ವೀರಾಜಪೇಟೆ, ಆ. 10: ರಾಜ್ಯ ಸರಕಾರವು ಕೈಗೊಂಡಿರುವ ಆನ್‍ಲೈನ್ ಶಿಕ್ಷಣದ ಯೋಜನೆ ಉತ್ತಮವಾಗಿದ್ದರೂ ಇಂದಿನ ಎಲ್ಲ ಇಲಾಖೆಗಳ ಅಂತರಜಾಲ ಸಂಪರ್ಕ ದುಃಸ್ಥಿತಿಯಿಂದ ಕೂಡಿದ್ದು, ಇದನ್ನು ಸರಿಪಡಿಸದೆ ಆನ್‍ಲೈನ್ ಶಿಕ್ಷಣ ಜಾರಿಗೆ ತಂದರೆ ಆ ಯೋಜನೆಯು ವೈಫಲ್ಯವನ್ನು ಕಾಣಲಿದೆ ಎಂದು ಜಯಕರ್ನಾಟಕ ಸಂಘದ ತಾಲೂಕು ಸಮಿತಿ ಅಧ್ಯಕ್ಷ ಮಂಡೇಟಿರ ಅನಿಲ್ ಅಯ್ಯಪ್ಪ ತಿಳಿಸಿದ್ದಾರೆ.

ಕೇಂದ್ರ ಸರಕಾರದ ಅಧೀನದಲ್ಲಿರುವ ಬಿ.ಎಸ್.ಎನ್.ಎಲ್ ಇಲಾಖೆ ಅಂತರಜಾಲ ಸಂಪರ್ಕದ ಸಮಸ್ಯೆಯನ್ನು ಎದುರಿಸುತ್ತಿದ್ದು, ಇದನ್ನು ಈ ತನಕವೂ ಸರಿಪಡಿಸಲಾಗದ ಪರಿಸ್ಥಿತಿಯಲ್ಲಿ ಮುಂದುವರೆಯುತ್ತಿದೆ. ಇತರ ಖಾಸಗಿ ಸಂಸ್ಥೆಗಳನ್ನು ಬಿ.ಎಸ್.ಎನ್.ಎಲ್ ಸಂಸ್ಥೆಗೆ ಹೋಲಿಸಿದರೆ ಈ ಸಂಸ್ಥೆಯ ಕಾರ್ಯ ಶೂನ್ಯವಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಮಾತ್ರ ಬಿಎಸ್‍ಎನ್‍ಎಲ್‍ನ ಸಂಪರ್ಕ ಜಾಲದ ಸಮಸ್ಯೆ ಇರಬಹುದೆಂದು ಪರಿಗಣಿಸಿ ಗ್ರಾಮಾಂತರ ಪ್ರದೇಶದ ಕೆಲವು ಕುಟುಂಬಗಳು ಪಟ್ಟಣ, ನಗರ ಪ್ರದೇಶಗಳಿಗೆ ಸ್ಥಳಾಂತರಗೊಂಡರೂ ಅಲ್ಲಿಯೂ ಅಂತರಜಾಲ ಸಂಪರ್ಕದ ಸಮಸ್ಯೆ ಕಾಡುತ್ತಿದೆ. ಗ್ರಾಹಕರು ಅಂತರಜಾಲ ಸಂಪರ್ಕದ ಖಾಸಗಿ ಸಂಸ್ಥೆಗಳಿಗೆ ಮೊರೆಹೋದರೆ ಅಲ್ಲಿ ಶುಲ್ಕ ದುಬಾರಿಯಾಗಿದೆ. ಅನೇಕ ವರ್ಷಗಳಿಂದ ಬಿಎಸ್‍ಎನ್‍ಎಲ್ ಸಂಸ್ಥೆ ದುಃಸ್ಥಿತಿಯಲ್ಲಿಯೇ ಮುಂದುವರೆಯುತ್ತಿದೆ. ಈಗಾಗಲೇ ವೀರಾಜಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಹಕರು ದೂರವಾಣಿ ಸಂಪರ್ಕದ ಜೊತೆಯಲ್ಲಿಯೇ ಅಂತರಜಾಲ ಸಂಪರ್ಕ ಹೊಂದಿದ್ದರೂ, ತಿಂಗಳುಗಟ್ಟಲೆ ದೂರವಾಣಿ ಸಮಸ್ಯೆಯಿಂದ ದೂರವಾಣಿ ಸಂಪರ್ಕವನ್ನೇ ಕಡಿತಗೊಳಿಸಿದ್ದಾರೆ ಎಂದು ಅನಿಲ್ ಅಯ್ಯಪ್ಪ ದೂರಿದ್ದಾರೆ.

ದೂರವಾಣಿ ಇಲಾಖೆಯ ಕೆಲವು ನಿವೃತ್ತ ನೌಕರರು, ದೂರವಾಣಿ ಹಾಗೂ ಅಂತರಜಾಲ ಸಂಪರ್ಕಕ್ಕಾಗಿ ಬಿ.ಎಸ್.ಎನ್.ಎಲ್‍ನ ದುಬಾರಿ ಶುಲ್ಕದ ಫೈಬರ್ ಕೇಬಲ್ ಸಂಪರ್ಕ ಪಡೆಯುವಂತೆ ಪ್ರಚಾರ ಹಾಗೂ ಸಲಹೆ ಮಾಡುತ್ತಿದ್ದಾರೆ. ಹಳೆಯ ದೂರವಾಣಿ ಅಂತರಜಾಲ ಸಂಪರ್ಕದ ದುರಸ್ತಿ ಇಲ್ಲವೇ ಬದಲಾಯಿಸುವ ಕುರಿತು ಇಲಾಖೆ ಯಾವುದೇ ಚಕಾರ ಎತ್ತುತ್ತಿಲ್ಲ. ಇಂದಿನ ಬಿಎಸ್‍ಎನ್‍ಎಲ್ ಸಂಸ್ಥೆಯ ಕಾರ್ಯವೈಖರಿಯಿಂದ ರಾಜ್ಯ ಸರಕಾರದ ಆನ್‍ಲೈನ್ ಶಿಕ್ಷಣ ಯಶಸ್ಸನ್ನು ಕಾಣಲಿದೆಯೇ ಎನ್ನುವದನ್ನು ಅವಲೋಕಿಸಬೇಕಾಗಿದೆ. ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂತರ ಜಾಲದ ಸಂಪರ್ಕಕ್ಕಾಗಿ ಟವರನ್ನು ಅಳವಡಿಸಲಾಗಿದ್ದರೂ, ಗ್ರಾಹಕರಿಗೆ ಪ್ರಯೋಜನವಾಗಿಲ್ಲ. ಮೊದಲು ಕೇಂದ್ರ ಸರಕಾರದ ದೂರವಾಣಿ ಇಲಾಖೆಯ ಅಂತರಜಾಲ ಸಂಪರ್ಕವನ್ನು ಸೂಕ್ತ ರೀತಿಯಲ್ಲಿ ಸರಿಪಡಿಸಿದ ನಂತರ ಆನ್‍ಲೈನ್ ಶಿಕ್ಷಣಕ್ಕೆ ಒತ್ತು ನೀಡುವುದು ಉತ್ತಮ ಎಂದು ಸಂಘಟನೆಯ ವೀರಾಜಪೇಟೆ ನಗರ ಸಮಿತಿ ಅಧ್ಯಕ್ಷ ಅನಿಲ್ ಅಯ್ಯಪ್ಪ ತಿಳಿಸಿದ್ದಾರೆ.