ಮಡಿಕೇರಿ, ಜ. ೧೪: ಕಾಫಿ ತೋಟಗಳ ಲೈನ್‌ಮನೆಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗದವರಿಗೆ ವಸತಿ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಬೇಕು. ಈ ನಿಟ್ಟಿನಲ್ಲಿ ವಿಶೇಷ ನೀತಿ ಜಾರಿಗೊಳಿಸುವಂತೆ ಬುಡಕಟ್ಟು ಕಾರ್ಮಿಕರ ಸಂಘದ ಕೊಡಗು ಜಿಲ್ಲಾ ಘಟಕ ಆಗ್ರಹಿಸಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ವೈ.ಬಿ. ಗಪ್ಪು, ಜಿಲ್ಲೆಯ ಲೈನ್‌ಮನೆಗಳಲ್ಲಿ ಸುಮಾರು ೮ ಸಾವಿರಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆÉ ಎಂದು ಜಿಲ್ಲಾಡಳಿತ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಆದರೆ, ೧೦ ಸಾವಿರಕ್ಕೂ ಹೆಚ್ಚು ಕುಟುಂಬಗಳು ಲೈನ್‌ಮನೆಗಳಲ್ಲಿ ನೆಲೆಸಿವೆ. ಸರಕಾರ ಸೌಲಭ್ಯಗಳಿಂದ ವಂಚಿತರಾಗಿರುವ ಕುಟುಂಬಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಆರ್ಥಿಕ ಹಾಗೂ ಸಾಮಾಜಿಕ ಹಿಂದುಳಿದಿರುವ ಆದಿವಾಸಿಗಳ ಸಮಸ್ಯೆ ಪರಿಹಾರಕ್ಕೆ ಸರಕಾರ ಹಾಗೂ ಜಿಲ್ಲಾಡಳಿತ ಮುತುವರ್ಜಿ ವಹಿಸಬೇಕು. ಅಲ್ಲದೆ ತೋಟಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕನಿಷ್ಟ ವೇತನ ದೊರೆಯುತ್ತಿಲ್ಲ ಎಂದು ಆರೋಪಿಸಿದರು.

ವಸತಿ ಸೌಲಭ್ಯವಿಲ್ಲದ ಲೈನ್‌ಮನೆ ವಾಸಿಗಳಿಗೆ ನಿವೇಶನ ಒದಗಿಸಬೇಕು. ಈ ಬಗ್ಗೆ ಹಕ್ಕೊತ್ತಾಯ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಸ್ಥಳ ಪರಿಶೀಲಿಸಿ ಆದಿವಾಸಿಗಳ ಸಂಕಷ್ಟವನ್ನು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ಸೂಕ್ತ ಸ್ಪಂದನ ಜಿಲ್ಲಾಡಳಿತದಿಂದ ದೊರೆಯದಿದ್ದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗಪ್ಪು ಎಚ್ಚರಿಸಿದರು.

ರಾಜ್ಯ ಕಾರ್ಯದರ್ಶಿ ಶೈಲೇಂದ್ರ ಮಾತನಾಡಿ, ವಿವಿಧ ಯೋಜನೆಗಳ ಮೂಲಕ ನಿವೇಶನ ಒದಗಿಸಲು ಅವಕಾಶಗಳಿವೆ. ಆದರೆ, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಯೋಜನೆಗಳು ಕಾರ್ಯಗತಗೊಳ್ಳುತ್ತಿಲ್ಲ ಎಂದರು.

ಸಮಿತಿ ಸದಸ್ಯೆ ಬಿ.ಕೆ. ರಾಣಿ ಮಾತನಾಡಿ, ಕನಿಷ್ಟ ವೇತನವಿಲ್ಲದೆ ಕಾರ್ಮಿಕರು ಆರ್ಥಿಕವಾಗಿ ಸಮಸ್ಯೆಯಲ್ಲಿದ್ದಾರೆ. ಮಾಲೀಕರಿಂದ ಪಡೆದ ಸಾಲ ತೀರಿಸಲಾಗದೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಆದಿವಾಸಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯಪ್ರವೃತ್ತಗೊಳ್ಳಬೇಕೆಂದು ಆಗ್ರಹಿಸಿದರು.

ಶಾಲೆ ಬಂದ್ ಮಾಡದಂತೆ ಒತ್ತಾಯ

ಕೋವಿಡ್ ಹೆಚ್ಚಾಗುತ್ತಿದೆ ಎಂದು ಶಾಲೆ ಬಂದ್ ಮಾಡುವ ಸರಕಾರದ ಕ್ರಮವನ್ನು ಸಮಿತಿ ವಿರೋಧಿಸಿದೆ. ಯಾವುದೇ ಕಾರಣಕ್ಕೂ ಶಾಲೆ ಬಂದ್ ಮಾಡಬಾರದು. ಇದರಿಂದ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿಯುತ್ತಾರೆ. ಅದಲ್ಲದೆ ಬಾಲ್ಯವಿವಾಹ, ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಸಮಿತಿ ರಾಜ್ಯ ಕಾರ್ಯದರ್ಶಿ ಶೈಲೇಂದ್ರ ಹೇಳಿದರು.

ಸೌಲಭ್ಯ ವಂಚಿತರಾಗಿರುವ ಆದಿವಾಸಿ ಮಕ್ಕಳ ಶಿಕ್ಷಣ ಸರಕಾರದ ಆದ್ಯತೆಯಾಗಬೇಕು. ಶಾಲೆ ಬಂದ್ ಮಾಡುವುದಾದರೆ ಹಾಡಿಗಳಲ್ಲಿರುವ ಮಕ್ಕಳಿಗೆ ಶಿಕ್ಷಣಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಚಿನ್ನಮ್ಮ, ವೈ.ಎ. ದೇವಕ್ಕಿ, ಬಿ.ಕೆ. ರಾಣಿ, ವೈ.ಎಂ. ರತಿ ಇದ್ದರು.