ಮಡಿಕೇರಿ, ಆ. 27: ದೇಶಕಂಡ ಅಪ್ರತಿಮ ಸೇನಾನಿ ಪದ್ಮಭೂಷಣ ಖ್ಯಾತಿಯ ಜನರಲ್ ಕೆ.ಎಸ್. ತಿಮ್ಮಯ್ಯ ಅವರು ಜನ್ಮ ತಳೆದ ಕೊಡಗಿನ ಮಡಿಕೇರಿಯ ನಿವಾಸವಾಗಿರುವ ‘ಸನ್ನಿಸೈಡ್’ ಅವರ ಸೇನಾ ಬದುಕಿನ ಐತಿಹ್ಯವನ್ನು ಪರಿಚಯಿಸುವಂತಹ ಆಕರ್ಷಣೀಯ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. 2006ರಲ್ಲೇ ಕರ್ನಾಟಕ ಸರಕಾರದ ಮೂಲಕ ಪ್ರಕಟಗೊಂಡಿದ್ದ ಈ ಯೋಜನೆ ಹತ್ತು - ಹಲವಾರು ಕಾರಣಗಳಿಂದಾಗಿ ತೀರಾ ವಿಳಂಬಗತಿಯಲ್ಲಿ ಪ್ರಾರಂಭಗೊಂಡಿರು ವದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಪ್ರಾದೇಶಿಕ ಸಾರಿಗೆ ಇಲಾಖೆಗೆ ನೀಡಲ್ಪಟ್ಟಿದ್ದ ಜಾಗವನ್ನು ವಾಪಾಸ್ಸು ಪಡೆಯುವ ಯತ್ನ, ಅನುದಾನ ಸಿಗುವಲ್ಲಿ ವಿಳಂಗ, ಆಡಳಿತಾತ್ಮಕ ವಿಚಾರ, ಸೇರಿದಂತೆ ಇಚ್ಚಾಶಕ್ತಿಯ ಕೊರತೆಯಿಂದಾಗಿ ಜನರಲ್ ತಿಮ್ಮಯ್ಯ ಸ್ಮಾರಕ ಭವನ ನಿರ್ಮಾಣ ಕೆಲಸ ಮುಂದುವರಿಯಲು ವರ್ಷಗಳೇ ಬೇಕಾಗಿತ್ತು.ಈ ನಡುವೆ ಅಸ್ತಿತ್ವಕ್ಕೆ ಬಂದ ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂನ ಪ್ರಮುಖರ ಸತತ ಪ್ರಯತ್ನದ ಫಲವಾಗಿ ಇದೀಗ ಈ ‘ಸನ್ನಿಸೈಡ್’ ಆವರಣ ಉತ್ತಮ ತಾಣವಾಗಿ ಪರಿವರ್ತನೆಗೊಂಡಿದೆ. ರಾಜ್ಯದ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾಡಳಿತ, ಜನಪ್ರತಿನಿಧಿಗಳೂ ಕೈಜೋಡಿಸಿದ್ದಾರೆ. ಹಳೆಯ ಮನೆಯನ್ನೇ ಯಥಾಸ್ಥಿತಿಯಲ್ಲಿ ವ್ಯವಸ್ಥಿತಗೊಳಿಸಿ ತಿಮ್ಮಯ್ಯ ಅವರ ಹುಟ್ಟಿನಿಂದ ಅವರ ಬದುಕು - ಸಾಹಸದ ಯಶೋಗಾಥೆಯನ್ನು ಬಿಂಬಿಸುವ ಪ್ರಯತ್ನ ಇಲ್ಲಿ ನಡೆದಿದೆ. ಭಾವಚಿತ್ರಗಳು, ಮನೆ ಒಳಭಾಗದ ವಿನ್ಯಾಸ, ವಿವಿಧ ಬಗೆಯ ಆಯುಧಗಳು ಸೇರಿದಂತೆ ಮನೆ ಹೊರ ಆವರಣವೂ ಸುವ್ಯವಸ್ಥಿತ ರೀತಿಯಲ್ಲಿ ತಯಾರಾಗುತ್ತಿದ್ದು, ಸೇನಾ ಜಿಲ್ಲೆ (ಮೊದಲ ಪುಟದಿಂದ) ಎಂಬ ಹೆಸರಿನ ಕೊಡಗಿನಲ್ಲಿ ಜನಾಕರ್ಷಣೆ ಪಡೆಯುವದು ಖಚಿತ ಎನ್ನಬಹುದಾಗಿದೆ.

