ರಾಜಕಾಲುವೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

ಬೆಂಗಳೂರು: ೩೦ ಕಿ.ಮೀ. ರಾಜಕಾಲುವೆ ಕಾಮಗಾರಿಯನ್ನು ಜನವರಿ ಅಂತ್ಯಕ್ಕೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ತಿಳಿಸಿದ್ದಾರೆ. ಇಂದು ನಗರದಲ್ಲಿ ಬೃಹತ್ ಕಾಲುವೆಗಳ ಕುರಿತಂತೆ ಬಿಬಿಎಂಪಿಯಲ್ಲಿ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ನಗರದಲ್ಲಿ ಅತಿ ಹೆಚ್ಚು ಮಳೆಯಾಗಿರುವ ಹಿನ್ನೆಲೆ ತಗ್ಗು ಪ್ರದೇಶಗಳಲ್ಲಿ ನೀರು ಮನೆಗಳಿಗೆ ನುಗ್ಗಿದೆ. ಕೆರೆ ಕೆಳಗೆ ಇರುವ ರಾಜಕಾಲುವೆಗಳನ್ನು ದುರಸ್ತಿ ಮಾಡಿ, ಅದರ ನೀರಿನ ಸಾಗಣೆ ಸಾಮರ್ಥ್ಯವನ್ನು ಹೆಚ್ಚಿಸಬೇಕು ಎನ್ನುವ ವಿಚಾರದ ಬಗ್ಗೆ ಇಂದು ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು. ನಗರದೊಳಗಿನ ರಾಜಕಾಲುವೆಗಳ ಕಲ್ಲಿನ ಕಟ್ಟಡಗಳನ್ನು ಆರ್.ಸಿ.ಸಿ. ಕಟ್ಟಡಗಳಿಗೆ ಪರಿವರ್ತಿಸಬೇಕು. ಹೊರವಲಯದ ಗ್ರಾಮೀಣ ಪ್ರದೇಶಗಳಲ್ಲಿ ಮಣ್ಣಿನ ಕಾಲುವೆಗಳಿವೆ. ೧೧೦ ಗ್ರಾಮಗಳಲ್ಲಿ ಆರ್.ಸಿ.ಸಿ. ಕಾಲುವೆಗಳನ್ನು ನಿರ್ಮಿಸಿ, ಅವುಗಳ ಅಗಲ ವಿಸ್ತರಿಸಬೇಕು. ಅಲ್ಲಲ್ಲಿ ಇರುವ ಅಡಚಣೆಗಳನ್ನು ತೆಗೆಯಲು ವಿಶೇಷ ಕ್ರಮ ಕೈಗೊಳ್ಳಬೇಕಿದೆ. ಈ ಬಗ್ಗೆ ಇಂದಿನ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ ಎಂದರು. ಪ್ರತಿಯೊಬ್ಬ ಕಾರ್ಯನಿರ್ವಾಹಕ ಅಭಿಯಂತರರು ಅವರವರ ವ್ಯಾಪ್ತಿಗೆ ಬರುವ ವಿಚಾರಗಳಿಂದ ಮಾಹಿತಿ ಪಡೆದುಕೊಂಡು, ಕಟ್ಟುನಿಟ್ಟಿನ ಆದೇಶವನ್ನು ನೀಡಲಾಗಿದೆ. ವೃಷಭಾವತಿ, ಹೆಬ್ಬಾಳ, ಚಲ್ಲಘಟ್ಟ ಮತ್ತು ಕೋರಮಂಗಲ ನಗರದ ನಾಲ್ಕು ವ್ಯಾಲಿಗಳಿಗೆ ೮೪೨ ರಾಜಕಾಲುವೆ ಇವೆ. ಈ ಪೈಕಿ ೪೧೫ ಕಿ.ಮೀ. ಈಗಾಗಲೇ ಪೂರ್ಣಗೊಂಡಿದೆ. ೨೦೧೯ -೨೦ ರಲ್ಲಿ ೭೫ ಕಿ.ಮೀ. ರಾಜಕಾಲುವೆ ನಿರ್ಮಾಣಕ್ಕೆ ಅನುಮತಿ ನೀಡಲಾಗಿದ್ದು, ಅದರಲ್ಲಿ ೪೦ ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಹಲವು ಗಂಭೀರ ಸ್ಥಳಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ಸುಮಾರು ೯೪ ಗಂಭೀರ ಸ್ಥಳಗಳಿವೆ. ಅವುಗಳ ವಿವರಗಳನ್ನು ಪಡೆದಿದ್ದೇನೆ. ಅವುಗಳನ್ನು ಇನ್ನು ೨ ತಿಂಗೊಳಗೆ ಪೂರ್ಣಗೊಳಿಸಲು ಸೂಚನೆ ನೀಡಿದ್ದೇನೆ ಎಂದರು.

