ದೇವಾಲಯ ತೆರವು ಬಗ್ಗೆ ಸದ್ಯದಲ್ಲೇ ಸರ್ಕಾರದಿಂದ ನಿಲುವು ಪ್ರಕಟ

ಬೆಂಗಳೂರು, ಸೆ. ೧೪: ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ರಾಜ್ಯದ ಹಲವು ದೇವಾಲಯಗಳನ್ನು ನೆಲಸಮ ಮಾಡುವ ವಿಚಾರದಲ್ಲಿ ಉಂಟಾಗಿರುವ ಗೊಂದಲ, ವ್ಯಾಪಕ ವಿರೋಧ ಹಿನ್ನೆಲೆಯಲ್ಲಿ ಮೊದಲೇ ನೋಟೀಸ್ ನೀಡದೆ ಯಾವುದೇ ಧಾರ್ಮಿಕ ಕೇಂದ್ರಗಳನ್ನು ನೆಲಸಮ ಮಾಡುವಂತಿಲ್ಲ. ಎಂದು ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದೇನೆ. ಈ ಬಗ್ಗೆ ಸರಕಾರದಿಂದ ನಿಲುವು ಪ್ರಕಟ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಧಿಕಾರಿಗಳ ಜೊತೆ ಕೂಡ ಮಾತನಾಡುತ್ತೇನೆ, ಈ ರೀತಿ ಏಕಾಏಕಿ ಸುಪ್ರೀಂ ಕೋರ್ಟ್ನ ಆದೇಶವೆಂದು ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ, ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಕೂಡ ನಿನ್ನೆ ಮಾತನಾಡಿದ್ದೇನೆ, ದೇವಸ್ಥಾನವನ್ನು ಕೆಡವುದಕ್ಕೆ ಮೊದಲು ಸ್ಥಳೀಯ ಜನರೊಂದಿಗೆ ಚರ್ಚಿಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬದಲಿ ಜಾಗವನ್ನು ತೋರಿಸಿ ಆ ಬಳಿಕ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿತ್ತು. ಈ ಬಗ್ಗೆ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಸ್ಪಷ್ಟವಾದ ಸೂಚನೆ ನೀಡುತ್ತೇನೆ ಎಂದರು. ದೇವಸ್ಥಾನಗಳನ್ನು ತೆರವುಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳು, ಸ್ಥಳೀಯ ಎಂ.ಎಲ್.ಎ.ಗಳು, ಎಂ.ಎಲ್ಸಿ.ಗಳ ಜೊತೆ ಕೂಡ ಮಾತನಾಡಿದ್ದೇನೆ, ಇದು ಕೇವಲ ಮೈಸೂರಿಗೆ ಸಂಬAಧಪಟ್ಟ ವಿಷಯ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಸಂಬAಧಿಸಿದ್ದು. ೧೨ ವರ್ಷಗಳ ಹಿಂದಿನ ಸುಪ್ರೀಂ ಕೋರ್ಟ್ ಆದೇಶದಲ್ಲಿ ಕೇವಲ ದೇವಸ್ಥಾನ ಮಾತ್ರವಲ್ಲದೆ ಚರ್ಚ್, ಮಸೀದಿಗಳು ಕೂಡ ಇವೆ. ಈ ಬಗ್ಗೆ ಸರ್ಕಾರ ಸದ್ಯದಲ್ಲಿಯೇ ನಿಲುವು ಪ್ರಕಟಿಸಲಿದ್ದು ಅಲ್ಲಿಯವರೆಗೆ ಜಿಲ್ಲಾಧಿಕಾರಿಗಳು ಜನರ ಭಾವನೆ ಮತ್ತು ಸುಪ್ರೀಂ ಕೋರ್ಟ್ ಆದೇಶ ಮಧ್ಯೆ ಸಂಯಮದಿAದ ವರ್ತಿಸಬೇಕೆಂದು ಮನವಿ ಮಾಡಿದರು.

