ಸೋಮವಾರಪೇಟೆ, ಆ.30: ಮುಂದಿನ ತಿಂಗಳ ತಾ. 19ರಂದು ರಾಷ್ಟ್ರದಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಮೆಗಾ ಇ ಲೋಕ ಅದಾಲತ್ ನಡೆಯಲಿದ್ದು, ಸೋಮವಾರಪೇಟೆ ನ್ಯಾಯಾಲಯದಲ್ಲಿ ನಡೆಯುವ ಅದಾಲತ್ನ ಪ್ರಯೋಜನ ಪಡೆಯುವಂತೆ ನ್ಯಾಯಾಧೀಶರು ಕರೆ ನೀಡಿದರು.
ಇಲ್ಲಿನ ನ್ಯಾಯಾಲಯದ ಕಲಾಪ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಿಧ ಇಲಾಖಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್.ಆರ್. ದಿಂಡಲಕೊಪ್ಪ ಅವರು, ರಾಷ್ಟ್ರದಾದ್ಯಂತ ತಾ. 19.09.2020ರಂದು ಮೆಗಾ ಇ ಲೋಕ ಅದಾಲತ್ ನಡೆಯಲಿದ್ದು, ಈ ದಿನದಂದು ಇತ್ಯರ್ಥಪಡಿಸಿಕೊಳ್ಳಲು ಸಾಧ್ಯವಿರುವಂತಹ ಎಲ್ಲಾ ದಾವೆಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು ಎಂದರು. ಕೊರೊನಾ ವೈರಸ್ ಆತಂಕದ ಹಿನ್ನೆಲೆ ಲೋಕ ಅದಾಲತ್ನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಗುವದು. ಈ ಬಗ್ಗೆ ಕಕ್ಷಿದಾರರಿಗೆ ಮಾಹಿತಿ ಒದಗಿಸುವಂತೆ ಸೂಚಿಸಿದರು.
ಸಭೆಯಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಪ್ರತಿಭಾ, ತಹಸೀಲ್ದಾರ್ ಗೋವಿಂದರಾಜು, ವೃತ್ತ ನಿರೀಕ್ಷಕ ನಂಜುಂಡೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡು, ವಕೀಲರ ಸಂಘದ ಅಧ್ಯಕ್ಷ ಡಿ.ಕೆ. ತಿಮ್ಮಯ್ಯ, ಹಿರಿಯ ಕಾರ್ಮಿಕ ಅಧಿಕಾರಿ ಲೀನಾ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುನಿಲ್ಕುಮಾರ್, ಪ.ಪಂ. ಮುಖ್ಯಾಧಿಕಾರಿ ನಾಚಪ್ಪ,ತಾಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ್, ಠಾಣಾಧಿಕಾರಿಗಳಾದ ಶಿವಶಂಕರ್, ವೆಂಕಟರಮಣ, ದೇವರಾಜು ಸೇರಿದಂತೆ ಇತರ ಅಧಿಕಾರಿಗಳು ಭಾಗವಹಿಸಿದ್ದರು.