ಮಡಿಕೇರಿ, ನ. 5: ಕೊಡವ ಭಾಷೆಯಲ್ಲಿ ಹೊಸದೊಂದು ಚಲನಚಿತ್ರವನ್ನು ನಿರ್ಮಿಸಲಾಗುತ್ತಿದ್ದು, ಇದರ ಚಿತ್ರೀಕರಣ ಸದ್ದಿಲ್ಲದೆ ನಡೆಯುತ್ತಿದೆ. ಉಸಾರ್ ಎಂಬ ಹೆಸರಿನ ಈ ಚಿತ್ರದ ಚಿತ್ರೀಕರಣ ಈಗಾಗಲೇ ಶೇ.80ರಷ್ಟು ಪೂರ್ಣಗೊಂಡಿದ್ದು, ಡಿಸೆಂಬರ್ ಅಂತ್ಯದೊಳಗೆ ಚಿತ್ರ ಬಿಡುಗಡೆಗೆ ಚಿತ್ರತಂಡ ಪ್ರಯತ್ನ ನಡೆಸುತ್ತಿದೆ. ಉಸಾರ್... ಎಂದರೆ ಕನ್ನಡದಲ್ಲಿ ಎಚ್ಚರ ಎಂಬ ಅರ್ಥ ಬರಲಿದೆ. ಬಾಳೆಯಡ ಪ್ರತೀಶ್ ಪೂವಯ್ಯ ಹಾಗೂ ಆಚೆಯಡ ಗಗನ್ ಗಣಪತಿ ಅವರ ‘ಪಿ ಆ್ಯಂಡ್ ಜಿ’ ಕ್ರಿಯೇಷನ್ಸ್ ವತಿಯಿಂದ ಈ ಚಿತ್ರ ನಿರ್ಮಾಣವಾಗುತ್ತಿದೆ. ಪ್ರಸ್ತುತದ ಸಮಾಜದಲ್ಲಿ ಕಂಡುಬರುತ್ತಿರುವ ಡ್ರಗ್ಸ್ ದಂಧೆ, ಗಾಂಜಾ ದಂಧೆಯ ದುಷ್ಪರಿಣಾಮ ಯುವ ಸಮೂಹ ದಾರಿ ತಪ್ಪುತ್ತಿರುವ ವಿಚಾರವನ್ನು ಮುಂದಿಟ್ಟುಕೊಂಡು ಇದರಲ್ಲಿ ತಂದೆ - ತಾಯಿ ಸೇರಿದಂತೆ ಪೋಷಕರು, ಹಿರಿಯರು ವಹಿಸಬೇಕಾದ ಎಚ್ಚರದ ಕಥಾವಸ್ತುವನ್ನು ಒಳಗೊಂಡಂತೆ ಚಿತ್ರ ತಯಾರಾಗುತ್ತಿದೆ,
ತಮ್ಮ ‘ಪಿ ಆ್ಯಂಡ್ ಜಿ’ ಕ್ರಿಯೇಷನ್ಸ್ ವತಿಯಿಂದ ಈ ಹಿಂದೆ ಕಿರುಚಿತ್ರ ‘ಬಾವಬಟ್ಟೆಲ್’ ನಿರ್ಮಿಸಲಾಗಿತ್ತು. ಅಲ್ಲದೆ ಕೊಡಗ್‍ರ ಸಿಪಾಯಿ ಚಿತ್ರದ ಹಂಚಿಕೆಯನ್ನು ಪಡೆದುಕೊಂಡು ಇದರ 100ಕ್ಕೂ ಅಧಿಕ ಪ್ರದರ್ಶನ ಮಾಡಲಾಗಿದೆ. ಇದೀಗ ಸುಮಾರು ಎರಡುಗಂಟೆ ಅವಧಿಯ ಹೊಸಚಿತ್ರ ಉಸಾರ್... ನಿರ್ಮಾಣಕ್ಕೆ ಮುಂದಾಗಿರುವುದಾಗಿ ಬಾಳೆಯಡ ಪ್ರತೀಶ್ ಪೂವಯ್ಯ ತಿಳಿಸಿದರು. ಈ ಚಿತ್ರದಲ್ಲಿ ಆಕ್ಷನ್, ತಮಾಷೆ, ಸಮಾಜಕ್ಕೆ ಸಂದೇಶ ಸೇರಿದಂತೆ ಮೂರು ಹಾಡುಗಳು ಇರಲಿವೆ. ಹಾಡಿಗೆ ಯಾವುದೇ ಅನುಕರಣೆ ಇಲ್ಲದೆ ಹೊಸ ಟ್ಯೂನ್ ಬಳಸಲಾಗುತ್ತಿದೆ. ಅಮ್ಮುಣಿಚಂಡ ಪ್ರವೀಣ್, ಚೊಟ್ಟಂಡ ಪ್ರಭು ಹಾಗೂ ಚೊಟ್ಟೆಯಂಡಮಾಡ ವಿಜು ಹಾಡು ರಚಿಸಿದ್ದಾರೆ.
