ಗೋಣಿಕೊಪ್ಪ ವರದಿ, ನ. 3: ಕೊಡವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಹೋರಾಟ ನಡೆಸುತ್ತಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಅವರಿಗೆ ಬೆಂಬಲ ಸೂಚಿಸಲಾಗುವುದು ಎಂದು ವೀರಾಜಪೇಟೆ ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಜೆ. ಕೆ. ಸೋಮಣ್ಣ ತಿಳಿಸಿದ್ದಾರೆ.
ಸಿಎನ್ಸಿ ವತಿಯಿಂದ ತಾ. 26 ರಂದು ಮಡಿಕೇರಿಯಲ್ಲಿ ಆಯೋಜಿಸಿರುವ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇವಲ 1.5 ಲಕ್ಷ ಕೊಡವರಿದ್ದೇವೆ. ಮಕ್ಕಳ ಶಿಕ್ಷಣ, ಉದ್ಯೋಗ ಮೀಸಲಾತಿ, ಸರ್ಕಾರಿ ಸೌಲಭ್ಯ ಪಡೆಯಲು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚು ಪ್ರಯೋಜನಕ್ಕೆ ಬರಲಿದೆ. ಕೊಡವ ಜನಾಂಗದ ಹಿನ್ನೆಲೆ, ಬದುಕು ಎಲ್ಲವೂ ಕೂಡ ಪ್ರಕೃತಿಯೊಂದಿಗೆ ಬೆಸೆದಿದೆ. ಇಂತಹ ಮೂಲ ಸಂಸ್ಕøತಿ ಹೊಂದಿರುವ ಜನಾಂಗವನ್ನು ವಿಶೇಷವಾಗಿ ಪರಿಗಣಿಸುವ ಹೋರಾಟಕ್ಕೆ ನಿರಂತರವಾಗಿ ಬೆಂಬಲ ಸೂಚಿಸಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಯೂತ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮುರುಗ, ರಮ್ಷಾದ್, ಲಾಲು ಸ್ಟಾಲಿನ್, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಕೊಣಿಯಂಡ ಮುತ್ತಣ್ಣ ಇದ್ದರು.