ಎತ್ತಿನಹೊಳೆ ಯೋಜನೆ ಕಾರ್ಯಗತ : ಸಿ.ಎಂ

ಬೆAಗಳೂರು, ಸೆ. ೧೪: ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನ ಹೊಳೆ ಯೋಜನೆಯನ್ನು ಎಷ್ಟೇ ಹಣ ವೆಚ್ಚವಾದರೂ ಕಾರ್ಯಗತ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ವಿಧಾನಸಭೆಗೆ ತಿಳಿಸಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಡಾ. ಜಿ. ಪರಮೇಶ್ವರ್ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಪ್ರಮುಖವಾಗಿ ಭೂಸ್ವಾಧೀನ ಸಮಸ್ಯೆಯನ್ನು ಪರಿಹರಿಸಬೇಕಿದೆ. ಸಮತೋಲಿತ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಿಸಬೇಕಿದೆ. ಹೀಗಾಗಿ ೧೨ ಸಾವಿರ ಕೋಟಿ ರೂ. ಯೋಜನೆ. ೨೩ ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ ಎಂದರು. ಯೋಜನೆಯ ಉದ್ದೇಶ ಸಫಲವಾಗಬೇಕಿದ್ದರೆ, ಜಲಾಶಯಗಳ ಸಾಮರ್ಥ್ಯವನ್ನು ಹೆಚ್ಚಿಸದಿದ್ದರೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಪೂರೈಕೆ ಮಾಡಲು ಸಾಧ್ಯವಾಗುವುದಿಲ್ಲ. ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಲು ಸಂಕಲ್ಪ ಮಾಡಿದ್ದು, ಈ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದು ಹೇಳಿದರು.

ರೈತರ ಪ್ರತಿಭಟನೆ - ಮಾನವ ಹಕ್ಕುಗಳ ಆಯೋಗದಿಂದ ನೋಟೀಸ್

ನವದೆಹಲಿ, ಸೆ. ೧೪: ರಾಷ್ಟಿçÃಯ ಮಾನವ ಹಕ್ಕುಗಳ ಆಯೋಗ ರೈತರ ಪ್ರತಿಭಟನೆ ಸಂಬAಧ ದೆಹಲಿ, ಉತ್ತರಪ್ರದೇಶ, ಹರಿಯಾಣ ಮತ್ತು ರಾಜಸ್ಥಾನ ರಾಜ್ಯ ಸರ್ಕಾರಗಳಿಗೆ ನೋಟೀಸ್ ಕಳುಹಿಸಿದೆ. ದೇಶದಲ್ಲಿ ಕೃಷಿ ಕಾನೂನು ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆಯಿಂದಾಗಿ ಸಾರಿಗೆ, ಕಾರ್ಖಾನೆ ಉದ್ದಿಮೆ ಹಾಗೂ ಕೊರೊನಾ ಮಾರ್ಗಸೂಚಿ ಪಾಲನೆ ವಿಷಯಗಳಲ್ಲಿ ದುಷ್ಪರಿಣಾಮ ಉಂಟಾಗಿದೆ ಎಂದು ನೋಟೀಸ್‌ನಲ್ಲಿ ಹೇಳಿದೆ. ರೈತರ ಪ್ರತಿಭಟನೆಯಿಂದಾಗಿ ೯೦೦೦ ಸಣ್ಣ, ಮಧ್ಯಮ ಮತ್ತು ದೊಡ್ಡ ಕಂಪನಿಗಳಿಗೆ ನಷ್ಟ ಸಂಭವಿಸಿದೆ. ಈ ಬಗ್ಗೆ ತನ್ನ ಬಳಿ ದೂರುಗಳು ಬರುತ್ತಲೇ ಇರುವುದಾಗಿ ಆಯೋಗ ತಿಳಿಸಿದೆ. ಅಲ್ಲದೆ ರೈತರ ಪ್ರತಿಭಟನೆ ನಡೆಯುತ್ತಿರುವ ಸ್ಥಳಗಳಲ್ಲಿ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಸಂಭವಿಸುತ್ತಿದೆ. ರಾಜ್ಯಸರ್ಕಾರಗಳು ಈ ಬಗ್ಗೆ ನಿರ್ಲಕ್ಷö್ಯ ತೋರಿರುವುದಾಗಿ ಆಯೋಗ ಆರೋಪಿಸಿದೆ.