ಹಲವಷ್ಟು ಉದ್ದೇಶಿತ ಕೆಲಸಗಳು ಪೂರ್ಣಗೊಂಡಿದ್ದರೂ ಕೊನೆಯ ಹಂತಹ ಕೆಲಸ ಕಾರ್ಯಗಳು ಬಾಳಿ ಉಳಿದಿವೆ. ಈಗಾಗಲೇ ಸ್ಮಾರಕ ಭವನ ಉದ್ಘಾಟನೆಗೊಳ್ಳಬೇಕಿತ್ತಾದರೂ ಪ್ರಸಕ್ತ ವರ್ಷ ಎದುರಾದ ಕೋವಿಡ್-19 ಸನ್ನಿವೇಶದಿಂದ ಮತ್ತೆ ಸ್ವಲ್ಪ ಮಟ್ಟಿಗೆ ವಿಳಂಬಕ್ಕೆ ಕಾರಣವಾಗಿದೆ. ಕೇಂದ್ರದ ಹೊರ ಆವರಣದಲ್ಲಿ ಯುದ್ಧಸ್ಮಾರಕ, ಯುದ್ಧ ವಿಮಾನ, ಟ್ಯಾಂಕರ್, ಬೃಹತ್ ಗಾತ್ರದ ಸೇನಾ ಬೂಟ್‍ಗಳು ಗಮನ ಸೆಳೆಯುತ್ತಿವೆ. ಎಲ್ಲಾ ಪರಿಕಲ್ಪನೆಗಳು ಸಂಪೂರ್ಣವಾದಲ್ಲಿ ಇದು ರಾಜ್ಯದಲ್ಲೇ ಒಂದು ಉತ್ತಮ ಕೇಂದ್ರವಾಗಿ ರೂಪುಗೊಳ್ಳುವದರಲ್ಲಿ ಸಂಶಯವಿಲ್ಲ.

ರಾಷ್ಟ್ರಪತಿ ಆಗಮನದ ನಿರೀಕ್ಷೆ

ಮುಂದಿನ ಕೆಲವು ತಿಂಗಳಿನಲ್ಲಿ ಅಥವಾ ಮಾರ್ಚ್ 31ರೊಳಗೆ ಇದರ ಉದ್ಘಾಟನೆ ಬಹುತೇಕ ನಡೆಯುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿಯೂ ಪ್ರಯತ್ನಗಳು ನಡೆಯುತ್ತಿರುವದು ‘ಶಕ್ತಿ’ಗೆ ತಿಳಿದು ಬಂದಿದೆ. ಫೋರಂನ ಪದಾಧಿಕಾರಿಗಳು, ಮತ್ತಿತರ ಪ್ರಮುಖರ ಉತ್ಸುಕತೆಯಂತೆ ಕೇಂದ್ರದ ಉದ್ಘಾಟನೆಗೆ ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥರು (ಕಮಾಂಡರ್ ಇನ್ - ಚೀಫ್) ಆಗಿರುವ ರಾಷ್ಟ್ರಪತಿಗಳನ್ನು ಕರೆತರುವ ಪ್ರಯತ್ನ ನಡೆದಿದೆ. ಇದಕ್ಕೆ ರಾಷ್ಟ್ರಪತಿಗಳಾದ ರಮಾನಾಥ್ ಕೋವಿಂದ್ ಅವರು ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದ್ದು, ಡಿಸೆಂಬರ್ ಒಳಗೆ ಆಗಮಿಸುವ ನಿರೀಕ್ಷೆಯಿದೆ. ರಾಷ್ಟ್ರಪತಿಗಳೊಂದಿಗೆ ದೇಶದ ಸೇನಾ ಪಡೆಗಳ ಬಹುತೇಖ ಪ್ರಮುಖರು ಮಡಿಕೇರಿಗೆ ಆಗಮಿಸುವ ನಿರೀಕ್ಷೆಯೂ ಇದೆ. ಸ್ಮಾರಕ ಭವನದ ನೋಟದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವದು ಕಂಡು ಬಂದಿದೆ.