ಕಣಿವೆ, ಸೆ. ೨೬ : ತಗ್ಗು ಪ್ರದೇಶಗಳಿಗೆ ಮಣ್ಣು ತುಂಬಿಸಿ ನಿವೇಶನಗಳಾಗಿ ಪರಿವರ್ತಿಸುವ ಭರದಲ್ಲಿ ಸಾವಿರಾರು ಲೋಡ್‌ಗಳಷ್ಟು ಮಣ್ಣನ್ನು ನೀರಾವರಿ ಇಲಾಖೆಗೆ ಸೇರಿದ ಸರ್ಕಾರಿ ಜಾಗದಲ್ಲಿ ಲೂಟಿ ಹೊಡೆಯುತ್ತಿದ್ದರೂ ಕೂಡ ಸಂಬAಧಿಸಿದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ.

ನಾಲ್ಕು ದಶಕಗಳ ಹಿಂದೆ ಹುಲುಗುಂದ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಹಾರಂಗಿ ಜಲಾಶಯದ ಎಡ ದಂಡೆ ನಾಲೆಯ ಹೆಬ್ಬಾಲೆ ಬಳಿ ಸುಮಾರು ೫೦೦ ಮೀಟರ್ ಉದ್ದಕ್ಕೂ ಸಾವಿರಾರು ಲೋಡ್ ಗಳಷ್ಟು ನಾಲೆ ಮಣ್ಣನ್ನು ಸಾಗಿಸಿದರೂ ಕೂಡ ನಾಲೆಯ ಹಿತ ಕಾಯಬೇಕಾಗಿದ್ದ ಇಲಾಖೆಯ ಅಧಿಕಾರಿಗಳು ಮಣ್ಣನ್ನು ಮಾರಾಟ ಮಾಡಿಕೊಂಡಿದ್ದಾರಾ...? ಏಕೆ ಕ್ರಮ ಜರುಗಿಸದೇ ಮೌನ ವಹಿಸಿದ್ದಾರೆ ಎಂದು ಸಾರ್ವಜನಿಕರು ‘ಶಕ್ತಿ’ ಯೊಂದಿಗೆ ಪ್ರಶ್ನಿಸುತ್ತಿದ್ದಾರೆ. ನಾಲೆಗಳ ಏರಿಯ ಬದಿಯಲ್ಲಿ ನಾಲೆಯ ರಕ್ಷಣೆಗಾಗಿ ಮೀಸಲಿಟ್ಟಂತಹ ರಾಶಿ ರಾಶಿ ಕಲ್ಲು ಮಣ್ಣಿನ ರಾಶಿಯನ್ನು ನಾಲ್ಕಾರು ಜೆಸಿಬಿಗಳನ್ನು ಬಳಸಿಕೊಂಡು ಹತ್ತಾರು ಲಾರಿಗಳು ಹಾಗೂ ಟ್ರಾö್ಯಕ್ಟರ್‌ಗಳಲ್ಲಿ ಸಾಗಿಸಲಾಗುತ್ತಿದೆ. ರಾತ್ರಿ ಹಗಲು ಎನ್ನದೆ ಪ್ರಭಾವಿಗಳು ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮಣ್ಣು ತುಂಬಿಸಿದರೂ ಕೂಡ ಏಕೆ ಕ್ರಮಕ್ಕೆ ಮುಂದಾಗಿಲ್ಲ ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಣ್ಣನ್ನು ತುಂಬಿಸುವ ಆತುರದಲ್ಲಿ ಹತ್ತಾರು ವರುಷಗಳಿಂದಲೂ ಇದ್ದ ನಾಲೆಯ ಮಣ್ಣಿನ ಗುಡ್ಡಗಳ ಮೇಲೆ ಬೆಳೆದಿದ್ದ ಗಿಡ - ಮರಗಳನ್ನು ಕೂಡ ಉರುಳಿಸಿ ಕಡಿದು ಸಾಗಿಸಲಾಗಿದೆ. ಸ್ಥಳದಲ್ಲಿ ಮಣ್ಣು ತೆಗೆವ ಯಂತ್ರಗಳು ಹಾಗೆಯೇ ಮಣ್ಣು ಸಾಗಿಸುವ ವಾಹನಗಳ ನಂಬರುಗಳ ಸಹಿತ ನೀರಾವರಿ ನಿಗಮಕ್ಕೆ ದೂರು ನೀಡಲಾಗಿದೆ. ಅಷ್ಟೇ ಅಲ್ಲ ಮಣ್ಣನ್ನು ಸಾಗಿಸಿಟ್ಟಿರುವ ಹುಲುಸೆ ಬಳಿಯ ಮುಖ್ಯ ರಸ್ತೆಯ ಬದಿಯ ಖಾಸಗಿ ನಿವೇಶನದ ಜಾಗದ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಕೂಡಲೇ ಆ ವಾಹನಗಳನ್ನು ವಶಕ್ಕೆ ಪಡೆದು ದೂರು ದಾಖಲಿಸಬೇಕು. ಸರ್ಕಾರಿ ಜಾಗದಲ್ಲಿದ್ದ ಹೇರಳವಾದ ಮಣ್ಣನ್ನು ಲೂಟಿ ಮಾಡಿ ತನ್ನ ಖಾಸಗಿ ನಿವೇಶನದ ಭರ್ತಿಗೆ ಮುಂದಾಗಿರುವವರ ಮೇಲೆ ದೂರು ದಾಖಲಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಹಾರಂಗಿ ನಾಲೆಯು ಹಾದು ಹೋಗಿರುವ ಮಾರ್ಗದುದ್ದಕ್ಕೂ ಇರುವ ಮಣ್ಣಿನ ಗುಡ್ಡಗಳನ್ನು ನೆಲಸಮ ಮಾಡಿ ಅಕ್ರಮವಾಗಿ ಮಣ್ಣು ಸಾಗಿಸುವ ಕೃತ್ಯಗಳಿಗೆ ನಿಗಮದ ಅಧಿಕಾರಿಗಳು ಕಡಿವಾಣ ಹಾಕಿದ್ದಲ್ಲಿ ಮುಂದಿನ ದಿನಗಳಲ್ಲಿ ಬೇರೆ ಯಾರೊಬ್ಬರೂ ಕೂಡ ಮಣ್ಣನ್ನು ಸಾಗಿಸದಂತೆ ಎಚ್ಚರಿಕೆ ರವಾನೆಯಾಗುತ್ತದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಜರುಗಿಸುವರೇ ಕಾದು ನೋಡಬೇಕಿದೆ.

- ಕೆ.ಎಸ್. ಮೂರ್ತಿ