ಮಡಿಕೇರಿ, ಜ. ೨೫: ಕೊಡಗು ಎಂಬ ಪ್ರದೇಶ ರಾಜ್ಯದಲ್ಲಿ ಭಗವಂತ ಸೃಷ್ಟಿಸಿರುವ ಒಳ್ಳೆಯ ಜಾಗವಾಗಿದ್ದು, ಈ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಲು ಹೆಮ್ಮೆ ಇರುವುದಾಗಿ ಕೊಡಗಿಗೆ ಇದೀಗ ನೂತನವಾಗಿ ನಿಯೋಜಿಸಲ್ಪಟ್ಟಿರುವ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಈ ಜಿಲ್ಲೆ ದೇಶಕ್ಕೆ ಅನೇಕ ರೀತಿಯಲ್ಲಿ ಕೊಡುಗೆಯನ್ನು ನೀಡಿದೆ. ರಕ್ಷಣಾ ಪಡೆ, ಕ್ರೀಡೆಯಲ್ಲಿ ವಿಶೇಷವಾಗಿ ಜಿಲ್ಲೆ ಗುರುತಿಸಲ್ಪಟ್ಟಿದ್ದು, ತನ್ನತನವನ್ನು ಎತ್ತಿ ಹಿಡಿದಿದೆ. ಸಾಂಸ್ಕೃತಿಕವಾಗಿಯೂ ಇದು ವಿಶೇಷತೆಗಳ ಜಿಲ್ಲೆಯಾಗಿದೆ. ಕಾಫಿ ಸೇರಿದಂತೆ ಇತರ ಬೆಳೆಗಳ ಮೂಲಕವೂ ಕೊಡಗು ದೇಶಕ್ಕೆ ಕೊಡುಗೆ ನೀಡಿರುವ ಜಿಲ್ಲೆಯಾಗಿದ್ದು, ಇಂತಹ ಜಿಲ್ಲೆಯಲ್ಲಿ ಸಚಿವರಾಗಿ ಕೆಲಸ ನಿರ್ವಹಿಸುವ ಅವಕಾಶ ದೊರೆತಿರುವುದು ಸಂತಸ ತಂದಿದೆ ಎಂದು ನಾಗೇಶ್ ಅವರು ಹೇಳಿದರು.

ಹಲವಷ್ಟು ಹೋರಾಟಗಳ ನಡುವೆಯೂ ಕೊಡಗು ಸಮಸ್ಯೆಗಳನ್ನು ಎದುರಿಸುತ್ತಿರುವುದು ಅರಿವಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ ಸಮಸ್ಯೆಗಳನ್ನು ಸಮಗ್ರವಾಗಿ ಅರಿತುಕೊಂಡು ಕೆಲಸ ನಿರ್ವಹಿಸುವುದಾಗಿ ಅವರು ಭರವಸೆಯಿತ್ತರು. ಸ್ಥಳೀಯ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳ ಸಹಕಾರದೊಂದಿಗೆ ಕೊಡಗಿನ ಬಗ್ಗೆ ಮಾಹಿತಿ ಪಡೆಯಲಿರುವುದಾಗಿ ಹೇಳಿದ ಅವರು, ಸ್ಥಳೀಯರ ಸಹಕಾರ ಇದ್ದೇ ಇರುತ್ತದೆ. ತಾವು ಎಲ್ಲರೊಟ್ಟಿಗೆ ಜೊತೆ ಸೇರಿ ದುಡಿಯುವ ನಿಲುವು-ಸಂಸ್ಕೃತಿಯನ್ನು ಪರಿಪಾಲಿಸಿಕೊಂಡು ಬರುತ್ತಿರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಸ್ತುತದ ಕೋವಿಡ್ ಪರಿಸ್ಥಿತಿಯ ಕುರಿತು ತಾವು ತಾ. ೨೬ ರಂದು (ಇಂದು) ಜಿಲ್ಲೆಗೆ ಭೇಟಿ ನೀಡಲಿರುವ ಸಂದರ್ಭ ಎಲ್ಲರೊಂದಿಗೆ ಸಮಾಲೋಚನೆ ನಡೆಸಿ ಅದರಂತೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.