ಎಸಿಬಿ ದಾಳಿ: ಪೈಪ್‌ನಲ್ಲಿ ಕಂತೆ-ಕAತೆ ಹಣ..!

ಕಲಬುರಗಿ, ನ. ೨೪: ರಾಜ್ಯದಲ್ಲಿ ಎಸಿಬಿ ದಾಳಿ ಭಾರೀ ಸದ್ದು ಮಾಡುತ್ತಿದೆ. ಸರ್ಕಾರದ ವಿವಿಧ ಇಲಾಖೆಗಳ ೧೫ ಅಧಿಕಾರಿಗಳಿಗೆ ಸಂಬAಧಿಸಿದ ೬೮ ಕಡೆಗಳಲ್ಲಿ ಎಸಿಬಿ ಬುಧವಾರ ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದು ೪೦೮ ಎಸಿಬಿ ಅಧಿಕಾರಿಗಳು ಅಕ್ರಮ ಸಂಪತ್ತಿನ ಬೆನ್ನ ಹತ್ತಿ ಹೊರಟಿದ್ದಾರೆ. ಈ ಸಂದರ್ಭದಲ್ಲಿ ಅಪಾರ ಪ್ರಮಾಣದ ನಗ-ನಾಣ್ಯ, ಸಂಪತ್ತು ಪತ್ತೆಯಾಗಿದ್ದು ಎಸಿಬಿ ಅಧಿಕಾರಿಗಳು ಬೆಚ್ಚುಬೀಳುವಂತಾಗಿದೆ. ದಾಳಿ ವೇಳೆ ಸರ್ಕಾರದ ಸಿ ಮತ್ತು ಡಿ ಗ್ರೂಪ್ ನೌಕರರಿಗೆ ಸಂಬAಧಪಟ್ಟ ಅಪಾರ ಪ್ರಮಾಣದ ಅಕ್ರಮ ಆಸ್ತಿಪಾಸ್ತಿಗಳನ್ನು ಶೋಧ ಮಾಡಲಾಗುತ್ತಿದೆ ಎನ್ನುವುದು ವಿಶೇಷ. ಇತ್ತ ಕಲಬುರಗಿಯಲ್ಲಿ ಭ್ರಷ್ಟ ಅಧಿಕಾರಿಯ ಮನೆಯ ಪೈಪ್‌ನಲ್ಲಿಯೂ ಕಂತೆ ಕಂತೆ ಹಣ ಪತ್ತೆಯಾಗಿದೆ! ಪಿಡಬ್ಲೂಡಿ ಜೆ.ಇ. ಶಾಂತಗೌಡ ಬಿರಾದಾರ್ ಮನೆ, ಕಚೇರಿ ಮತ್ತು ಯಡ್ರಾಮಿಯಲ್ಲಿರುವ ತೋಟದ ಮನೆಯ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಮನೆಯ ನೀರಿನ ಪೈಪ್‌ಗಳಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ. ಎಸಿಬಿ ಅಧಿಕಾರಿಗಳು ಬರುತ್ತಿದ್ದಂತೆಯೇ ಅಧಿಕಾರಿ ಶಾಂತಗೌಡ ಮತ್ತು ಕುಟುಂಬ ನೀರಿನ ಪೈಪ್‌ನಲ್ಲಿ ಹಣ ಹಾಕಿದ್ದರು. ಪ್ಲಂಬರ್‌ನನ್ನು ಕರೆಸಿ, ಪೈಪ್ ಕಟ್ ಮಾಡಿಸಿ, ಕಂತೆ ಕಂತೆ ಹಣ ಹೊರಕ್ಕೆ ತೆಗೆಯಲಾಗಿದೆ. ಮನೆಯ ಬಾತ್ ರೂಂ ಮತ್ತು ವಾಶ್ ಬೇಶನ್ ಪೈಪ್‌ನಲ್ಲಿ ದುಡ್ಡಿನ ಕಂತೆ ಹಾಕಿದ್ದ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಶಾಂತಗೌಡ ಮತ್ತು ಆತನ ಪುತ್ರ ವಾಸವಿರುವ ಕಲಬುರಗಿಯ ಗುಬ್ಬಿ ಕಾಲೋನಿಯಲ್ಲಿ ಮನೆಯ ಪೈಪ್‌ನಲ್ಲಿ ಹಣ ಈ ರೂಪದಲ್ಲಿ ಪತ್ತೆಯಾಗಿದೆ. ಮನೆಯ ಎರಡನೇ ಪ್ಲೋರ್‌ನಲ್ಲಿ ವಾಸವಾಗಿರೋ ಶಾಂತಗೌಡ ಅಧಿಕಾರಿಗಳು ಬರುತ್ತಿದ್ದಂತೆ ಹಣದ ಕಂತೆಯನ್ನು ಪೈಪ್‌ನಲ್ಲಿ ಹಾಕಿದ್ದಾರೆ. ಎಸಿಬಿ ಮೂಲಗಳ ಪ್ರಕಾರ ಶಾಂತಗೌಡರು ಮನೆಯ ಪೈಪ್‌ಗಳಲ್ಲಿ ಅಡಗಿಸಿಟ್ಟಿದ್ದ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಸುಮಾರು ೫ ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಜಂಟಿ ಕಾರ್ಯಾಚರಣೆ; ಮೂರು ಉಗ್ರರು ಹತ

ಶ್ರೀನಗರ, ನ. ೨೪: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಮತ್ತು ಪೊಲೀಸರು ಭರ್ಜರಿ ಜಂಟಿ ಕಾರ್ಯಾಚರಣೆ ನಡೆಸಿದ್ದು, ಮೂವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ರಾಜಧಾನಿ ಶ್ರೀನಗರದ ರಾಮ್‌ಭಾಗ್ ಪ್ರದೇಶದಲ್ಲಿ ಈ ಎನ್‌ಕೌಂಟರ್ ನಡೆದಿದ್ದು, ಘಟನೆಯಲ್ಲಿ ಕನಿಷ್ಟ ಮೂವರು ಉಗ್ರರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದು, ಬುಧವಾರ ರಾಮ್‌ಭಾಗ್ ಪ್ರದೇಶದಲ್ಲಿ ಉಗ್ರರ ಇರುವಿಕೆ ಕುರಿತು ಮಾಹಿತಿ ಬಂದಿದೆ. ಕೂಡಲೇ ಸೇನೆ ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಅಲರ್ಟ್ ಮಾಡಲಾಗಿತ್ತು. ಬಳಿಕ ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆಯೇ ಉಗ್ರರು ಸೇನೆಯನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದರು. ಸೇನೆ ಮತ್ತು ಪೊಲೀಸರು ಕೂಡ ಪ್ರತಿದಾಳಿ ನಡೆಸಿದ್ದು ಈ ವೇಳೆ ಮೂವರು ಉಗ್ರರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ.