ಸೋಮವಾರಪೇಟೆ, ಆ. 3: ಮಳೆಗಾಲದಲ್ಲಿ ಕಾಣಸಿಗುವ ಅಣಬೆಗಳಿಗೆ ಮಾಂಸಕ್ಕಿಂತಲೂ ಅಧಿಕ ಬೇಡಿಕೆ-ಬೆಲೆ ಕಂಡುಬರುತ್ತಿದ್ದು, ಸಂತೆ ದಿನವಾದ ಸೋಮವಾರದಂದು ಪಟ್ಟಣದಲ್ಲಿ ಬೇರಣಬೆಯ ವ್ಯಾಪಾರ ಭರಾಟೆ ಜೋರಾಗಿತ್ತು.

ಅರಣ್ಯ, ಬಾಣೆ, ಕಾಡು ಪ್ರದೇಶದಲ್ಲಿ ಉಗಮಿಸುವ ಬೇರಣಬೆಗಳನ್ನು ಸಂಗ್ರಹಿಸುವ ಗ್ರಾಮೀಣ ಪ್ರದೇಶ ಮಂದಿ ಪಟ್ಟಣಕ್ಕೆ ತಂದು ವರ್ತಕರಿಗೆ ಮಾರಾಟ ಮಾಡುತ್ತಾರೆ. ಇವರಿಂದ ಖರೀದಿಸುವ ವರ್ತಕರು ನಂತರ ಗ್ರಾಹಕರಿಗೆ ಮಾರುತ್ತಿದ್ದು, ಕುರಿ ಮಾಂಸಕ್ಕಿಂತಲೂ ಅಧಿಕ ದರದಲ್ಲಿ ಮಾರಾಟವಾಗುತ್ತಿದೆ. 1 ಕೆ.ಜಿ. ಮೊಗ್ಗಿನ ಅಣಬೆಗೆ 600 ರಿಂದ 650 ರೂ., ಅರಳಿರುವ ಅಣಬೆಗೆ 200 ರಿಂದ 300 ರೂಪಾಯಿಯವರೆಗೂ ದರ ನಿಗದಿಪಡಿಸಿ ಮಾರಾಟ ಮಾಡುತ್ತಿದ್ದು, ಅಣಬೆ ಪ್ರಿಯರು ಅಪರೂಪಕ್ಕೆ ಸಿಗುವ ಅಣಬೆಗಳನ್ನು ಖರೀದಿಸುತ್ತಿದ್ದ ದೃಶ್ಯ ಸೋಮವಾರ ಕಂಡುಬಂತು.