ಮಡಿಕೇರಿ, ಆ. 27: ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಕೈಲ್ಪೋಳ್ದ್ (ಕೈಲುಮುಹೂರ್ತ) ಹಬ್ಬದ ಸಂಭ್ರಮ ಆರಂಭಗೊಂಡಿದೆ. ಜಿಲ್ಲೆಯಲ್ಲಿ ಸಾರ್ವತ್ರಿಕವಾಗಿ ಸೆ. 3 ರಂದು ಹಬ್ಬಾಚರಣೆ ನಡೆಯುವದು. ಆದರೆ ಈ ಹಿಂದಿನ ಕ್ರಮದಂತೆ ಸೂರ್ಲಬ್ಬಿನಾಡ್, ಮುತ್ತ್ನಾಡ್ ಹಾಗೂ ನಾಲ್ಕುನಾಡು ವಿಭಾಗದಲ್ಲಿ ಬೇರೆ ಬೇರೆ ದಿನಗಳಲ್ಲಿ ಈ ಹಬ್ಬಾಚರಣೆ ನಡೆಯುವದು ಸಂಪ್ರದಾಯವಾಗಿದೆ. ಕಕ್ಕಡ ಮಾಸ ಕಳೆದ ಬಳಿಕ ಬರುವ ಮೊದಲ ಮಂಗಳವಾರ ಹಬ್ಬ ಆಚರಿಸಲ್ಪಟ್ಟರೆ, ಗಾಳಿಬೀಡು ವ್ಯಾಪ್ತಿಯನ್ನು ಒಳಗೊಂಡ ಮುತ್ತ್ನಾಡ್ನಲ್ಲಿ ಬೇರೆ ದಿನಾಂಕದಂದು ಹಬ್ಬ ಜರುಗಲಿದೆ. ನಾಲ್ಕುನಾಡು ವಿಭಾಗದಲ್ಲಿ ವರ್ಷಂಪ್ರತಿ ಆ. 28 ರಂದು ಕೈಲುಮುಹೂರ್ತ ಆಚರಿಸಲಾಗುತ್ತದೆ. ಇದರಂತೆ ತಾ. 28 ರಂದು (ಇಂದು) ಈ ವ್ಯಾಪ್ತಿಯಲ್ಲಿ ಹಬ್ಬಾಚರಣೆ ನಡೆಯಲಿದೆ. ಆದರೆ, ಕೋವಿಡ್ ಕಾರಣದಿಂದಾಗಿ ಈ ಬಾರಿ ವರ್ಷಂಪ್ರತಿ ನಡೆಯುತ್ತಿದ್ದ ಹಲವು ಕಾರ್ಯಕ್ರಮಗಳು ಸಾರ್ವತ್ರಿಕವಾಗಿ ಜರುಗುತ್ತಿಲ್ಲ.