ಸೋಮವಾರಪೇಟೆ, ಜ. ೨೫ : ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಅನುಷ್ಠಾನಗೊಳ್ಳುವ ಅಭಿವೃದ್ಧಿ ಕಾಮಗಾರಿಗಳು ಕಳಪೆಯಾಗದಂತೆ ಸಾರ್ವಜನಿಕರೂ ಸಹ ಎಚ್ಚರಿಕೆ ವಹಿಸಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು.

ಜಿಲ್ಲಾ ಪಂಚಾಯತ್ ಹಾಗೂ ಲೋಕೋಪಯೋಗಿ ಇಲಾಖೆಗಳ ಮೂಲಕ ಸಮೀಪದ ನೇರುಗಳಲೆ ಹಾಗೂ ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿರುವ ಕಾಂಕ್ರೀಟ್ ರಸ್ತೆ, ಚರಂಡಿ, ಮೋರಿ, ಡಾಂಬರು ರಸ್ತೆ, ಕಿರು ಸೇತುವೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮಳೆ ಹೆಚ್ಚು ಬೀಳುವ ಕೊಡಗಿನಲ್ಲಿ ಕಾಂಕ್ರಿಟ್ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಾರ್ವಜನಿಕ ಸಂಪರ್ಕ ರಸ್ತೆಗಳು ಉತ್ತಮಗೊಂಡರೆ ಮಾತ್ರ ಗ್ರಾಮಗಳು ಅಭಿವೃದ್ಧಿ ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗುಣಮಟ್ಟದ ಕಾಂಕ್ರೀಟ್ ರಸ್ತೆಗಳ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದು, ಕಾಮಗಾರಿ ಕಳಪೆಯಾಗದಂತೆ ಅಭಿಯಂತರರು ಹಾಗೂ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದರು.

ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೧.೩೩ ಕೋಟಿ ಹಾಗೂ ನೇರುಗಳಲೆ ಗ್ರಾ.ಪಂ. ವ್ಯಾಪ್ತಿಯಲ್ಲಿ ೯೮ ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ನಿಗದಿತ ಅವಧಿಯೊಳಗೆ ಕಾಮಗಾರಿಗಳು ಪೂರ್ಣಗೊಳ್ಳಬೇಕೆಂದು ಅಭಿಯಂತರರಿಗೆ ಸೂಚಿಸಿದರು.

ಗಣಗೂರು ಗ್ರಾ.ಪಂ. ಅಧ್ಯಕ್ಷ ಶಶಿಕುಮಾರ್, ಉಪಾಧ್ಯಕ್ಷ ವಿರೂಪಾಕ್ಷ, ಸದಸ್ಯರುಗಳು, ಪ್ರಮುಖರಾದ ಈರಪ್ಪ, ರಾಮಕೃಷ್ಣ, ನೇರುಗಳಲೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪ, ಉಪಾಧ್ಯಕ್ಷ ಟಿ.ಆರ್. ಪ್ರವೀಣ್ ಸೇರಿದಂತೆ ಸದಸ್ಯರುಗಳು, ಪ್ರಮುಖರಾದ ಪ್ರದೀಪ್, ರವಿ, ಕಿಶೋರ್, ಗೋಪಿ ಸೇರಿದಂತೆ ಇತರರು ಉಪಸ್ಥಿತರಿದ್ದರು.