರೆ ಕೋವಿಡ್ ಪರೀಕ್ಷೆ ಮಾಡುತ್ತಾರೆ ಎಂಬ ಆಲೋಚನೆ ಯಿಂದ ಬಹುತೇಕ ಮಂದಿ ಖಾಸಗಿ ಕ್ಲಿನಿಕ್‌ಗಳ ಮೊರೆ ಹೋಗಿದ್ದಾರೆ.

ಪಟ್ಟಣ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳು ಕಂಡುಬರುತ್ತಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಪಟ್ಟಣ ಪಂಚಾಯಿತಿ ಸೇರಿದಂತೆ ಸ್ಥಳೀಯ ಟಾಸ್ಕ್ಫೋರ್ಸ್ ಸಮಿತಿಗಳಿಂದ ಜಾಗೃತಿ ಮೂಡಿಸಲಾಗುತ್ತಿದೆ. ಆದಾಗ್ಯೂ ಸಾರ್ವಜನಿಕರು ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಂಡುಬರುತ್ತಿಲ್ಲ.

ಪಟ್ಟಣದಲ್ಲಿರುವ ಎಲ್ಲ ಖಾಸಗಿ ಕ್ಲಿನಿಕ್‌ಗಳ ಎದುರು ರೋಗಿಗಳ ಸರತಿ ಸಾಲು ಮಾಮೂಲಾಗಿದ್ದು, ಬಹುತೇಕ ಮಂದಿ ಕೊರೊನಾ ಸೋಂಕಿನ ಸಾಮಾನ್ಯ ಲಕ್ಷಣಗಳಾದ ಶೀತ,ಜ್ವರ, ಕೆಮ್ಮು, ತಲೆನೋವು, ಮೈ ಕೈ ನೋವಿನಿಂದ ಬಳಲುತ್ತಿರುವುದು ಕಂಡುಬAದಿದೆ.

ಇತ್ತೀಚಿನ ದಿನಗಳಲ್ಲಿ ಭಾರೀ ಚಳಿಯ ವಾತಾವರಣ ಕಂಡುಬರುತ್ತಿದ್ದು, ಬೆಳಿಗ್ಗೆ ಹಾಗೂ ಸಂಜೆಯ ವೇಳೆಯಲ್ಲಿ ಚಳಿಯ ಅನುಭವ ಹೆಚ್ಚುತ್ತಿದೆ. ಇದರೊಂದಿಗೆ ಕಾಫಿ ತೋಟದ ಕೆಲಸವೂ ಪ್ರಗತಿಯಲ್ಲಿದ್ದು, ಧೂಳಿನಿಂದಾಗಿ ಕೆಮ್ಮು, ಶೀತ ಸಹಜವಾಗಿದೆ. ಹವಾಮಾನ ವೈಪರೀತ್ಯವು ಜನರ ದೇಹಾರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಆಸ್ಪತ್ರೆ ಹಾಗೂ ಖಾಸಗಿ ಕ್ಲಿನಿಕ್‌ಗಳ ಎದುರು ಸರತಿ ಸಾಲಿನಲ್ಲಿ ನಿಂತು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ರೋಗಿಗಳ ತಪಾಸಣೆ, ಔಷಧಿಗಳು ಉಚಿತವಾಗಿ ಲಭಿಸುತ್ತಿದೆಯಾದರೂ ಕೊರೊನಾ ರೋಗ ಲಕ್ಷಣಗಳು ಕಂಡುಬAದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆಗೆ ಒಳಗಾಗಬೇಕು. ಒಂದುವೇಳೆ ಪಾಸಿಟಿವ್ ವರದಿ ಬಂದರೆ ಆಸ್ಪತ್ರೆಗೆ ದಾಖಲಾಗಬೇಕು, ಅಥವಾ ಮನೆಯಲ್ಲಿಯೇ ೭ ದಿನಗಳ ಕಾಲ ಕ್ವಾರಂಟೈನ್ ಇರಬೇಕಾಗುತ್ತದೆ ಎಂಬ ಆಲೋಚನೆಯಿಂದ ಶೇ. ೯೦ರಷ್ಟು ಮಂದಿ ಸರ್ಕಾರಿ ಆಸ್ಪತ್ರೆಗಳತ್ತ ಮುಖಮಾಡದೇ ಖಾಸಗಿ ಕ್ಲಿನಿಕ್‌ಗಳ ಎದುರು ಗಂಟೆಗಟ್ಟಲೆ ಕಾಯ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾಫಿ ಕುಯ್ಲು ಕಾರ್ಯ ಪ್ರಗತಿಯಲ್ಲಿರುವುದರಿಂದ ಸೋಮವಾರಪೇಟೆ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಸ್ಸಾಮಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವರುಗಳೂ ಸಹ ಅನಾರೋಗ್ಯಕ್ಕೆ ತುತ್ತಾಗಿದ್ದು, ಕೆಲವರು ಖಾಸಗಿ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ತೆರಳಿದರೆ ಪಡಿತರ ಚೀಟಿ, ಆಧಾರ್ ಕಾರ್ಡ್ ಕೇಳುತ್ತಾರೆ. ಇದರೊಂದಿಗೆ ಕೋವಿಡ್ ಪರೀಕ್ಷೆ ನಡೆಸುತ್ತಾರೆ ಎಂಬ ಭಯದಿಂದ ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿಲ್ಲ.

ಸಾಮಾನ್ಯ ಖಾಯಿಲೆಗಳಿಂದ ಬಳಲುತ್ತಿರುವ ಮಂದಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚು ಕಂಡುಬರುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯ ಸಾಮಾನ್ಯ ರೋಗಿಗಳ ತಪಾಸಣಾ ಕೊಠಡಿಗಳಲ್ಲೂ ರೋಗಿಗಳ ಸಾಲು ಕಂಡುಬರುತ್ತಿದೆ.

ಆಸ್ಪತ್ರೆಯಲ್ಲಿ ಕಳೆದ ಕೆಲ ವರ್ಷಗಳಿಂದ ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಈರ್ವರು ಹಿರಿಯ ವೈದ್ಯರಿಗೂ ಕೊರೊನಾ ಸೋಂಕು ತಗುಲಿ ಮನೆಯಲ್ಲಿಯೇ ಉಳಿದಿದ್ದಾರೆ. ಇದರಿಂದಾಗಿ ಹೊಸದಾಗಿ ಆಗಮಿಸಿರುವ ಈರ್ವರು ವೈದ್ಯರು ದಿನನಿತ್ಯ ನೂರಾರು ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡಬೇಕಾಗಿದೆ. ಆಸ್ಪತ್ರೆಗೆ ಕೋವಿಡ್ ಸೋಂಕಿತರೂ ಆಗಮಿಸಿ ತಪಾಸಣೆಗೆ ಒಳಪಡುತ್ತಿದ್ದು, ಸಾಮಾನ್ಯ ರೋಗಿಗಳೊಂದಿಗೆ ಇವರುಗಳನ್ನೂ ಒಟ್ಟಿಗೆ ಪರೀಕ್ಷಿಸಬೇಕಾದ ಸಂದಿಗ್ಧ ಸ್ಥಿತಿಗೆ ವೈದ್ಯರು ತಲುಪಿದ್ದಾರೆ.

ಇನ್ನು ಖಾಸಗಿ ಕ್ಲಿನಿಕ್‌ಗಳ ಎದುರು ಸಾಲುಗಟ್ಟಿ ನಿಲ್ಲುತ್ತಿರುವ ಮಂದಿ ಕನಿಷ್ಟ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೇ ಇರುವುದು ಕಂಡುಬAದಿದೆ. ಕೋವಿಡ್ ರೋಗ ಲಕ್ಷಣ ಇರುವ ಮಂದಿಗೆ ಖಾಸಗಿ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ನೀಡದೇ ಸರ್ಕಾರಿ ಆಸ್ಪತ್ರೆಗೆ ಶಿಫಾರಸ್ಸು ಮಾಡಬೇಕೆಂದು ಆರೋಗ್ಯ ಇಲಾಖೆಯಿಂದ ಕ್ಲಿನಿಕ್‌ಗಳಿಗೆ ಸೂಚನೆ ನೀಡಲಾಗಿದ್ದರೂ, ಇದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬಂದಿದೆ ಎಂಬುದು ಸದ್ಯಕ್ಕೆ ತಿಳಿದಿಲ್ಲ.

ಮುಂಜಾಗ್ರತಾ ಕ್ರಮಗಳನ್ನು ಗಾಳಿಗೆ ತೂರಿ ಕ್ಲಿನಿಕ್‌ಗಳ ಎದುರು ನಿಂತಿದ್ದ ರೋಗಿಗಳಿಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ, ಆರೋಗ್ಯ ನಿರೀಕ್ಷಕ ಜಾಸಿಂಖಾನ್ ಹಾಗೂ ಸಿಬ್ಬಂದಿಗಳು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಹೇಳಿದರು.