ಮಡಿಕೇರಿ, ಜ. ೨೫: ಮಡಿಕೇರಿ ನಗರಸಭೆಗೊಳಪಡುವ ಮೂರು ಶಾಲೆಗಳನ್ನು ಸರ್ಕಾರದ ವಶಕ್ಕೆ ನೀಡಲು ನಗರಸಭೆ ಚಿತ್ತ ಹರಿಸಿದೆ. ಆದರೆ, ಮೂರು ಶಾಲೆಗಳ ಪೈಕಿ ಎರಡನ್ನು ಸರ್ಕಾರದ ವಶಕ್ಕೆ ನೀಡಬಹುದಾದರೂ ಒಂದು ಶಾಲೆಯನ್ನು ಸರ್ಕಾರದ ಸುಪರ್ದಿಗೆ ವಹಿಸುವುದು ಕಷ್ಟಸಾಧ್ಯ.

ಜಿ.ಟಿ. ರಸ್ತೆಯ ನಗರಸಭಾ ಶಾಲೆ, ಹಿಲ್‌ರಸ್ತೆಯ ನಗರಸಭಾ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬನ್ನಿಮಂಟಪದ ಬಳಿ ಇರುವ ನಗರಸಭಾ ಶಾಲೆ (ಎ.ವಿ. ಶಾಲೆ) ಈ ಮೂರು ಶಾಲೆಗಳು ನಗರಸಭೆಯ ಅಧೀನದಲ್ಲೇ ನಡೆದು ಬಂದAತಹ ಶಾಲೆಗಳಾಗಿವೆ. ಆದರೆ, ಪ್ರಸ್ತುತ ಈ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಾತ್ಕಾಲಿಕ ಶಿಕ್ಷಕರುಗಳಿಗೆ ವೇತನ ನೀಡಲು ನಗರಸಭೆಯಿಂದ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಮೂರು ಶಾಲೆಗಳನ್ನು ಸರ್ಕಾರದ ವಶಕ್ಕೆ ನೀಡಲು ಇತ್ತೀಚೆಗೆ ನಗರಸಭಾ ಸಾಮಾನ್ಯ ಸಭೆಯಲ್ಲಿ ಶಾಸಕ ಅಪ್ಪಚ್ಚುರಂಜನ್ ಅವರ ಸಮ್ಮುಖದಲ್ಲಿ ಚರ್ಚೆಯಾಗಿದೆ. ಸ್ವತಃ ಶಾಸಕರೇ ಈ ಶಾಲೆಗಳನ್ನು ಸರ್ಕಾರಕ್ಕೆ ಒಪ್ಪಿಸುವ ಬಗ್ಗೆ ಹಾಗೂ ಬಳಿಕ ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಹತ್ತಿರದ ಶಾಲೆಗಳಿಗೆ ಸೇರಿಸುವ ಬಗ್ಗೆ ಸಲಹೆ ನೀಡಿದ್ದಾರೆ.

ಆದರೆ, ಇದು ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ಬರಲಿದೆ ಎಂಬುದು ಸದ್ಯಕ್ಕೆ ಉದ್ಭವಿಸಿರುವ ಪ್ರಶ್ನೆ. ಏಕೆಂದರೆ ಹಲವಾರು ವರ್ಷಗಳಿಂದ

(ಮೊದಲ ಪುಟದಿಂದ) ನಗರಸಭೆಯಲ್ಲಿ ಈ ಮೂರೂ ಶಾಲೆಗಳನ್ನು ಖಾಸಗಿ ನಿರ್ವಹಣೆಗೆ ಅಥವಾ ಸರ್ಕಾರದ ನಿರ್ವಹಣೆಗೆ ನೀಡಬೇಕೆಂದು ಚರ್ಚೆಗಳು, ತೀರ್ಮಾನಗಳು ಆಗುತ್ತಲೇ ಬಂದಿವೆಯಾದರೂ, ಇದುವರೆಗೂ ಯಾವುದೂ ಕೂಡ ನಡೆದಿಲ್ಲ. ಈ ಮಧ್ಯೆ ನಗರಸಭೆಗೊಳಪಡುವ ಮೂರು ಶಾಲೆಗಳ ಪೈಕಿ ಎರಡು ಶಾಲೆಗಳನ್ನು ಖಾಸಗಿ ಅಥವಾ ಸರ್ಕಾರದ ನಿರ್ವಹಣೆಗೆ ವಹಿಸಬಹುದಾದರೂ ಒಂದು ಶಾಲೆಯನ್ನು ಖಾಸಗಿ ಅಥವಾ ಸರ್ಕಾರದ ವಶಕ್ಕೆ ನೀಡಲು ಸಾಧ್ಯವಿಲ್ಲ. ಅದುವೇ ಜಿ.ಟಿ.ರಸ್ತೆಯ ನಗರಸಭಾ ಹಿರಿಯ ಪ್ರಾಥಮಿಕ ಶಾಲೆ!