ಬಡ್ತಿ ಮೀಸಲು ಆದೇಶ ಮರುಪರಿಶೀಲನೆ ಇಲ್ಲ : ಸುಪ್ರೀಂ ಕೋರ್ಟ್

ನವದೆಹಲಿ, ಸೆ. ೧೪: ಎಸ್.ಸಿ./ಎಸ್.ಟಿ. ಬಡ್ತಿ ಮೀಸಲು ಆದೇಶವನ್ನು ಮತ್ತೆ ಪರಿಶೀಲನೆ ಮಾಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೋರ್ಟ್ ಆದೇಶವನ್ನು ಜಾರಿಗೊಳಿಸುವುದು ಹೇಗೆ ಎಂಬುದು ರಾಜ್ಯಗಳು ನಿರ್ಧರಿಸಬೇಕೆಂದು ಕೋರ್ಟ್ ಹೇಳಿದೆ. ಹಲವು ರಾಜ್ಯಗಳಲ್ಲಿ ಎಸ್.ಸಿ./ಎಸ್ ಟಿ ಗಳಿಗೆ ಬಡ್ತಿ ನೀಡುವುದಕ್ಕೆ ಉಂಟಾಗಿರುವ ಸಮಸ್ಯೆಗಳನ್ನು ಉಲ್ಲೇಖಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾ. ನಾಗೇಶ್ವರ್ ರಾವ್ ಅವರಿದ್ದ ಪೀಠ ರಾಜ್ಯ ಸರ್ಕಾರಗಳ ಪರ ವಕೀಲರಿಗೆ, ಆದೇಶ ಜಾರಿಗೊಳಿಸುವುದಕ್ಕೆ ಎದುರಾಗುತ್ತಿರುವ ವಿಶಿಷ್ಟವಾದ ಸಮಸ್ಯೆಗಳನ್ನು ಗುರುತಿಸಿ ಎರಡು ವಾರಗಳಲ್ಲಿ ಸಲ್ಲಿಸಲು ಸೂಚಿಸಿದೆ. ನಾಗರಾಜ್ ಅಥವಾ ಜರ್ನೈಲ್ ಸಿಂಗ್ (ಪ್ರಕರಣಗಳನ್ನು) ಮತ್ತೆ ಕೈಗೆತ್ತಿಕೊಳ್ಳುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇವೆ, ಏಕೆಂದರೆ ಈ ಪ್ರಕರಣಗಳು ಕೋರ್ಟ್ ನ ಕಾನೂನಿನ ಅನುಗುಣವಾಗಿದೆಯೇ? ಇಲ್ಲವೇ? ಎಂಬುದನ್ನು ನಿರ್ಧರಿಸುವುದು ಮಾತ್ರ ಉದ್ದೇಶವಾಗಿತ್ತು ಎಂದು ನ್ಯಾ. ಸಂಜೀವ್ ಖನ್ನಾ ಹಾಗೂ ಬಿಆರ್ ಗವಾಯಿ ಅವರಿದ್ದ ಪೀಠ ಹೇಳಿದೆ.

ಅಮಾನತುಗೊಂಡಿದ್ದ ಸಾರಿಗೆ ನೌಕರರನ್ನು ವಾಪಸ್ ಪಡೆಯಲು ನಿರ್ಧಾರ

ಬೆಂಗಳೂರು, ಸೆ. ೧೪: ಸಾರಿಗೆ ಮುಷ್ಕರದಲ್ಲಿ ಪಾಲ್ಗೊಂಡು ಅಮಾನತು, ವಜಾ ಹಾಗೂ ವರ್ಗಾವಣೆ ಒಳಗಾಗಿದ್ದ ನೌಕರರನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳಲಾಗುವುದು. ಸಾರಿಗೆ ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಾರಿಗೆ ಸಚಿವ ಬಿ. ಶ್ರೀರಾಮುಲು ಅಧಿಕಾರಿಗಳ ಸಭೆ ಕರೆದಿದ್ದರು, ಸಾರಿಗೆ ಮುಷ್ಕರದ ವೇಳೆ ನಾಲ್ಕು ಸಾರಿಗೆ ನಿಗಮಗಳ ಪೈಕಿ ಸುಮಾರು ಎರಡು ಸಾವಿರಕ್ಕೂ ಅಧಿಕ ನೌಕರರನ್ನು ಅಮಾನತು ಮಾಡಲಾಗಿತ್ತು. ಈ ವಿಷಯವು ಹೈಕೋರ್ಟ್ನಲ್ಲಿ ಬಾಕಿ ಇದೆ ಎಂದು ಅಧಿಕಾರಿಗಳು ಶ್ರೀರಾಮುಲುಗೆ ಮಾಹಿತಿ ನೀಡಿದರು. ಎಲ್ಲಾ ವಿವರಗಳನ್ನು ಸಲ್ಲಿಸಲು ಸಚಿವರು ನಮ್ಮನ್ನು ಕೇಳಿದರು, ಈ ಸಂಬAಧ ಸಚಿವರು ಸರ್ಕಾರದ ಜೊತೆ ಚರ್ಚಿಸಿ ಮುಂದಿನ ದಿನಗಳಲ್ಲಿ ನಿರ್ಧಾರವನ್ನು ಘೋಷಿಸಬಹುದು ಎಂದು ಅಧಿಕಾರಿಯೊಬ್ಬರು ಹೇಳಿದರು. ಸಚಿವ ಶ್ರೀರಾಮುಲು ಅವರು ಸಾರಿಗೆ ನೌಕರರನ್ನು ವಾಪಸ್ ಕೆಲಸಕ್ಕೆ ತೆಗೆದುಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಅಮಾನತುಗೊಂಡಿರುವ ಸಿಬ್ಬಂದಿ ತಿಳಿಸಿದ್ದಾರೆ. ತಮ್ಮನ್ನು ವಾಪಸ್ ಕೆಲಸಕ್ಕೆ ತೆಗೆದುಕೊಳ್ಳುವಂತೆ ಅಮಾನತುಗೊಂಡಿದ್ದ ನೌಕರರು ಶ್ರೀರಾಮುಲು ಅವರಿಗೆ ಮನವಿ ಮಾಡಿದ್ದರು. ಸೇವೆಯಿಂದ ತೆಗೆದುಹಾಕಲ್ಪಟ್ಟ ತರಬೇತುದಾರರ ವಿವರಗಳನ್ನು ಸಚಿವರು ತೆಗೆದುಕೊಂಡಿದ್ದಾರೆ.

