ಮಡಿಕೇರಿ, ಆ. 29: ಕೊಡಗು ಜಿಲ್ಲಾ ಅಪರಾಧ ಪತ್ತೆದಳ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆ ಹಚ್ಚಿ ವಶಪಡಿಸಿರುವ ಮಾದಕ ವಸ್ತು (ಡ್ರಗ್) ಎಂ.ಡಿ.ಎಂ.ಎ (ಂmಠಿheಣಚಿhgiಟಿe) ಎಂಬ ಪದಾರ್ಥವಾಗಿದೆ. ಇದೀಗ ಈ ಮಾದಕ ಪದಾರ್ಥವನ್ನು ಹೆಚ್ಚಿನ ಮಾಹಿತಿಗಾಗಿ ಎಫ್.ಎಸ್.ಎಲ್. ಪರೀಕ್ಷೆಗೆ ಕಳುಹಿಸಲಾಗಿದೆ.ನಿನ್ನೆ ನಡೆಸಲಾಗಿದ್ದ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳು ಹಾಗೂ ಟಾಟಾ ಇಂಡಿಕಾ ಕಾರ್ (ಕೆಎ-50- 9941) ಸಹಿತವಾಗಿ 300 ಗ್ರಾಂನಷ್ಟು ಎಂ.ಡಿ.ಎಂ.ಎ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿತ್ತು. ಆರೋಪಿ ಗಳಾದ ಕೊಡಗಿನ ಅಯ್ಯಂಗೇರಿಯ ಮಜೀದ್ (35) ಶಿಯಾಬುದೀನ್ (32) ಹಾಗೂ ಬೆಂಗಳೂರು ಶಿವಾಜಿನಗರದ ಮುಜಾಮಿಲ್ (31) ಬಂಧಿತರಾಗಿದ್ದರು.ತಂಡ ರಚನೆ : ಪ್ರಕರಣದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ಇಂದು ಅಧಿಕೃತವಾದ ಮಾಹಿತಿಯನ್ನು ಮಾಧ್ಯಮಕ್ಕೆ ಬಿಡುಗಡೆಗೊಳಿಸಿದ್ದಾರೆ. ಬಂಧಿತರಾಗಿರುವ ಮೂವರನ್ನು ವಿಚಾರಣೆ ಮಾಡಿದ ಸಂದರ್ಭ ಈ ಮಾದಕ ವಸ್ತು ವಹಿವಾಟಿನಲ್ಲಿ ಬೆಂಗಳೂರು ಹಾಗೂ ಕೊಡಗಿನ ಮೂಲದವರಾದ ಇನ್ನೂ ಐದು ಮಂದಿ ಆರೋಪಿಗಳು ಭಾಗಿಯಾಗಿರುವುದು ತಿಳಿದುಬಂದಿದೆ. ಈ ಮಾದಕ ವಸ್ತು ಜಾಲದಲ್ಲಿ ತೊಡಗಿರುವ ಇವರುಗಳ ಬಂಧನಕ್ಕೆ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ ಎಂದು ಕ್ಷಮಾ ಮಿಶ್ರಾ ಅವರು ತಿಳಿಸಿದ್ದು, ಕಾರ್ಯಾಚರಣೆ ತಂಡಕ್ಕೆ ನಗದು ಬಹುಮಾನವನ್ನು ಪ್ರಕಟಿಸಿದ್ದಾರೆ.
ಮತ್ತೊಂದು ಕಾರು ವಶ : ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕುಶಾಲನಗರದಲ್ಲಿ ಇನ್ನೊಂದು ಸ್ವಿಫ್ಟ್ ಕಾರನ್ನು ವಶಕ್ಕೆ ಪಡೆದಿದ್ದಾರೆ.
