ಮಡಿಕೇರಿ, ಜ. ೨೫: ಅಕ್ರಮವಾಗಿ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ೧೧ ಎಮ್ಮೆ, ೭ ಹಸು ಹಾಗೂ ೬ ಕರು ಸೇರಿ ೨೪ ಜಾನುವಾರುಗಳನ್ನು ಪೊಲೀಸರು ರಕ್ಷಿಸಿ, ಮೈಸೂರಿನ ಗೋಶಾಲೆಗೆ ರವಾನಿಸಿದ್ದಾರೆ.

ಸಂಪಾಜೆ ಚೆಕ್‌ಪೋಸ್ಟ್ನಲ್ಲಿ ತಾ. ೨೫ರ ಮುಂಜಾನೆ ೩.೩೦ರ ಸುಮಾರಿಗೆ ವಾಹನಗಳ ತಪಾಸಣೆ ಮಾಡುವ ಸಂದರ್ಭದಲ್ಲಿ ಕೆಎ-೦೫-ಎಎ-೮೬೦೫ ನೋಂದಣಿಯ ಲಾರಿಯೊಂದು ಬಂದಿದೆ. ಮೇಲ್ನೋಟಕ್ಕೆ ವಾಹನದಲ್ಲಿ ಮೂಟೆಗಳಿರಬಹುದು ಎಂದು ಅಂದಾಜಿಸಲಾಗಿತ್ತು. ಲಾರಿಗೆ ಪ್ಲಾಸ್ಟಿಕ್ ಟರ್ಪಲ್ ಅನ್ನು ಗಟ್ಟಿಯಾಗಿ ಕಟ್ಟಲಾಗಿತ್ತು. ಅನುಮಾನಗೊಂಡ ಚೆಕ್ ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ಕಟ್ಟಿದ್ದ ಹಗ್ಗವನ್ನು ಬಿಚ್ಚಲು ಮುಂದಾಗಿದ್ದಾರೆ. ಈ ಸಂದರ್ಭ ಹೆದರಿದ ವಾಹನ ಚಾಲಕ ಹಾಗೂ ಇನ್ನೋರ್ವ ಆರೋಪಿ ವಾಹನವನ್ನು ಅಲ್ಲೇ ಬಿಟ್ಟು ಸನಿಹದ ಕಾಡಿನೊಳಗೆ ಓಡಿ ಪರಾರಿಯಾಗಿದ್ದಾರೆ. ಇವರನ್ನು ಕೆಲ ದೂರು ಹಿಂಬಾಲಿಸಿದರು ಕತ್ತಲಾಗಿದ್ದ ಹಿನ್ನೆಲೆ ಅವರ ಸುಳಿವು ದೊರೆತಿಲ್ಲ.

ಬಳಿಕ ಕಟ್ಟಿದ್ದ ಹಗ್ಗ ಬಿಚ್ಚಿ ಪ್ಲಾಸ್ಟಿಕ್ ಟರ್ಪಲ್ ಅನ್ನು ತೆಗೆದು ನೋಡಿದರೆ ಎಮ್ಮೆ, ಕರು, ಹಸುಗಳು ಸೇರಿ ೨೪ ಜಾನುವಾರುಗಳು ಲಾರಿಯೊಳಗೆ ಉಸಿರುಗಟ್ಟುವ ಪರಿಸ್ಥಿತಿಯಲ್ಲಿ ಪತ್ತೆಯಾಗಿವೆೆ. ತಕ್ಷಣ ಪೊಲೀಸರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ನಂತರ ವಾಹನ ಹಾಗೂ ಜಾನುವಾರುಗಳನ್ನು ಗ್ರಾಮಾಂತರ ಠಾಣೆಗೆ ತಂದು ಹಸುಗಳಿಗೆ ಮೇವು, ನೀರನ್ನು ನೀಡಿ ಪೋಷಿಸಿದ್ದಾರೆ.

ಚಿಕ್ಕ ಜಾಗದಲ್ಲಿ ಹಸುಗಳ ಕುತ್ತಿಗೆಗೆ ಹಗ್ಗವನ್ನು ಕಟ್ಟಲಾಗಿತ್ತು. ಅದಲ್ಲದೆ

(ಮೊದಲ ಪುಟದಿಂದ) ಹಸುಗಳು ಕಿರುಚಬಾರದೆಂದು ಅದರ ಬಾಯಿಗಳಿಗೆ ಹಗ್ಗದಲ್ಲಿ ಕಟ್ಟಿ ಅಮಾನುಷವಾಗಿ ಕೊಂಡೊಯ್ಯು ತ್ತಿದ್ದರು. ಇದನ್ನು ನೋಡಿದ ಪೊಲೀಸರು ಕಟ್ಟಿದ ಹಗ್ಗವನ್ನು ಬಿಚ್ಚಿ ಮೇವು ತರಿಸಿ, ನೀರು ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ.

ಪ್ರಾಥಮಿಕ ಮಾಹಿತಿಯಂತೆ ವಾಹನ ಮೈಸೂರು ನೋಂದಣಿ ಹೊಂದಿದ್ದು, ಮಂಗಳೂರು ಅಥವಾ ಕೇರಳಕ್ಕೆ ಕಸಾಯಿಖಾನೆಗೆ ಸಾಗಾಟ ಮಾಡುವ ಉದ್ದೇಶದಿಂದ ಜಾನುವಾರು ಗಳನ್ನು ಕೊಂಡೊಯ್ಯು ತ್ತಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿರುವ ಗ್ರಾಮಾಂತರ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ.