ಮಾದಾಪುರ, ಸೆ. ೨೬: ಸ್ಥಳೀಯ ಬೆಳೆಗಾರರಿಗೆ ಹಾಗೂ ತೋಟ ಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರಿಗೆ ಸರಕಾರದ ಸೌಲಭ್ಯಗಳನ್ನು ತಿಳಿಸುವ ಸಲುವಾಗಿ ಸೋಮವಾರಪೇಟೆ ತಾಲೂಕು ಕಾಫಿ ಮಂಡಳಿ, ಕಾರ್ಮಿಕ ಇಲಾಖೆ ಹಾಗೂ ಜಂಬೂರು ಬಾಣೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಬಡಾವಣೆ ಉಸ್ತುವಾರಿ ಸಮಿತಿಯ ಜಂಟಿ ಆಶ್ರಯದಲ್ಲಿ ಜಂಬೂರು ಬಾಣೆಯ ಅಂಬೇಡ್ಕರ್ ಭವನದಲ್ಲಿ ಇಂದು ಮಾಹಿತಿ ಕಾರ್ಯಾಗಾರ ನಡೆಯಿತು.

ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ಕಾಫಿ ಮಂಡಳಿ ಸೋಮವಾರಪೇಟೆ ತಾಲೂಕಿನ ಹಿರಿಯ ಅಧಿಕಾರಿ ಎಸ್. ಗೋಪಾಲ್ ನಾಯಕ್. ಸಣ್ಣ ಬೆಳೆಗಾರರಿಗೆ ಹಾಗೂ ತೋಟ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳು ಹಾಗೂ ಸಬ್ಸಿಡಿ ಸೌಲಭ್ಯಗಳ ಕುರಿತು, ಬೆಳೆಗಾರರ ಹಾಗೂ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸರಕಾರ ನೀಡುವ ವಿದ್ಯಾರ್ಥಿ ವೇತನಗಳ ಕುರಿತು ಮಾಹಿತಿ ನೀಡಿ, ಸೌಲಭ್ಯಕ್ಕಾಗಿ ಹೆಸರು ನೋಂದಣಿ ಮಾಡಿಕೊಳ್ಳುವ ನಿಯಮಗಳ ಬಗ್ಗೆ ವಿವರಿಸಿದರು ಹಾಗೂ ೨೫ ಎಕರೆಗಿಂತ ಹೆಚ್ಚು ಸ್ಥಳವಿರುವ ಕೃಷಿಕರಿಗೆ ನೂತನ ತೋಟ ನಿರ್ಮಾಣ, ಹಳೆ ಗಿಡಗಳನ್ನು ತೆಗೆದು ಬದಲಿಗಿಡ ನೆಡುವಾಗ ಸಿಗುವ ೪೦% ಸಬ್ಸಿಡಿ ಕುರಿತು ಹಾಗೂ ಕೃಷಿ ಉಪಕರಣಗಳ ಸಬ್ಸಿಡಿ ಕುರಿತು ಉಪಯುಕ್ತ ಮಾಹಿತಿ ನೀಡಿದರು.

ಕಟ್ಟಡ ಕಾರ್ಮಿಕರಿಗೆ ಕಾರ್ಮಿಕರ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳುವ ಕುರಿತು ಹಾಗೂ ಅವರಿಗೆ, ಅವರ ಮಕ್ಕಳಿಗೆ ಸಿಗುವ ಸವಲತ್ತುಗಳ ಕುರಿತು ಹಾಗೂ ನಿವೃತ್ತ ಪಿಂಚಣಿ, ಕಾರ್ಮಿಕರ ವಿದ್ಯಾರ್ಥಿ ವೇತನಗಳ ಸೌಲಭ್ಯದ ಕುರಿತು ಹಾಗೂ ಅವರ ಕೆಲಸಕ್ಕೆ ಬೇಕಿರುವ ಯಂತ್ರೋಪಕರಣಗಳ ಖರೀದಿಗೆ ಸಿಗುವ ಸರಕಾರದ ಸವಲತ್ತುಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಹಾಯಕ ಅಧಿಕಾರಿ ಕೃಷ್ಣ ಕುಮಾರ್, ವಿಸ್ತರಣಾ ನಿರೀಕ್ಷರುಗಳಾದ ಎಂ.ಇ. ವರ್ಗೀಸ್, ಅನುಷಾ ಹಾಗೂ ಕಾರ್ಯಪ್ಪ ಬಡವಾಣೆಯ ಉಸ್ತುವಾರಿ ಸಮಿತಿಯ ಗೌರವ ಸಲಹೆಗಾರ ಸತ್ಯನಾರಾಯಣ, ಅಧ್ಯಕ್ಷ ತೀರ್ಥ ಪ್ರಸಾದ್, ನಿರಾಶ್ರಿತರ ಸಂಘದ ಅಧ್ಯಕ್ಷ ಗಾಂಧಿ ಮತ್ತಿತರರು ಉಪಸ್ಥಿತರಿದ್ದರು. -ವರದಿ: ಪುನೀತ್ ಪೊನ್ನಣ್ಣ