ಗೋಣಿಕೊಪ್ಪಲು, ಅ. ೧೩: ಎಸ್‌ಎಂಎ ಎಂಬ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದ ೯ ತಿಂಗಳ ಇನಾರ ಮರಿಯಂ ಎಂಬ ಮಗುವಿನ ಜೀವರಕ್ಷಣೆಗೆ ಮುಂದಾದ ವೈದ್ಯರ ತಂಡ ನಿಗದಿತ ಸಮಯದಲ್ಲಿ ತುರ್ತು ಶಸ್ತçಚಿಕಿತ್ಸೆ ಮಾಡುವ ಸಲುವಾಗಿ ಕೇರಳದ ಆಸ್ಪತ್ರೆಯಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಮಗುವನ್ನು ಆ್ಯಂಬ್ಯುಲೆನ್ಸ್ಸ್ ಮೂಲಕ ಸಾಗಿಸಿದರು. ಕೇರಳದಿಂದ ಬೆಂಗಳೂರುವರೆಗೆ ಝೀರೋ ಟ್ರಾಫಿಕ್‌ನಲ್ಲಿ ನಾಲ್ಕು ಆ್ಯಂಬ್ಯುಲೆನ್ಸ್ಗಳು ಏಕಕಾಲದಲ್ಲಿ ಒಂದರ ಹಿಂದೆ ಒಂದರAತೆ ಚಲಿಸಿದವು. ಈ ದೃಶ್ಯವನ್ನು ನೋಡಲು ರಸ್ತೆಯ ಉದ್ದಗಲಕ್ಕೂ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನತೆ ಮಗುವಿನ ಕಾಯಿಲೆ ಶೀಘ್ರವಾಗಿ ಗುಣವಾಗುವಂತೆ ಹಾರೈಸಿದರು.

ಕೆ.ಎಂ.ಸಿ. ಆಸ್ಪತ್ರೆ ಆ್ಯಂಬ್ಯುಲೆನ್ಸ್ನ ಚಾಲಕ ಹನೀಫ್ ವಾಹನ ಚಲಾಯಿಸುತ್ತಿದ್ದರು. ಕಳೆದ ಎರಡು ದಿನಗಳ ಹಿಂದೆ ಇವರು ಮಗುವಿನ ಚಿಕಿತ್ಸೆ ಬೆಂಗಳೂರಿನಲ್ಲಿ ನಡೆಯುತ್ತಿರುವುದರಿಂದ ವಾಹನದ ಮೂಲಕ ನಿಗದಿತ ಸಮಯದಲ್ಲಿ ತಲುಪಲು ಸಾರ್ವಜನಿಕರ ಸಹಕಾರವನ್ನು ಕೋರಿ ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿಕೊಂಡಿದ್ದರು.

ಸದಾ ವಾಹನ ದಟ್ಟಣೆಯಿಂದ ಕೂಡಿರುವ ಗೋಣಿಕೊಪ್ಪ ಪಟ್ಟಣವು ಕೇರಳ ರಾಜ್ಯದಿಂದ ಆಗಮಿಸುವ ಆ್ಯಂಬ್ಯುಲೆನ್ಸ್ಸ್ ಸರಾಗವಾಗಿ ಸಾಗುವ ಹಿನೆÀ್ನಲೆಯಲ್ಲಿ ಅರ್ಧ ಗಂಟೆಗೆ ಮೊದಲು ಸ್ಥಳೀಯ ಪೊಲೀಸರು ಸಂಪೂರ್ಣ ಝೀರೊ ಟ್ರಾಫಿಕ್ ಮಾಡಿಸುವಲ್ಲಿ ಯಶಸ್ವಿಯಾದರು. ಸ್ಥಳೀಯ ಆ್ಯಂಬ್ಯುಲೆನ್ಸ್ನ ಚಾಲಕರುಗಳಾದ ಶರತ್‌ಕಾಂತ್ ಹಾಗೂ ಇತರರು ಸಹಕಾರ ನೀಡಿದರು. ನಗರದ ರಸ್ತೆ ಬದಿಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನತೆ ನೆರೆದಿದ್ದರು. ಮಧ್ಯಾಹ್ನ ೧೨.೫ಕ್ಕೆ ಸರಿಯಾಗಿ ಗೋಣಿಕೊಪ್ಪಲು ಮಾರ್ಗವಾಗಿ ಬೆಂಗಳೂರಿನತ್ತ ಆ್ಯಂಬ್ಯುಲೆನ್ಸ್ಗಳು ಸಾಗಿದವು. ಸುಮಾರು ೧೮ ಕೋಟಿ ವೆಚ್ಚದಲ್ಲಿ ಈ ಮಗುವಿಗೆ ಶಸ್ತçಚಿಕಿತ್ಸಾ ಕಾರ್ಯ ನಡೆಯುತ್ತಿದೆ.

