ಮಡಿಕೇರಿ, ನ. ೨೪: ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ಕೋಡಿ ಚಂದ್ರಶೇಖರ್ (೫೬) ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂಲತಃ ಭಾಗಮಂಡಲ ಬಳಿಯ ಚೇರಂಗಾಲ ಗ್ರಾಮ ನಿವಾಸಿ, ಮಡಿಕೇರಿ ರಾಘವೇಂದ್ರ ದೇವಸ್ಥಾನದ ಬಳಿ ನೆಲೆಸಿದ್ದ ಚಂದ್ರಶೇಖರ್ ಇಂದು ಬೆಳಿಗ್ಗೆ ತಮ್ಮ ಮನೆಯ ಮಲಗುವ ಕೋಣೆಯಲ್ಲಿ ಬಂದೂಕಿನಿAದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಲ್ಲದ ಕೆಳ ಭಾಗಕ್ಕೆ ಕೋವಿಯ ನಳಿಕೆಯನ್ನಿರಿಸಿಕೊಂಡು ಕಾಲಿನಿಂದ ಟ್ರಿಗ್ಗರ್ ಅದುಮಿಕೊಂಡು ಗುಂಡು ಹೊಡೆದುಕೊಂಡಿದ್ದು, ಮುಖದ ಅರ್ಧ ಭಾಗ, ತಲೆ ಭಾಗ ಛಿದ್ರಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪತ್ನಿ ನಗರಕ್ಕೆ ಹೋಗಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ. ಮನೆಯಲ್ಲಿ ಅವರ ತಾಯಿ ಇದ್ದರಾದರೂ ಅವರಿಗೆ ಅಷ್ಟು ಗೋಚರವಾಗಿರಲಿಲ್ಲ. ಪತ್ನಿ ಬಂದು ನೋಡುವಷ್ಟರಲ್ಲಿ ಘಟನೆ ಮುಗಿದು ಹೋಗಿತ್ತು.

ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಚಂದ್ರಶೇಖರ್ ಕೊಡಗು ಗೌಡ ಸಮಾಜದ ಕಾರ್ಯದರ್ಶಿಯಾಗಿ, ಕೊಡಗು ಜಿಲ್ಲಾ ಸರ್ವೋದಯ ಸಮಿತಿ ಖಜಾಂಚಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ, ಸೇವಾದಳದ ಪದಾಧಿಕಾರಿಯಾಗಿ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಕ್ರಿಯವಾಗಿ

(ಮೊದಲ ಪುಟದಿಂದ) ತೊಡಗಿಸಿಕೊಂಡು ಈ ಹಿಂದಿನ ಆಡಳಿತ ಮಂಡಳಿ ಜಿಲ್ಲಾ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ರಾಜಕೀಯವಾಗಿಯೂ ಗುರುತಿಸಿಕೊಂಡಿದ್ದ ಅವರು ನಗರಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ತಲಕಾವೇರಿ ಕ್ಷೇತ್ರದ ತಕ್ಕಮುಖ್ಯಸ್ಥರ ಕುಟುಂಬಸ್ಥರಾಗಿದ್ದ ಚಂದ್ರು ೨೦೦೫ರಲ್ಲಿ ತಲಕಾವೇರಿ -ಭಗಂಡೇಶ್ವರ ಪುನರ್ ಪ್ರತಿಷ್ಠಾಪನಾ ಸಮಿತಿ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಕಳೆದ ಕೆಲವು ಸಮಯದಿಂದ ಅನಾರೋಗ್ಯಕ್ಕೀಡಾಗಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಘಟನಾ ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಒಪ್ಪಿಸಿದ್ದಾರೆ. ಮೃತರ ಅಂತ್ಯಕ್ರಿಯೆ ತಾ. ೨೫ರಂದು (ಇಂದು) ಮಡಿಕೇರಿಯ ಗೌಡ ರುದ್ರಭೂಮಿಯಲ್ಲಿ ನೆರವೇರಲಿದೆ. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಸಂತಾಪ : ಸದಾ ಹಸನ್ಮುಖಿಯಾಗಿ, ಎಂದಿಗೂ ಶ್ವೇತ ವಸ್ತçಧಾರಿಯಾಗಿ ಇರುತ್ತಿದ್ದ ಚಂದ್ರಶೇಖರ್ ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಗೌರವ ಕಾರ್ಯದರ್ಶಿ ಕೆ.ಎಸ್. ರಮೇಶ್, ಮಡಿಕೇರಿ ತಾಲೂಕು ನಿಕಟಪೂರ್ವ ಅಧ್ಯಕ್ಷ ಕುಡೆಕಲ್ ಸಂತೋಷ್, ಗೌರವ ಕಾರ್ಯದರ್ಶಿಗಳಾದ ಡಾ. ಕೂಡಕಂಡಿ ದಯಾನಂದ, ಬಾಳೆಯಡ ಕಿಶನ್ ಪೂವಯ್ಯ ಹಾಗೂ ಪದಾಧಿಕಾರಿಗಳು, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡಗು ಗೌಡ ಸಮಾಜ ಅಧ್ಯಕ್ಷ ಪೇರಿಯನ ಜಯಾನಂದ, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಕೊಡಗು ಜಿಲ್ಲಾ ಸರ್ವೋದಯ ಸಮಿತಿಯ ಸ್ಥಾಪಕಾಧ್ಯಕ್ಷ ಟಿ.ಪಿ. ರಮೇಶ್, ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್ ಹಾಗೂ ಪದಾಧಿಕಾರಿಗಳು, ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಸೂದನ ಈರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.