ಮಡಿಕೇರಿ, ಆ. 3: ದೇಶದಲ್ಲಿ ಕೊರೊನಾದ ಆಟ ಒಂದೊಂದು ಕ್ಷೇತ್ರಕ್ಕೆ ಒಂದೊಂದು ರೀತಿಯಲ್ಲಿ ತನ್ನ ಚಾಟಿಯೇಟು ಬೀಸಿದೆ. ಆತಂಕದ ಈ ಪರಿಸ್ಥಿತಿಯಿಂದಾಗಿ ಇಡೀ ದೇಶವ್ಯಾಪಿಯಾಗಿ ಎಲ್ಲವೂ ಬುಡಮೇಲಾದಂತಾಗಿರುವುದು ಎಲ್ಲರಿಗೂ ಬಗೆ ಬಗೆಯಾಗಿ ಅರಿವು ಮೂಡಿಸಿದೆ. ವಿವಿಧ ವಲಯಗಳಲ್ಲಿ ಉಂಟಾದ ಏರುಪೇರು ಕ್ರೀಡಾ ಕ್ಷೇತ್ರದ ಮೇಲೂ ಪರಿಣಾಮ ಬೀರಿದೆ. ಎಲ್ಲಿಯೂ ಯಾವುದೇ ರೀತಿಯ ಕ್ರೀಡಾ ಚಟುವಟಿಕೆಗಳು ಈ ಬಾರಿ ಮಾರ್ಚ್‍ನಿಂದ ಈ ತನಕ ನಡೆದೇ ಇಲ್ಲ.

ಲಾಕ್‍ಡೌನ್ - ನಿರ್ಬಂಧಕಾಜ್ಞೆ, ಕಫ್ರ್ಯೂ ಜಾರಿ ಯಂತಹ ಅನಿವಾರ್ಯತೆ ಗಳಿಂದ ಕ್ರೀಡಾ ಚಟುವಟಿಕೆಗಳಿಂದ ಗರಿಗೆದರಿರುತ್ತಿದ್ದ ಸಮಯವೆಲ್ಲವೂ ಮಂಕಾಗಿದೆ. ವಿವಿಧ ರೀತಿಯ ಕ್ಲಬ್‍ಗಳಿಗೆ ಬೀಗ ಜಡಿಯಲ್ಪಟ್ಟಿವೆ. ಜಿಮ್, ವಾಕಿಂಗ್‍ನಂತಹ ವ್ಯಾಯಾಮಕ್ಕೂ ನಿರ್ಬಂಧವಿತ್ತು. ಮಾತ್ರವಲ್ಲದೆ ಜನತೆ ಮೈದಾನ, ಪಾರ್ಕ್‍ಗಳು, ವ್ಯಾಯಾಮ ಶಾಲೆಗಳತ್ತ ಸುಳಿಯುವಂತಿರಲಿಲ್ಲ. ಮನೆಯೊಳಗಡೆಯೇ ಮುದುಡಿ ಕೂರುವುದು ಕ್ಲಿಷ್ಟಕರವಾಗಿತ್ತು.

ಇಂತಹ ಪರಿಸ್ಥಿತಿಯನ್ನು ಎದುರಿಸಲು ಮಾನಸಿಕ - ದೈಹಿಕ ಒತ್ತಡಗಳನ್ನು ನಿವಾರಿಸಲು ಮಕ್ಕಳು, ಮಹಿಳೆಯರು, ಪುರುಷರು, ಇಳಿ ವಯಸ್ಸಿನವರು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಮನೆಯಲ್ಲಿಯೇ ಕುಟುಂಬ ಸಹಿತವಾಗಿ ಕೆಲವೊಂದು ಒಳಾಂಗಣ ಕ್ರೀಡೆಗಳು ಇನ್ನಿತರ ಚಟುವಟಿಕೆಗಳತ್ತ ಗಮನ ಹರಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಮಾತ್ರವಲ್ಲ ಕೆಲವರು ಸಾಹಿತ್ಯ ಪರ ಚಟುವಟಿಕೆಗಳಲ್ಲಿ ನಿರತರಾದರೆ, ಇನ್ನು ಹಲವರು ಬಗೆ ಬಗೆಯ ತಿಂಡಿಗಳು, ಆಹಾರ ತಯಾರಿಕೆಯ ಪ್ರಯತ್ನ ನಡೆಸಿದ್ದಾರೆ. ಇದರಿಂದ ಹೊರತಾಗಿ ಇನ್ನೂ ಹಲವಾರು ಜನರು, ಶಾಲೆಗಳಿಲ್ಲದ ಕಾರಣ ವಿದ್ಯಾರ್ಥಿಗಳು ಸೇರಿ ಮನೆಯಲ್ಲಿಯೇ ಒಳಾಂಗಣದಲ್ಲಿ ಆಡುವಂತಹ ಕೇರಂ, ಚೆಸ್, ಶೆಟಲ್, ಲೂಡೋ, ಕಾಡ್ರ್ಸ್ (ರೆಮ್ಮಿ) ಇಂತಹ ಕ್ರೀಡೆಗಳನ್ನು ತಮ್ಮ ತಮ್ಮ ಕುಟುಂಬ ಸದಸ್ಯರೊಂದಿಗೆ ನಡೆಸುತ್ತಾ ಒತ್ತಡ ನಿವಾರಣೆ ಮಾಡಿಕೊಳ್ಳುತ್ತಿದ್ದಾರೆ. ನಿರಂತರ ಟಿ.ವಿ. ವೀಕ್ಷಣೆ, ಹಾಡು ಕೇಳುವುದೂ ‘ಬೋರ್’ ಎನಿಸುತ್ತದೆ. ಇಂತಹ ಸಂದರ್ಭದಲ್ಲಿ ಜನತೆಗೆ ಹೊಸ ಮಾರ್ಗ ಒಳಾಂಗಣ ಕ್ರೀಡಾ ಚಟುವಟಿಕೆಗಳು. ಈ ಕಾರಣದಿಂದಲೇ ಕಳೆದ ಮಾರ್ಚ್ ತಿಂಗಳಿಂದಲೇ ಒಳಾಂಗಣ ಕ್ರೀಡಾ ಸಾಮಗ್ರಿಗಳಿಗೆ ಭಾರೀ ಬೇಡಿಕೆ ಎದುರಾಗಿದೆ. ಬಹುತೇಕ ಮನೆಗಳಿಗೆ ಕೇರಂ ಬೋರ್ಡ್, ಚೆಸ್ ಬೋರ್ಡ್, ಲೂಡೋ, ಶಟಲ್ ಇಂತಹವುಗಳನ್ನು ಕ್ರೀಡಾ ಮಳಿಗೆಗಳ ಮೂಲಕ ಆನ್‍ಲೈನ್ ಬುಕ್ಕಿಂಗ್‍ನ ಮೂಲಕ ತರಿಸಿ ಕೊಳ್ಳಲಾಗಿದೆ. ಇವುಗ ಳೊಂದಿಗೆ ‘ಜ್ಯಾಕ್‍ಪಾಟ್’ (ರೆಮ್ಮಿ) ನಂತಹ ಇಸ್ಪೀಟ್ ಆಟವೂ ಒಂದಾಗಿದೆ.

