ಮಡಿಕೇರಿ, ಅ. ೧೩: ‘ಯಾರದೋ ದುಡ್ಡು., ಯಲ್ಲಮ್ಮನ ಜಾತ್ರೆ..’ ಎಂಬ ನಾಣ್ಣುಡಿ ಇಲ್ಲಿ ಈ ವಂಚಕನಿಗೆ ಸರಿಯಾಗಿ ಹೊಂದಿಕೆಯಾಗುತ್ತದೆ. ಐಷಾರಾಮಿ ಜೀವನ ನಡೆಸಲೋಸ್ಕರ ಸರಕಾರಿ ಉದ್ಯೋಗ ಕೊಡಿಸುವ ನೆಪದಲ್ಲಿ ನಕಲಿ ನೇಮಕಾತಿ ಪತ್ರ ಸೃಷ್ಟಿಸಿ ಅಮಾಯಕರಿಂದ ಲಕ್ಷಗಟ್ಟಲೆ ಹಣ ಪಡೆದು ವಂಚಿಸಿರುವ ಪುತ್ತೂರಿನ ಪುನಿತ್‌ಕುಮಾರ್ ಮೈಸೂರು ಬಳಿ ನೆಲೆಸಿದ್ದ ಮನೆಯ ಬಾಡಿಗೆ ರೂ.೩೫ ಸಾವಿರ..! ಮನೆಯಲ್ಲಿರುವ ದುಬಾರಿ ಬೆಲೆಯ ನಾಯಿ ನೋಡಿಕೊಳ್ಳಲು ಓರ್ವ ಕೆಲಸಗಾರ., ಸುತ್ತಾಡಲು ಐಷಾರಾಮಿ ಬಾಡಿಗೆ ಕಾರು., ಜೊತೆಗೆ ನಾಲ್ವರು ಬೌನ್ಸರ್‌ಗಳು..!

ಬಂಧನಕ್ಕೊಳಗಾಗಿರುವ ಪುನಿತ್‌ನನ್ನು ವಿಚಾರಣೆಗೊಳಪಡಿಸಿದಾಗ ಆತ ಮೈಸೂರಿನಲ್ಲಿ ಮನೆ ಇರುವದಾಗಿ ಹೇಳಿದ್ದ.

(ಮೊದಲ ಪುಟದಿಂದ) ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ಮೈಸೂರಿಗೆ ಕರೆದೊಯ್ದಾಗ ಪೊಲೀಸರಿಗೇ ಅಚ್ಚರಿ ಕಾದಿತ್ತು. ಮೈಸೂರಿನ ಹೊರವಲಯದ ರಮನಳ್ಳಿ ಎಂಬಲ್ಲಿ ನಿರ್ಜನ ಪ್ರದೇಶದಲ್ಲೊಂದು ದೊಡ್ಡ ಮನೆಯಲ್ಲಿ ಈತನ ವಾಸ. ಸುತ್ತ ಮುತ್ತ ದೂರದಲ್ಲಿ ಒಂದೆರಡು ಮನೆಗಳಿರುವದು ಬಿಟ್ಟರೆ ನಿರ್ಜನ ಪ್ರದೇಶ. ಈತ ವಾಸಿಸುತ್ತಿರುವ ಮನೆಯ ಬಾಡಿಗೆ ರೂ.೩೫ಸಾವಿರ, ಮನೆಯಲ್ಲೊಂದು ದುಬಾರಿ ಬೆಲೆಯ ನಾಯಿ., ಅದನ್ನು ನೋಡಿಕೊಳ್ಳಲೊಬ್ಬ ಕೆಲಸಗಾರ, ಆತನಿಗೆ ಸಂಬಳ ಬೇರೆ ಕೊಡುತ್ತಿದ್ದ.

ಸ್ನೇಹಿತನ ಹೆಸರಲ್ಲಿ ಕರಾರು..!

