ಮಡಿಕೇರಿ, ಜ. 18: ಜಿಲ್ಲೆಯಲ್ಲಿ ಕೋವಿಡ್ನಿಂದ ಮೃತಪಟ್ಟ 331 ಜನರ ಕುಟುಂಬಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನೀಡಲಾಗುವ ಪರಿಹಾರ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಹೇಳಿದರು.
ನಗರದ ಬಾಲಭವನದ ಸಭಾಂಗಣದಲ್ಲಿ ಕೊಡಗು ಜಿಲ್ಲಾ ರೆಡ್ ಕ್ರಾಸ್ ಘಟಕದ ವತಿಯಿಂದ ಕೋವಿಡ್ ಸಂತ್ರಸ್ತರ ಕುಟುಂಬಗಳಿಗೆ ಹೊಲಿಗೆ ಯಂತ್ರ, ದಿನಸಿ ಕಿಟ್ ವಿತರಿಸಿ ಮಾತನಾಡಿದ ರೆಡ್ಕ್ರಾಸ್ ಜಿಲ್ಲಾ ಅಧ್ಯಕ್ಷರೂ ಕೂಡ ಆಗಿರುವ ಜಿಲ್ಲಾಧಿಕಾರಿ, ಕೊಡಗಿನಲ್ಲಿ ಕೋವಿಡ್ ಸೋಂಕಿಗೆ ಈವರೆಗೆ 438 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಕೆಲವರು ಮನೆಯಲ್ಲಿಯೇ ಸ್ವಯಂ ಚಿಕಿತ್ಸೆ ಪಡೆದು ಸಾವನ್ನಪ್ಪಿದ್ದಾರೆ. ಈ ರೀತಿಯ ಪ್ರಕರಣ ಹೊರತುಪಡಿಸಿ ಕೋವಿಡ್ ನಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ 331 ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ರೂ. 50 ಸಾವಿರ ಹಾಗೂ ರಾಜ್ಯ ಸರ್ಕಾರದಿಂದ ರೂ. 1 ಲಕ್ಷ ಪರಿಹಾರ ನೀಡಲಾಗುತ್ತಿದೆ. ಮನೆಯಲ್ಲಿಯೇ ಚಿಕಿತ್ಸೆ ಪಡೆದು ಸಾವನ್ನಪ್ಪಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಆದೇಶಿಸಿದ ಹಿನ್ನೆಲೆಯಲ್ಲಿ ಅಂಥ ಪ್ರಕರಣಗಳನ್ನೂ ಪರಿಶೀಲಿಸಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.ಕೋವಿಡ್ ಸೋಂಕು ಜಗತ್ತನ್ನೇ ವ್ಯಾಪಿಸಿದ ಬಳಿಕ ಜನ ಸಮುದಾಯಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆಯಾಗುತ್ತಲೇ ಇದೆ. ಇದೀಗ ಕೋವಿಡ್ನ 3ನೇ ಅಲೆ ಪ್ರಾರಂಭವಾಗಿದೆ. ನಂತರದ ದಿನಗಳಲ್ಲಿ 4 ಮತ್ತು 5ನೇ ಅಲೆಯನ್ನೂ ನಿರೀಕ್ಷಿಸಲಾಗಿದೆ. ಸದ್ಯಕ್ಕೆ ಸೋಂಕಿ ನಿಂದ ವಿಶ್ವಕ್ಕೆ ಮುಕ್ತಿ ದೊರಕುವುದು ಕಷ್ಟ ಸಾಧ್ಯವಾಗಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರು ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರವನ್ನು ಸಾರ್ವಜನಿಕ ಸ್ಥಳಗಳಲ್ಲಿ ಕಾಯ್ದುಕೊಂಡು ಕೋವಿಡ್ ನಿಯಮಾವಳಿಗಳನ್ನು ಶಿಸ್ತುಬದ್ಧವಾಗಿ ಪಾಲಿಸಬೇಕಾಗಿದೆ. ಮಾರ್ಚ್ ಅಂತ್ಯದವರೆಗೂ ಕೋವಿಡ್ ತೀವ್ರತೆ ಇರುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಸತೀಶ ಹೇಳಿದರು.