ಇತರ ಕ್ರೀಡಾ ಪರಿಕರಗಳಂತೆ ಇಸ್ಪೀಟು (ಕಾಡ್ರ್ಸ್)ಗೂ ಒಂದಷ್ಟು ಹೆಚ್ಚಿನ ‘ಡಿಮ್ಯಾಂಡ್’ ಕಂಡುಬಂದಿದೆ ಎನ್ನುತ್ತಾರೆ ಹಲವರು. ಕಾಡ್ರ್ಸ್ (ಜಾಕ್‍ಪಾಟ್) ಆಡುವಂತಹ ಕ್ಲಬ್‍ಗಳು ಮುಚ್ಚಲ್ಪಟ್ಟಿದ್ದರೂ ಇವುಗಳಿಗೆ ಬೇಡಿಕೆ ಹೆಚ್ಚಿರುವುದು ವಿಶೇಷವಾಗಿದ್ದು, ಜನತೆ ತಮ್ಮ ತಮ್ಮ ಮನೆಗಳಲ್ಲಿ ಇದರಲ್ಲಿ ಆಸಕ್ತಿ ವಹಿಸಿದ್ದಾರೆ.

ಇದಕ್ಕೆ ಉದಾಹರಣೆ ಎಂಬಂತೆ ಅಮೆಜಾನ್, ಫ್ಲಿಪ್‍ಕಾರ್ಡ್ ನಂತಹ ಆನ್‍ಲೈನ್ ವಹಿವಾಟು ನಡೆಸುವ ಕಂಪೆನಿಗಳಲ್ಲಿ ಇದರ ಬುಕ್ಕಿಂಗ್‍ಗೆ ಪ್ರಯತ್ನ ಮಾಡಿದ್ದವರಿಗೆ ನಡು ನಡುವೆ ಸದ್ಯಕ್ಕೆ ‘ನೋ ಸ್ಟಾಕ್’ ಎಂಬ ಮಾಹಿತಿ ಬಂದಿದೆ. ಮತ್ತೆ ಇದು ತಕ್ಷಣವೇ ಲಭ್ಯವಾದರೂ ಬೆಲೆಯಲ್ಲಿ ಒಂದಷ್ಟು ಹೆಚ್ಚಳ. ಇದರೊಂದಿಗೆ ಈ ಹಿಂದೆ ಇದ್ದಂತಹ ‘ಫ್ರಿ ಡೆಲಿವರಿ ಚಾರ್ಜ್’ನ ಬದಲಾಗಿ ಇದಕ್ಕೂ ಒಂದಿಷ್ಟು ಹಣ ನೀಡಬೇಕಾಗಿ ರುವುದು ಕಂಡುಬರುತ್ತಿದೆ.

ಮಡಿಕೇರಿಯಲ್ಲಿ ಕ್ರೀಡಾ ಮಳಿಗೆಯಲ್ಲಿ ಲಾಕ್‍ಡೌನ್ ದಿನಗಳಲ್ಲಿ ಒಳಾಂಗಣ ಕ್ರೀಡಾ ಪರಿಕರಗಳಿಗೆ ಒಂದಷ್ಟು ಹೆಚ್ಚು ಬೇಡಿಕೆ ಕಂಡು ಬಂದಿತ್ತು ಎಂದು ಮಾಲೀಕರು ಕೂಡಾ ಹೇಳುತ್ತಾರೆ.

- ಶಶಿ.