ವೀರಾಜಪೇಟೆ, ಆ. 3: ವೀರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಒಂದು ದಿನದ ರಾಷ್ಟ್ರಮಟ್ಟದ ಸಿಬ್ಬಂದಿ ಅಭಿವೃದ್ಧಿ ಕಾರ್ಯಕ್ರಮ (ಎಫ್‍ಡಿಪಿ)ವನ್ನು ಆನ್‍ಲೈನ್‍ನಲ್ಲಿ ಆಯೋಜಿಸಲಾಯಿತು.

ಸೆಂಟ್ ಆನ್ಸ್ ಪದವಿ ಕಾಲೇಜಿನ ಆಡಳಿತ ಮಂಡಳಿ, ಐಕ್ಯೂಎಸಿ ಘಟಕ ಮತ್ತು ಮಂಗಳೂರಿನ ಸೆಂಟ್ ಅಲೋಶಿ ಯಸ್ ಕಾಲೇಜಿನ ಸಂಯುಕ್ತ ಆಶ್ರಯ ದಲ್ಲಿ ಈ ಕಾರ್ಯಕ್ರಮವು ಜರುಗಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸೆಂಟ್ ಆನ್ಸ್ ಕಾಲೇಜಿನ ಪ್ರಾಂಶುಪಾಲ ರೆ. ಫಾ. ರೋನಿ ರವಿಕುಮಾರ್ ಇವತ್ತಿನ ದಿನಗಳಲ್ಲಿ ತಂತ್ರಜ್ಞಾನದ ಪಾತ್ರ ಬಹು ಮುಖ್ಯವಾಗಿದೆ. ಮಾನವನ ಮತ್ತು ವಿಶ್ವದ ಬೆಳವಣಿಗೆಗೆ ಇದು ಮುನ್ನುಡಿಯಾಗಿದೆ. ಹೊಸ ಹೊಸ ಆವಿಷ್ಕಾರದಿಂದ ತಾಂತ್ರಿಕವಾಗಿ ಮುಂದುವರೆಯಲು ಸಾಧ್ಯ ಎಂದರು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಸ್ಕೂಲ್ ಆಫ್ ಇನ್ಫಾರ್ಮಶನ್ ಟೆಕ್ನಾಲಜಿ ಮತ್ತು ಎಐಎಂಐಟಿಯ ಡೀನ್ ಪೆÇ್ರ. ಸಂತೋಷ್ ರಬೆಲ್ಲೊ ಭಾಗವಹಿಸಿದ್ದರು.

ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಮದಲೈ ಮುತ್ತು ಮಾತನಾಡುತ್ತ ಈ ರಾಷ್ಟ್ರ ಮಟ್ಟದ ಎಫ್‍ಡಿಪಿಯು ಎಲ್ಲಾ ವೃತ್ತಿ ನಿರತರಿಗೆ ಅಗತ್ಯವಾಗಿದ್ದು ತಂತ್ರಜ್ಞಾನದ ಬಳಕೆಯ ವಿಧಾನವನ್ನು ತಿಳಿಸುತ್ತದೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ತಂತ್ರ ಜ್ಞಾನದ ಬಳಕೆಯು ಆರೋಗ್ಯಕರ ವಾಗಿರಬೇಕೇ ಹೊರತು ಸ್ಪರ್ಧಾತ್ಮಕ ವಾಗಿರಬಾರದು. ಅಂತೆಯೇ ಉಪನ್ಯಾಸಕರು ಕೂಡ ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸಬೇಕು ಎಂದರು.

ಕಾಲೇಜಿನ ಐಕ್ಯೂಎಸಿ ವಿಭಾಗದ ಸಂಚಾಲಕಿ ತೃಪ್ತಿ ಬೋಪಣ್ಣ ಸ್ವಾಗತಿಸಿ ವಂದಿಸಿದರು. ಈ ಎಫ್ ಡಿ ಪಿ ಯಲ್ಲಿ ವಿವಿಧ ಜಿಲ್ಲೆಯ ಮತ್ತು ನೆರೆ ರಾಜ್ಯಗಳ 600 ಕ್ಕೂ ಅಧಿಕ ಉಪನ್ಯಾಸಕರು, ಪ್ರಾದ್ಯಾಪಕರುಗಳು, ಸಂಶೋಧನಾರ್ಥಿ ಗಳು ಭಾಗವಹಿಸಿದ್ದರು.