ನಿನ್ನೆ ಏನಾಗಿತ್ತು...? : ಜಿಲ್ಲೆಯ ವಿವಿಧ ಭಾಗಗಳಿಗೆ ಅತ್ಯಾಧುನಿಕ ಮಾದರಿಯ ಮಾದಕ ವಸ್ತುಗಳನ್ನು ಸರಬರಾಜು ಮಾಡಲು ಹೊಂಚು ಹಾಕುತ್ತಿದ್ದ ಆರೋಪಿಗಳ ಸುಳಿವು ಪೊಲೀಸರಿಗೆ ಲಭ್ಯವಾಗಿತ್ತು. ಜಿಲ್ಲೆಗೆ ಹೊರಜಿಲ್ಲೆ, ರಾಜ್ಯದಿಂದ ಗಾಂಜಾ ಮತ್ತಿತರ ಮಾದಕ ವಸ್ತುಗಳು ಸರಬರಾಜಾಗುತ್ತಿರುವುದು, ಜಿಲ್ಲೆಯ ಯುವಕರು ಮಾದಕ ವ್ಯಸನಿಗಳಾಗುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳು ಈಗಾಗಲೇ ಸೂಚನೆಯನ್ನು ನೀಡಿದ್ದಾರೆ. ಈ ಹಿಂದಿನ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪಣ್ಣೇಕರ್ ಅವರು ಅಧಿಕಾರದಲ್ಲಿದ್ದಾಗಲೂ ಕೆಲವಾರು ದಾಳಿಗಳು ನಡೆದಿದ್ದವು.
ಇದರಂತೆ ತಾ. 28ರಂದು ಮಡಿಕೇರಿ ಗ್ರಾಮಾಂತರ ಪಿ.ಎಸ್.ಐ. ಚಂದ್ರಶೇಖರ್ ನೇತೃತ್ವದ ತಂಡ ಮಡಿಕೇರಿ ನಗರದ ವ್ಯಾಪ್ತಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ಸಂದರ್ಭ ಟಾಟಾ ಇಂಡಿಕಾ ಕಾರು
(ಕೆಎ-50 -9091) ಮತ್ತು ಮಾರುತಿ ಸ್ವಿಫ್ಟ್ ವಾಹನವೊಂದನ್ನು ತಡೆದು ಪರಿಶೀಲಿಸುವ ವೇಳೆ ವಾಹನದಲ್ಲಿದ್ದವರು ಪರಾರಿಯಾಗಲು ಯತ್ನಿಸಿದ್ದಾರೆ. ಇವರಲ್ಲಿ ಇಂಡಿಕಾ ಕಾರ್‍ನಲ್ಲಿದ್ದ ಮೂವರನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ ಸ್ವಿಫ್ಟ್ ಕಾರ್‍ನಲ್ಲಿದ್ದವರು ತಪ್ಪಿಸಿಕೊಂಡಿದ್ದರು. ಇವರ ವಿಚಾರಣೆ ಸಂದರ್ಭ ಸ್ವಿಫ್ಟ್‍ಕಾರ್‍ನಲ್ಲಿ ಪರಾರಿಯಾ ದವರು ಕೂಡ ಸದರಿ ಮಾದಕ ವಸ್ತು ವ್ಯವಹಾರಕ್ಕೆ ತಮ್ಮೊಂದಿಗೆ ಬಂದಿರುವುದಾಗಿ ಬಂಧಿತರು ತಿಳಿಸಿದ್ದರು.
ಈ ಕಾರ್ಯಾಚರಣೆಯನ್ನು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕ್ಷಮಾ ಮಿಶ್ರಾ, ಐ.ಪಿ.ಎಸ್. ಹಾಗೂ ಮಡಿಕೇರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆಯ ಪಿ.ಎಸ್.ಐ.ರವರಾದ ಚಂದ್ರಶೇಖರ ನೇತೃತ್ವದಲ್ಲಿ ಕೊಡಗು ಜಿಲ್ಲಾ ಪೊಲೀಸ್ ಅಪರಾಧ ಪತ್ತೆ ದಳದ ಹಮೀದ್, ಎ.ಎಸ್.ಐ. ವೆಂಕಟೇಶ್, ಯೋಗೇಶ್ ಕುಮಾರ್, ನಿರಂಜನ್, ವಸಂತ, ಅನಿಲ್ ಕುಮಾರ್, ಶರತ್, ಚಾಲಕ ಶಶಿಕುಮಾರ್, ಮಡಿಕೇರಿ ಗ್ರಾಮಾಂತರ ಠಾಣೆಯ ದಿನೇಶ್, ಮಡಿಕೇರಿ ನಗರ ಠಾಣೆಯ ಪ್ರವೀಣ್ ಮತ್ತು ಸಿ.ಡಿ.ಆರ್. ಸೆಲ್‍ನ ರಾಜೇಶ್ ಪಾಲ್ಗೊಂಡಿದ್ದರು.