ಅರ್ಜುನ್ ಸಿಂಗ್ ಮನೆ ಮೇಲೆ ಮತ್ತೊಮ್ಮೆ ಬಾಂಬ್ ದಾಳಿ

ಕೋಲ್ಕತ್ತ, ಸೆ. ೧೪: ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಅರ್ಜುನ್ ಸಿಂಗ್ ನಿವಾಸದ ಮೇಲೆ ಮತ್ತೊಮ್ಮೆ ಬಾಂಬ್ ದಾಳಿ ನಡೆದಿದೆ. ವಾರದ ಹಿಂದೆ ಇಂತಹದ್ದೇ ಪ್ರಕರಣ ನಡೆದಿತ್ತು. ಈ ಪ್ರಕರಣದ ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಂಡ ೨೪ ಗಂಟೆಗಳಲ್ಲಿ ಮತ್ತೊಮ್ಮೆ ಬಾಂಬ್‌ನಿAದ ದಾಳಿ ನಡೆಸಿರುವ ಘಟನೆ ವರದಿಯಾಗಿದೆ. ಘಟನೆ ವರದಿಯಾಗು ತ್ತಿದ್ದಂತೆಯೇ ಬಾಂಬ್ ಸ್ಕಾ÷್ವಡ್ ಸ್ಥಳಕ್ಕೆ ಧಾವಿಸಿದ್ದು ಬಾಂಬ್ ಎಸೆದ ಸ್ಥಳದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ಅರ್ಜುನ್ ಸಿಂಗ್, ಟಿಎಂಸಿ ವಿರುದ್ಧ ಆರೋಪ ಮಾಡಿದ್ದು, ದಾಳಿಗೆ ಕಾರಣರಾದ ಗೂಂಡಾಗಳಿಗೆ ಟಿಎಂಸಿ ರಕ್ಷಣೆ ನೀಡುತ್ತಿದೆ ಎಂದು ದೂರಿದ್ದಾರೆ. ಟಿಎಂಸಿ ಅರ್ಜುನ್ ಸಿಂಗ್ ಅವರ ಆರೋಪವನ್ನು ನಿರಾಕರಿಸಿದ್ದು, ರಾಜಕೀಯವಾಗಿ ಚಾಲ್ತಿಯಲ್ಲಿರುವುದಕ್ಕೆ ಸಂಸದರೇ ಬಾಂಬ್ ಸ್ಫೋಟದ ನಾಟಕವಾಡಿದ್ದಾರೆ ಎಂದು ಪ್ರತ್ಯಾರೋಪ ಮಾಡಿದೆ. ಬುಧವಾರ ರಾಜ್ಯದ ಬಿಜೆಪಿ ಸಂಸದ ಅರ್ಜುನ್ ಸಿಂಗ್ ನಿವಾಸದ ಎದುರು ಬಾಂಬ್ ಸ್ಫೋಟಗೊಂಡಿದ್ದ ಪ್ರಕರಣವನ್ನು ರಾಜ್ಯಪಾಲರು ಗಂಭೀರವಾಗಿ ಪರಿಗಣಿಸಿ ಘಟನೆಯನ್ನು ಖಂಡಿಸಿದ್ದರು. ಪ. ಬಂಗಾಳದಲ್ಲಿ ಹಿಂಸಾಚಾರ ಮತ್ತು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಈ ಘಟನೆ ಸೂಚಿಸುತ್ತದೆ ಎಂದು ಜಗ್ ದೀಪ್ ಧನ್ಕರ್ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.