ಪ್ರಸ್ತುತ 15-18ನೇ ವಯಸ್ಸಿನ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗುತ್ತಿದೆ. ಮಾರ್ಚ್ನಿಂದ 11-14 ನೇ ವಯಸ್ಸಿನ ವಿದ್ಯಾರ್ಥಿಗಳಿಗೂ ಲಸಿಕೆ ನೀಡಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಕೋವಿಡ್ನಿಂದ ತಂದೆ, ತಾಯಿಯರನ್ನು ಕಳೆದುಕೊಂಡ ಮಕ್ಕಳ ಪೋಷಣೆಯ ಹೊಣೆಯನ್ನು ಸರ್ಕಾರವೇ ವಹಿಸಿಕೊಳ್ಳುತ್ತಿದೆ. ಬಾಲಸ್ನೇಹಿ ಯೋಜನೆ ಮುಖಾಂತರ ಇಂಥ ಮಕ್ಕಳ ಪಾಲಕರಿಗೆ ಮಾಸಿಕ ರೂ. 3,500 ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ 5 ಮಕ್ಕಳ ಪಾಲಕರಿಗೆ ಈ ಸೌಲಭ್ಯ ದೊರಕಿದೆ. ಇವರ ಶಿಕ್ಷಣದ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದ ಡಾ.ಸತೀಶ ಮಾಹಿತಿ ನೀಡಿದರು.
ಕೊಡಗು ಜಿಲ್ಲಾ ರೆಡ್ ಕ್ರಾಸ್ ಘಟಕವು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ದಿನಗಳಿಂದಲೂ ಈವರೆಗೆ ಸತತವಾಗಿ ಕಾರ್ಯಪ್ರವೃತ್ತ ವಾಗಿ ಫಲಾನುಭವಿಗಳಿಗೆ ಸೂಕ್ತ ನೆರವು ನೀಡಿ ಶ್ಲಾಘನೆಗೆ ಪಾತ್ರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಯಾವುದೇ ಸಂದರ್ಭದಲ್ಲಿಯೂ ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾದ ರೆಡ್ಕ್ರಾಸ್ ಜನರ ನೆರವಿಗೆ ಬರುತ್ತದೆ ಎಂದು ಭರವಸೆ ನೀಡಿದರು.
ಕೊಡಗು ರೆಡ್ಕ್ರಾಸ್ ಘಟಕದ ಸಭಾಪತಿ ಬಿ.ಕೆ. ರವೀಂದ್ರ ರೈ ಮಾತನಾಡಿ, ಪ್ರಸ್ತುತ ಜಿಲ್ಲೆಯ 16 ಫಲಾನುಭವಿಗಳಿಗೆ ಯಾಂತ್ರಿಕ ಹೊಲಿಗೆ ಯಂತ್ರ, 60 ಫಲಾನುಭವಿಗಳಿಗೆ ಆಹಾರದ ಕಿಟ್ ವಿತರಿಸಲಾಗಿದೆ. ರೆಡ್ಕ್ರಾಸ್ ಜಿಲ್ಲೆಯಲ್ಲಿ 3 ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ 25 ಸಾವಿರ ಸ್ಯಾನಿಟೈಸರ್, 35 ಸಾವಿರ ಮಾಸ್ಕ್ಗಳನ್ನು ರೆಡ್ಕ್ರಾಸ್ನಿಂದ ಜನತೆಗೆ ವಿತರಿಸಲಾಗಿದೆ. ರೆಡ್ಕ್ರಾಸ್ನಿಂದ ಹೊಸ ಸಮುದಾಯ ಭವನ ನಿರ್ಮಾಣವಾಗುತ್ತಿದ್ದು ಶೀಘ್ರದಲ್ಲಿಯೇ ಉದ್ಘಾಟನೆಯಾಗಲಿದೆ ಎಂದು ಮಾಹಿತಿ ನೀಡಿದರು.
ರೆಡ್ಕ್ರಾಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಮುರಳೀಧರ್, ಜಿಲ್ಲಾ ಉಪಸಭಾಪತಿ ಗಳಾದ ಅನಿಲ್ ಎಚ್.ಟಿ., ಶ್ಯಾಂಜೊಸೇಫ್, ಯೂತ್ ರೆಡ್ಕ್ರಾಸ್ ರಾಜ್ಯ ನಿರ್ದೇಶಕ ಪ್ರಸಾದ್ ಗೌಡ, ಜಿಲ್ಲಾ ನಿರ್ದೇಶಕ ಎಂ. ಧನಂಜಯ್, ಜಿಲ್ಲಾ ಸದಸ್ಯರಾದ ಶಿಲ್ಪಾ ರೈ, ವಿಕ್ರಂ ಶೆಟ್ಟಿ, ಶರತ್ ಶೆಟ್ಟಿ, ವಿಜಯಕುಮಾರ್ ಶೆಟ್ಟಿ, ಸುಬ್ರಮಣ್ಯ ದೇವಾಡಿಗ ಹಾಜರಿದ್ದರು. ಕಾರ್ಯಕ್ರಮವನ್ನು ಎಂ. ಧನಂಜಯ್ ಸ್ವಾಗತಿಸಿ, ಮುರಳೀಧರ್ ವಂದಿಸಿ, ವಿಕ್ರಂಶೆಟ್ಟಿ ನಿರೂಪಿಸಿದರು.