೧೯೦೭ರಲ್ಲಿ ಆರಂಭವಾದ ಜಿ.ಟಿ. ರಸ್ತೆಯ ನಗರಸಭಾ ಹಿರಿಯ ಪ್ರಾಥಮಿಕ ಶಾಲೆ ೧೯೭೦ರಲ್ಲಿ ಅನುದಾನಿತ ಶಾಲೆಯಾಗಿ ಮಾರ್ಪಾಡಾಯಿತು. ಈ ಶಾಲೆಯ ಕಟ್ಟಡ ಹಾಗೂ ಜಾಗ ಶಾಂತಿ ಚರ್ಚ್ಗೆ ಒಳಪಟ್ಟ ಆಸ್ತಿಯಾಗಿದ್ದು, ಬಹಳ ವರ್ಷಗಳ ಹಿಂದೆ ೧ ರೂ. ಬಾಡಿಗೆ ಲೆಕ್ಕಾಚಾರದಲ್ಲಿ ಚರ್ಚ್ ಶಾಲೆ ಹಾಗೂ ಜಾಗವನ್ನು ನಗರಸಭೆಗೆ ಬಿಟ್ಟುಕೊಟ್ಟಿತು. ಆದರೆ, ಇಂದಿನವರೆಗೂ ಕೂಡ ಈ ಆಸ್ತಿ ಚರ್ಚ್ನ ಹಿಡಿತದಲ್ಲೇ ಇದೆ ಹೊರತಾಗಿ, ನಗರಸಭೆಗೆ ಒಳಪಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಈ ಶಾಲೆಯನ್ನು ಸರ್ಕಾರಕ್ಕೆ ಒಪ್ಪಿಸುವುದೂ ಕೂಡ ಅಷ್ಟೊಂದು ಸುಲಭವಲ್ಲ. ಈ ಕುರಿತು ‘ಶಕ್ತಿ’ಯೊಂದಿಗೆ ಮಾತನಾಡಿದ ಶಾಂತಿ ಚರ್ಚ್ನ ಧರ್ಮಗುರು ಅಮೃತರಾಜ್ ಅವರು, ಯಾವುದೇ ಕಾರಣಕ್ಕೂ ಈ ಶಾಲಾ ಕಟ್ಟಡ ಹಾಗೂ ಜಾಗವನ್ನು ಸರ್ಕಾರದ ವಶಕ್ಕೆ ನೀಡಲು ಸಾಧ್ಯವಿಲ್ಲ. ಒಂದು ವೇಳೆ ನಗರಸಭೆಗೆ ನಿರ್ವಹಣೆ ಮಾಡಲಾಗದಿದ್ದರೆ, ಚರ್ಚ್ಗೆ ಬಿಟ್ಟುಕೊಡಲಿ. ನಾವು ಶಾಲೆಯನ್ನು ನಿರ್ವಹಣೆ ಮಾಡುತ್ತೇವೆ ಹೊರತಾಗಿ ನಮ್ಮ ಆಸ್ತಿಯನ್ನು ಸರ್ಕಾರಕ್ಕೆ ಬಿಟ್ಟುಕೊಡಲಾರೆವು ಎಂದು ಸ್ಪಷ್ಟಪಡಿಸಿದ್ದಾರೆ. ಈ ಶಾಲೆಯಲ್ಲಿ ಪ್ರಸ್ತುತ ೩೦ ಮಕ್ಕಳಿದ್ದು, ಓರ್ವ ಖಾಯಂ ಹಾಗೂ ಇಬ್ಬರು ತಾತ್ಕಾಲಿಕ ಶಿಕ್ಷಕರಿದ್ದಾರೆ. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ಕೂಡ ಇದೇ ಶಾಲೆಯಲ್ಲಿ ಓದಿದ್ದರು ಎಂಬುದು ಇತಿಹಾಸ.

