ಕಡಂಗ/ ನಾಪೋಕ್ಲು, ನ. 5: ಈಗ ದೇಶದೆಲ್ಲೆಡೆ ಐ.ಪಿಎಲ್ ಫೀವರ್ ಜೋರಾಗಿದೆ. ಎಳೆಯರಿಂದ ಹಿರಿಯರವರೆಗೂ ಐಪಿಎಲ್ ಮ್ಯಾಚ್ ನೋಡದವರು ಯಾರೂ ಇರಲಾರರು. ಐಪಿಎಲ್ ನೋಡುಗರಿಗೆಲ್ಲಾ ಡ್ರೀಮ್ ಇಲೆವೆನ್ ಬಗ್ಗೆ ತಿಳಿದೇ ಇರುತ್ತದೆ.
ನಿಜವಾದ ಆಟಗಾರರನ್ನು ಬಳಸಿಕೊಂಡು ತಮ್ಮದೇ ಒಂದು ತಂಡ ಕಟ್ಟಿಕೊಂಡು ಆಡುವ ಒಂದು ರೋಚಕ ಆಟವಿದು. ಹೀಗೆ ಈ ಡ್ರೀಮ್ ಇಲೆವೆನ್ ಆಟವನ್ನು ಆಡಿದ ಭೇತ್ರಿಯ ಅಂಗಡಿ ಮಾಲೀಕ ರಫೀಕ್ ಬಿ.ಎ ಅವರು 7,94,656 ಲಕ್ಷ ರೂಪಾಯಿ ಗೆದ್ದು ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ.
49 ರೂಪಾಯಿ ಡ್ರೀಮ್ ಇಲೆವೆನ್ ಆಟದಲ್ಲಿ ದೇಶದ ವಿವಿಧ ರಾಜ್ಯಗಳ ಸುಮಾರು ಹದಿನಾರು ಜನರ ತಂಡ ಕಟ್ಟಿಕೊಂಡು ಮುಂಬೈ ಇಂಡಿಯನ್ಸ್ ಮತ್ತು ಸನ್‍ರೈಸರ್ಸ್ ಹೈದರಾಬಾದ್ ತಂಡದ ಆಟ ನವೆಂಬರ್ ಮೂರರಂದು ನಡೆಯಿತು. ಅಂದು ಈ ಡ್ರೀಮ್ ಇಲೆವೆನ್ ಆಟ ಆಡಿದ ಬೇತ್ರಿ ಗ್ರಾಮದ ರಫೀಕ್ ಅವರ ತಂಡ ಒಂದು ಕೋಟಿ ರೂಪಾಯಿ ಗೆದ್ದಿತು. ಒಂದು ಕೋಟಿ ಹಣದಲ್ಲಿ ಟಿಡಿಎಸ್ ಕಡಿತವಾಗಿ ತಲಾ ಒಬ್ಬೊಬ್ಬ ಆಟಗಾರನಿಗೆ 7,94,656 ಲಕ್ಷ ಹಣ ಅವರ ಖಾತೆಗೆ ಜಮೆಯಾಗಿದೆ.
ಈ ಕುರಿತು ಪತ್ರಿಕೆ ರಫೀಕ್ ಅವರನ್ನು ಮಾತನಾಡಿಸಿದಾಗ ‘ನಾನು ಬೇತ್ರಿಯಲ್ಲಿ ಚಿಕ್ಕದೊಂದು ಅಂಗಡಿ ಇಟ್ಟುಕೊಂಡಿದ್ದೆ. ಡ್ರೀಮ್ ಇಲೆವೆನ್ ಆಟವನ್ನು ಹದಿನಾರು ಜನರ ತಂಡ ಮಾಡಿಕೊಂಡು ಆಡಿದೆ ತಂಡ ಗೆದ್ದಿತು. ದೇವರು ಕೊಟ್ಟಿದ್ದು ಈ ಹಣವನ್ನು ಎಂದು ಭಾವಿಸಿದ್ದೇನೆ. ಚಿಕ್ಕಪುಟ್ಟ ಹಣಕಾಸಿನ ಸಮಸ್ಯೆಗಳಿದ್ದವು. ಆ ಸಮಸ್ಯೆಗಳನ್ನು ಸರಿಮಾಡಿಕೊಂಡು ಅಂಗಡಿಯನ್ನು ಸ್ವಲ್ಪ ದೊಡ್ಡದು ಮಾಡಬೇಕು ಎಂದುಕೊಂಡಿದ್ದೇನೆ ಎಂದರು. ಏನೇ ಇರಲಿ ಐಪಿಎಲ್‍ನಂಥ ಒಂದು ಕ್ರೀಡೆಯಿಂದ ಲಕ್ಷಗಟ್ಟಲೆ ಹಣ ಗಳಿಸಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಾಗಿದೆ. ಇದರಿಂದ ರಫೀಕ್ ಜೀವನಕ್ಕೂ ಸಹಾಯಕವಾಗಿದೆ. - ನೌಫಲ್, ದುಗ್ಗಳ