ಚಿತ್ರಕಥೆ - ನಿರ್ದೇಶನ ತಮ್ಮದೇ ಆಗಿದೆ. ಬೆಂಗಳೂರಿನ ರಮ್ಯ ನಾಣಯ್ಯ ನಿರ್ಮಾಪಕರಾಗಿದ್ದಾರೆ ಎಂದು ಅವರು ತಿಳಿಸಿದರು. ಚಿತ್ರ ಹಾಗೂ ಚಿತ್ರದ ಸಂದೇಶ ಜನತೆಗೆ ಮುಟ್ಟಬೇಕೆಂಬುದು ತಮ್ಮ ಅಭಿಲಾಷೆಯಾಗಿದೆ ಎಂದ ಅವರು, ಸುಮಾರು 50ರಷ್ಟು ಕೊಡವ ಕಲಾವಿದರು ಹಾಗೂ ಇತರ 20 ಮಂದಿ ಸೇರಿ ಈ ಚಿತ್ರ ರೂಪುಗೊಳ್ಳುತ್ತಿದೆ. ಕುಪ್ಪಣಮಾಡ ಭೂಮಿಕಾ, ಬಲ್ಲಾರಂಡ ರಾಜೇಶ್, ಅಮ್ಮಾಟಂಡ ದಿಲೀಪ್, ತಾತಂಡ ಮೋನಿಕಾ ಮುಖ್ಯಪಾತ್ರದಲ್ಲಿದ್ದು, ಕೋಳೇರ ಸನ್ನು ಕಾವೇರಪ್ಪ, ವಾಂಚಿರ ವಿಠಲ, ಬಿದ್ದಂಡ ಉತ್ತಮ್, ಬಲ್ಯಂಡ ವರ್ಷ ವಿಜಯ್, ಚಮ್ಮಟ್ಟೀರ ಪ್ರವೀಣ್, ಮತ್ತಿತರ ಕಲಾವಿದರು ನಟಿಸಿದ್ದಾರೆ. ತಾವು ಹಾಗೂ ಗಗನ್ ಕೂಡ ಪಾತ್ರ ನಿರ್ವಹಿಸಿರುವುದಾಗಿ ತಿಳಿಸಿದ ಪ್ರತೀಶ್, ಕಕ್ಕಬೆ, ವೀರಾಜಪೇಟೆ, ಕಾಕೋಟುಪರಂಬು, ತಾಳತ್‍ಮನೆ, ಹೊದ್ದೂರು, ಬಾಳುಗೋಡು ಮತ್ತಿತರ ಕಡೆ ಚಿತ್ರೀಕರಣ ನಡೆದಿದೆ. ಶೇ.20ರಷ್ಟು ಚಿತ್ರೀಕರಣ ಬಾಕಿ ಇದ್ದು, ಈ ವಷಾರ್ಂತ್ಯದೊಳಗೆ ಚಿತ್ರ ತೆರೆಗೆ ಬರಲಿದೆ. -ಶಶಿ