ಕಣ್ಣನೂರಿನ ಆಸ್ಪತ್ರೆಯಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಮಗುವನ್ನು ಶಸ್ತçಚಿಕಿತ್ಸೆಗೆ ಸಾಗಿಸಲು ಪ್ರತಿ ಗಂಟೆಗೆ ೪೦ ಲೀ. ಆಕ್ಸಿಜನ್ ನೀಡಲಾಗುತ್ತಿತ್ತು. ನಾಲ್ಕು ಸಿಲಿಂಡರ್‌ಗಳನ್ನು ಹೊತ್ತ ಮತ್ತೊಂದು ಆ್ಯಂಬ್ಯುಲೆನ್ಸ್ ಇದೇ ವಾಹನವನ್ನು ಹಿಂಬಾಲಿಸುತ್ತಿತ್ತು. ಇನ್ನೊಂದು ವಾಹನದಲ್ಲಿ ನುರಿತ ವೈದ್ಯರು, ಟೆಕ್ನಿಷಿಯನ್‌ಗಳು ಪ್ರಯಾಣ ಬೆಳೆಸಿದ್ದರು. ವೈದ್ಯರ ಸಲಹೆಯಂತೆ ೪ಗಂಟೆ ೧೮ ನಿಮಿಷ ಅವಧಿಯಲ್ಲಿ ಮಗುವನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ತಲುಪಿಸುವಲ್ಲಿ ಆ್ಯಂಬ್ಯುಲೆನ್ಸ್ಸ್ ಚಾಲಕ ಯಶಸ್ವಿಯಾಗಿದ್ದಾರೆ.

ಕೇರಳದಿಂದ ಆ್ಯಂಬ್ಯುಲೆನ್ಸ್ ವಾಹನ ಸಂಚಾರ ಆರಂಭ ವಾಗುತ್ತಿದ್ದಂತೆಯೇ ವಾಹನದಲ್ಲಿದ್ದ ಇತರ ಚಾಲಕರು ಕ್ಷಣಕ್ಷಣದ ಮಾಹಿತಿ ಗಳನ್ನು ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ವಿವರ ನೀಡುತ್ತಿದ್ದರು. ಕೇರಳ ಆಸ್ಪತ್ರೆಯಿಂದ ಹೊರಟ ವಾಹನವು ಕೊಡಗಿನ ಗಡಿ ಮಾಕುಟ್ಟ ಮಾರ್ಗವಾಗಿ ವೀರಾಜಪೇಟೆ, ಗೋಣಿಕೊಪ್ಪ, ತಿತಿಮತಿ, ಹುಣಸೂರು, ಮೈಸೂರು ಮಾರ್ಗವಾಗಿ ಬೆಂಗಳೂರು ತಲುಪಿತ್ತು.

ಆ್ಯಂಬ್ಯುಲೆನ್ಸ್ ವಾಹನವು ಗೋಣಿಕೊಪ್ಪ ನಗರಕ್ಕೆ ಆಗಮಿಸುತ್ತಿದ್ದ ವೇಳೆ ನಗರದಲ್ಲಿ ಸಂಪೂರ್ಣ ವಾಹನ ಸಂಚಾರವನ್ನು ನಿಲ್ಲಿಸಲಾಗಿತ್ತು. ಆಯಾ ಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಎಚ್ಚರವಹಿಸಿ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದರು. ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ವೃತ್ತ ನಿರೀಕ್ಷಕ ಜಯರಾಮ್, ಠಾಣಾಧಿಕಾರಿ ಸುಬ್ಬಯ್ಯ, ಎ.ಎಸ್.ಐ. ದೇವರಾಜ್, ಸುಬ್ರಮಣ್ಯ ಅವರು ಧ್ವನಿ ವರ್ಧಕದ ಮೂಲಕ ನಗರದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ವಾಹನ ಹಾಗೂ ಜನರನ್ನು ನಿಯಂತ್ರಿಸಲು ಮನವಿ ಮಾಡಿಕೊಂಡರು.

-ಹೆಚ್.ಕೆ.ಜಗದೀಶ್