ಮಡಿಕೇರಿ, ಸೆ. ೨೬: ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆ.ಜಿ.ಎಫ್.) ವತಿಯಿಂದ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತು.

ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಅವರ ನೇತೃತ್ವದಲ್ಲಿ ತೆರಳಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಒಕ್ಕೂಟದ ಪ್ರಮುಖರು, ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ೫೦-೬೦ ವರ್ಷಗಳಿಂದ ಕಾಫಿ ತೋಟ ಒತ್ತುವರಿ ಮಾಡಿದ ಕಂದಾಯ ಜಾಗವನ್ನು ಗುತ್ತಿಗೆ ಆಧಾರದಲ್ಲಿ ಕೊಡುವುದಾಗಿ ೨೦೧೮-೧೯ರ ಬಜೆಟ್‌ನಲ್ಲಿ ಕೇರಳ ಮಾದರಿಯಂತೆ ಸೇರ್ಪಡೆ ಗೊಳಿಸ ಲಾಗಿತ್ತು. ಆದರೆ, ಇದುವರೆಗೂ ಇದು ಕಾರ್ಯಗತವಾಗಿಲ್ಲ. ಈ ಹಿನ್ನೆಲೆ ಈ ಬಗ್ಗೆ ರಾಜ್ಯ ಸರಕಾರಕ್ಕೆ ಮನವರಿಕೆ ಮಾಡುವಂತೆ ಮನವಿ ಮಾಡಿದರು.

ಈಗಾಗಲೇ ೧೯೨/ಎ ಅಡಿಯಲ್ಲಿ ಭೂಕಬಳಿಕೆ ಕಾಯ್ದೆಯನ್ನು ಕೃಷಿ ಜಮೀನ್‌ನಿಂದ ಹೊರಗಿಡಬೇಕು ಎಂದು ಮನವಿ ಮಾಡಿದ ಒಕ್ಕೂಟ ಈ ಕಾಯ್ದೆಯಡಿಯಲ್ಲಿ ಬೆಳೆಗಾರರಿಗೆ ನೋಟೀಸ್ ಬಂದು ತೊಂದರೆ ಯಾಗುತ್ತಿರುವುದಾಗಿ ತಿಳಿಸಿದರು.

ನಿಯೋಗದಲ್ಲಿ ಮಾಜಿ ಸಭಾಪತಿ ಡಾ.ಬಿ.ಎಲ್.ಶಂಕರ್, ಮಾಜಿ ಮಂತ್ರಿ ಡಾ.ಮೋಟಮ್ಮ, ಕೆ.ಜೆ. ಜಾರ್ಜ್, ಒಕ್ಕೂಟದ ಅಧ್ಯಕ್ಷ ಡಾ. ಹೆಚ್.ಟಿ. ಮೋಹನ್ ಕುಮಾರ್, ಸಹ್ಯಾದ್ರಿ ಬೆಳೆಗಾರರ ಸಂಘದ ಅಧ್ಯಕ್ಷ ರಂಗನಾಥ್, ಮಾಜಿ ಅಧ್ಯಕ್ಷ ಸುಂದರೇಶ್, ಶನಿವಾರಸಂತೆಯ ಪ್ರಮುಖರಾದ ಮೋಹನ್ ಕುಮಾರ್, ಮಹೇಶ್ ಕುಮಾರ್ ಹಾಗೂ ಇನ್ನಿತರು ಭಾಗವಹಿಸಿದ್ದರು.