ಹಣ ಪಡೆದುಕೊಳ್ಳುವಲ್ಲಿಂದ ಹಿಡಿದು ಪ್ರತಿಯೊಂದು ವಿಚಾರದಲ್ಲೂ ಈತ ಬುದ್ಧಿವಂತಿಕೆ ಪ್ರದರ್ಶಿಸಿದ್ದಾನೆ. ಬಾಡಿಗೆ ಮನೆಯ ಕರಾರು ಮಾಡಿಸುವಾಗಲೂ ಚತುರತೆ ಪ್ರದರ್ಶಿಸಿದ್ದಾನೆ. ವಾಸ ಮಾಡುತ್ತಿರುವದು ತಾನಾದರೂ ಕರಾರನ್ನು ಸ್ನೇಹಿತ, ಈಗಾಗಲೇ ಬಂಧಿತನಾಗಿರುವ ಗಣಪತಿ(ಶಭರೀಶ್) ಹೆಸರಿನಲ್ಲಿ ಮಾಡಿಸಿದ್ದಾನೆ. ಆಗಾಗ್ಗೆ ಸಿಮ್, ಮೊಬೈಲ್ ಬದಲಾಯಿಸುವ ಈತ ಸಿಮ್ ಕಾರ್ಡ್ಗಳನ್ನು ಕೂಡ ಬೇರೆಯವರ ಹೆಸರಿನಲ್ಲಿ ಖರೀದಿಸುತ್ತಿದ್ದ.

ದಿನಕ್ಕೆ ೧೦ ಸಾವಿರ ಖರ್ಚು..!

ಐಷಾರಾಮಿ ಜೀವನಕ್ಕೆ ಆತುಕೊಂಡಿದ್ದ ಪುನಿತ್ ದಿನಂಪ್ರತಿ ರೂ.೧೦ಸಾವಿರದಷ್ಟು ಖರ್ಚು ಮಾಡುತ್ತಿದ್ದ. ತಾನು ತಿರುಗಾಡಲು ಐಷಾರಾಮಿ ಕಾರಿನ ಬಾಡಿಗೆ, ತಾನೊಬ್ಬ ಭಾರೀ ಪ್ರಭಾವಿ ವ್ಯಕ್ತಿ ಎಂದು ಬಿಂಬಿಸಿಕೊಳ್ಳಲು, ರಕ್ಷಣೆಗಾಗಿ ಜೊತೆಯಲ್ಲಿ ನಾಲ್ವರು ಅಂಗರಕ್ಷಕರನ್ನು (ಬೌನ್ಸರ್‌ಗಳು) ಇರಿಸಿಕೊಳ್ಳುತ್ತಿದ್ದು, ಅವರುಗಳಿಗೆ ಸಂಬಳ, ಊಟ, ತಂಗಲು ಕೊಠಡಿ ಬಾಡಿಗೆ ಸೇರಿದಂತೆ ಒಟ್ಟು ರೂ. ೧೦ ಸಾವಿರಗಳಷ್ಟು ಖರ್ಚು ಮಾಡುತ್ತಿದ್ದ. ಮಗ ಐಷಾರಾಮಿ ಜೀವನ ನಡೆಸುತ್ತಿದ್ದರೆ, ಇತ್ತ ಈತನ ತಂದೆ ನಾರಣಪ್ಪ ಪೂಜಾರಿಯವರಿಗೆ ಮಗನ ಕರಾಮತ್ತಿನ ಬಗ್ಗೆ ಯಾವದೇ ವಿಚಾರ ಗೊತ್ತಿಲ್ಲ. ರೈಲ್ವೇ ಇಲಾಖೆಯಲ್ಲಿ ಕಾವಲುಗಾರರಾಗಿ ಜೀವನ ಸಾಗಿಸುತ್ತಿದ್ದಾರೆ..!

? ಕುಡೆಕಲ್ ಸಂತೋಷ್