ಚೆಟ್ಟಳ್ಳಿ, ನ. ೨೫: ಸಮೀಪದ ಕಡಗದಾಳುವಿನ ಪುರಾತನ ಇತಿಹಾಸ ಹೊಂದಿರುವ ಕುರುಳಿ ಅಂಬಲ ಮಂದ್‌ನಲ್ಲಿ ಕೋಲ್ ತಕ್ಕಮುಖ್ಯಸ್ಥರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಪುತ್ತರಿ ಕೋಲ್ ನೆರವೇರಿತು.

ಅಪರಾಹ್ನ ೧೨ ಗಂಟೆಗೆ ಊರಿನವರು ಮಂದ್‌ನಲ್ಲಿ ಸೇರಿ ಊರು ತಕ್ಕರಾದ ಕೊರವಂಡ ಕುಟುಂಬದ ಮನೆಯಿಂದ ದುಡಿಕೊಟ್ಟ್ ಹಾಗೂ ಒಡ್ಡೋಲಗದ ಮೂಲಕ ಊರು ತಕ್ಕರನ್ನು ಮಂದ್‌ಗೆ ಕರೆತಂದು ಊರುಕೋಲ್ ಪ್ರದರ್ಶನ ನಡೆಯಿತು. ಪಾಂಡಿರ ಕುಟುಂಬದ ದೇಶತಕ್ಕರನ್ನು ಒಡ್ಡೋಲಗ ದುಡಿಕೊಟ್ಟ್ ಹಾಡಿನೊಂದಿಗೆ ಮಂದ್‌ಗೆ ಕರೆತಂದು ಈ ಮಂದ್‌ಗೆ ಸಂಬAಧಿಸಿದ ಮಡಿಕೇರಿನಾಡ್, ನೂರ್‌ಕೋಲ್‌ನಾಡ್, ಮರಗೋಡ್ ನಾಡ್, ಪೊರೆನಾಲ್ ನಾಡ್, ಅಂದಗೋವೆ ನಾಡ್, ಕಗ್ಗೋಡ್ ನಾಡ್ ನವರ ತಕ್ಕಮುಖ್ಯಸ್ಥರು ಹಾಗೂ ಊರಿನವರನ್ನು ಸತ್ಕರಿಸಿ ಮಂದ್‌ಗೆ ಕರೆ ತರಲಾಯಿತು. ಮಂದ್‌ನಲ್ಲಿ ಬೊಳಕಾಟ್ ಪರೆಕಳಿ ಪ್ರದರ್ಶನ ನಡೆದವು. ಪುರಾತನ ಮಂದ್‌ನ್ನು ಪುನರ್ ನವೀಕರಣಗೊಳಿಸಲಾದ ಬಗ್ಗೆ ಮಂದ್ ಸಮಿತಿಯ ಅಧ್ಯಕ್ಷ ಮಾದೇಟಿರ ಬೆಳ್ಳಿಯಪ್ಪ ತಿಳಿಸಿದರು. ಹಲವು ನಾಡಿನವರು ಮಂದ್ ಅಭಿವೃದ್ಧಿಗೆ ಆರ್ಥಿಕ ಸಹಾಯ ನೀಡಿದರು. ಕುರುಳಿ ಅಂಬಲ ಮಂದ್‌ನ ಜಾಗವನ್ನು ರಕ್ಷಿಸಿ ಕೊಳ್ಳುವಂತಾಗಬೇಕೆAದು ಊರಿನ ಹಿರಿಯರು ತಿಳಿಸಿದರು. ಫಲಹಾರ ನಡೆದ ನಂತರ ಊರಿನವರು ಊರುತಕ್ಕರನ್ನು ಮನೆಗೆ ಊರಿನ ಗೌರವದೊಂದಿಗೆ ಬಿಟ್ಟು ಬರಲಾಯಿತು. ಶುಕ್ರವಾರ ವಿಷ್ಣುಮೂರ್ತಿ ಪೂಜೆ ನಡೆದು ರಾತ್ರಿಯಾಗುತ್ತಲೆ ಊರಿನವರು ಮಂದ್‌ಗೆ ಬಂದು ಕೋಲನ್ನು ದೇವನೆಲೆಯಲ್ಲಿ ಒಪ್ಪಿಸುವರು.

- ಕಾಳಯ್ಯ