ಇನ್ನು ೧೯೧೮ರಲ್ಲಿ ಸ್ಥಾಪನೆಯಾದ ಹಿಲ್ ರಸ್ತೆಯ ನಗರಸಭಾ ಹಿರಿಯ ಪ್ರಾಥಮಿಕ ಶಾಲೆಯ ಜಾಗ ಕೂಡ ರಸೂಲ್ ಖಾನ್ ಸಾಹಿಬ್ ಹಾಗೂ ಕರೀಂ ಖಾನ್ ಸಾಹಿಬ್ ಎಂಬ ದಾನಿಗಳು ನೀಡಿದ ಜಾಗವಾಗಿದ್ದು, ಈ ಜಾಗ ಈಗಾಗಲೇ ನಗರಸಭೆಯ ಹಿಡಿತಕ್ಕೆ ಒಳಪಟ್ಟಿದೆ. ಪ್ರಸ್ತುತ ಈ ಶಾಲೆಯಲ್ಲಿ ೨೫ ಮಕ್ಕಳಿದ್ದು, ಓರ್ವ ಖಾಯಂ ಹಾಗೂ ಇಬ್ಬರು ತಾತ್ಕಾಲಿಕ ಶಿಕ್ಷಕರು ಸೇರಿ ಒಟ್ಟು ಮೂವರು ಶಿಕ್ಷಕರಿದ್ದಾರೆ. ಈ ಶಾಲೆ ೧೯೭೦ರಲ್ಲಿ ಅನುದಾನಿತ ಶಾಲೆಯಾಗಿ ಮಾರ್ಪಾಡುಗೊಂಡಿತು.

ಬನ್ನಿಮAಟಪದ ಬಳಿಯ ಆಂಗ್ಲೊ ವೆರ್ನಾಕ್ಯುಲರ್ (ಎ.ವಿ.) ಶಾಲೆಯ ಕಟ್ಟಡ ಹಾಗೂ ಜಾಗ ನಗರಸಭೆಗೆ ಸೇರಿದ್ದಾಗಿದ್ದು, ಎ.ವಿ. ಶಾಲೆ ಎಂಬುದು ಬ್ರಿಟಿಷರು ಇಟ್ಟಂತಹ ಹೆಸರು. ನಂತರದ ದಿನಗಳಲ್ಲಿ ಅದು ನಗರಸಭಾ ಶಾಲೆಯಾಗಿ ಮಾರ್ಪಾಡಾಯಿತಾದರೂ ಇಂದಿಗೂ ಎ.ವಿ. ಶಾಲೆ ಎಂದೇ ಕರೆಯಲ್ಪಡುತ್ತಿದೆ. ಈ ಶಾಲೆಯಲ್ಲಿ ಪ್ರಸ್ತುತ ೬೫ ಮಕ್ಕಳಿದ್ದು, ಇಬ್ಬರು ತಾತ್ಕಾಲಿಕ ಶಿಕ್ಷಕರು, ಓರ್ವ ಖಾಯಂ ಶಿಕ್ಷಕ ಸೇರಿ ಮೂರು ಮಂದಿ ಶಿಕ್ಷಕರಿದ್ದಾರೆ. ೧೯೧೪ರಲ್ಲಿ ಸ್ಥಾಪನೆಯಾದ ಈ ಶಾಲೆ ೧೯೭೦ರಲ್ಲಿ ಅನುದಾನಿತ ಶಾಲೆಯಾಗಿ ಮಾರ್ಪಾಡಾಯಿತು.

ಮಡಿಕೇರಿ ನಗರಸಭೆಯ ಈ ಮೂರು ಶಾಲೆಗಳು ಒಂದು ಕಾಲದಲ್ಲಿ ಬಡಮಕ್ಕಳ ಪಾಲಿಗೆ ಆಶಾಕಿರಣವಾಗಿದ್ದವು. ಕಡಿಮೆ ಶುಲ್ಕದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದ ಈ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆದ ಅದೆಷ್ಟೋ ಮಂದಿ ಇಂದು ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಒಂದೊಮ್ಮೆ ಮಕ್ಕಳಿಂದ ತುಂಬಿ ತುಳುಕುತ್ತಿದ್ದ ಈ ಶಾಲೆಗಳಲ್ಲಿ ಪ್ರಸ್ತುತ ಮಕ್ಕಳ ಸಂಖ್ಯೆ ಕುಸಿಯಲ್ಪಟ್ಟಿದೆ. ಪ್ರತಿಯೊಂದು ಪಠ್ಯ ವಿಷಯಗಳಿಗೆ ಒಬ್ಬೊಬ್ಬರು ಶಿಕ್ಷಕರಿದ್ದ ಈ ಶಾಲೆಗಳಲ್ಲಿ ಈಗ ಶಿಕ್ಷಕರ ಕೊರತೆಯಿಂದಾಗಿ ಇರುವಂತಹ ಎರಡು - ಮೂರು ಶಿಕ್ಷಕರುಗಳು ಎಲ್ಲಾ ವಿಷಯಗಳನ್ನು ಮಕ್ಕಳಿಗೆ ಬೋಧಿಸಬೇಕಾದ ಅನಿವಾರ್ಯತೆ ಬಂದೊದಗಿದೆ.

ಇದೆAತಾ ವಿಪರ್ಯಾಸ!

ಮಡಿಕೇರಿ ನಗರಸಭೆ ಜಿಲ್ಲೆಯ ಏಕೈಕ ನಗರಸಭೆಯಾಗಿದೆ. ಸಾಕಷ್ಟು ಅನುದಾನ ಕೂಡ ಸರ್ಕಾರದಿಂದ ನಗರಸಭೆಗೆ ಬರುತ್ತಿದೆ. ನಗರಸಭಾ ಶಾಲೆಗಳ ಕಟ್ಟಡ ಇತ್ಯಾದಿಗಳನ್ನು ನಗರಸಭೆಯೇ ನಿರ್ವಹಣೆ ಮಾಡುತ್ತಿದೆ. ಆದರೆ, ಇಲ್ಲಿನ ತಾತ್ಕಾಲಿಕ ಶಿಕ್ಷಕರಿಗೆ ವೇತನ ನೀಡಲು ಮಾತ್ರ ನಗರಸಭೆ ಮುಂದಾಗುತ್ತಿಲ್ಲ. ಇದರಿಂದಾಗಿ ಶಿಕ್ಷಕರು ಪರದಾಡುವಂತಾಗಿದೆ. ದಾನಿಗಳು, ಸಹೋದ್ಯೋಗಿಗಳ ನೆರವಿನ ಮೂಲಕ ತಾತ್ಕಾಲಿಕ ಶಿಕ್ಷಕರು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಸಮರ್ಪಕ ವೇತನ ಸಿಗದ ಕಾರಣ ಈ ಶಾಲೆಗಳಲ್ಲಿ ಬಹುತೇಕ ತಾತ್ಕಾಲಿಕ ಶಿಕ್ಷಕರುಗಳು ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ಹಾಗಾಗಿ ಶಿಕ್ಷಕರ ಕೊರತೆಯೊಂದಿಗೆ ನೂರಾರು ಮಕ್ಕಳು ಕಲಿಯುತ್ತಿದ್ದ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಎರಡಂಕಿಗೆ ಬಂದು ತಲುಪಿದೆ. ಹೀಗಿದ್ದರೂ ಕೂಡ ನಿಯಮಗಳನ್ನು ಮುಂದಿಟ್ಟುಕೊAಡು ನಗರಸಭೆಯಿಂದ ವೇತನ ನೀಡಲು ಅವಕಾಶವಿಲ್ಲ ಎಂದು ಹೇಳುವುದು ಎಷ್ಟು ಸರಿ? ಕೋಟಿಗಟ್ಟಲೆ ಅನುದಾನ ಬರುವ ನಗರಸಭೆಗೆ ಮೂರು ಶಾಲೆಗಳನ್ನು ನಿರ್ವಹಣೆಯೊಂದಿಗೆ ಉಳಿಸಿಕೊಳ್ಳಲು ಸಾಧ್ಯವಾಗದಿರುವುದು ವಿಪರ್ಯಾಸವೇ ಸರಿ.

- ಉಜ್ವಲ್ ರಂಜಿತ್.