ಮಡಿಕೇರಿ, ಆ. 2: ಕೊರೊನಾ ಲಾಕ್‍ಡೌನ್ ಸಂದರ್ಭದ ನಡುವೆ ಬೆಂಗಳೂರು ಕೊಡವ ಸಮಾಜದ ಯೂತ್ ಕೌನ್ಸಿಲ್ ವತಿಯಿಂದ ಸಾಮಾಜಿಕ ಜಾಲತಾಣದ ಮೂಲಕ ಆಯೋಜಿಸಲಾದ ಕೊಡವ ಸಾಹಿತ್ಯ ಚಂಞÉೂೀಲೆ ಎಂಬ ಕಾರ್ಯಕ್ರಮ ವಿಭಿನ್ನ ರೀತಿಯಲ್ಲಿ ಯಶಸ್ಸು ಕಂಡಿತ್ತು.

ಇದು ಮನೆಯಲ್ಲೇ ಕುಳಿತು ಸಾಹಿತ್ಯ ಪರವಾದ ಚಟುವಟಿಕೆಗಳನ್ನು ಬೆಸೆಯುವ ಕಾರ್ಯಕ್ರಮವಾಗಿ ಮೂಡಿ ಬಂದರೆ, ಇದೀಗ ಪರಿಸರದ ಕಾಳಜಿ ಹಾಗೂ ಅದನ್ನು ಕೇವಲ ಮಾತಿನ ಮೂಲಕವಲ್ಲದೆ ಕಾರ್ಯರೂಪದಲ್ಲಿ ಆಚರಿಸಿ ಪರಿಸರ ಘೋಷಣೆಯ ಪ್ರಯತ್ನಕ್ಕೆ ಕೊಡವ ರೈಡರ್ಸ್ ಕ್ಲಬ್ ಸಂಘಟನೆ ಮುಂದಾಗಿದೆ.

ಈ ಕ್ಲಬ್‍ನ ಪ್ರಮುಖರಾದ ಅಜ್ಜಿಕುಟ್ಟಿರ ಪ್ರಥ್ವಿಸುಬ್ಬಯ್ಯ ಹಾಗೂ ಸಣ್ಣುವಂಡ ದರ್ಶನ್ ಕಾವೇರಪ್ಪ ಈ ಅಭಿಯಾನವನ್ನು ಆರಂಭಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಈ ಗಿಡ ನೆಡುವ ಕಾರ್ಯಕ್ರಮ ಹಾಗೂ ಇದನ್ನು ವೀಡಿಯೋ ಮಾಡುವ ಮೂಲಕ ಸಾಮಾಜಿಕ ಜಾಲತಾಣದ ಮೂಲಕ ಇತರರನ್ನು ಪ್ರೇರೇಪಿಸುವದು, ಗಿಡನೆಟ್ಟವರು ಈ ಕಾರ್ಯಕ್ಕೆ ಇನ್ನಷ್ಟು ಮಂದಿಯ ಹೆಸರನ್ನು ನಾಮನಿರ್ದೇಶನ ಮಾಡುವದರೊಂದಿಗೆ ಅವರುಗಳನ್ನೂ ಅಲ್ಲಲ್ಲಿ ಗಿಡ ನೆಟ್ಟು ಪ್ರಾಕೃತಿಕ ಸಮತೋಲನಕ್ಕೆ ಕೈಜೋಡಿಸುವಂತೆ ಮಾಡುತ್ತಿರುವ ಈ ಚಿಂತನೆ ಯಶಸ್ಸು ಕಾಣುತ್ತಿದೆ. ಹುದಿಕೇರಿ ಕೋಣಗೇರಿಯ ಅಯ್ಯಂಗಾಡ್ ದೇವರ ಕಾಡಿನಿಂದ ಈ ಅಭಿಯಾನ ಆರಂಭಿಸಲಾಗಿದೆ. ಇಲ್ಲಿ ಸುಮಾರು 200 ಗಿಡ ನೆಡುವ ಮೂಲಕ ಪ್ರಥ್ವಿಸುಬ್ಬಯ್ಯ, ದರ್ಶನ್ ಕಾವೇರಪ್ಪ ತಂಡ ಪ್ರಾರಂಭಿಸಿದ ಈ ಕೆಲಸ ಚೆಂಬೆಬೆಳ್ಳೂರು, ಭಗವತಿ ದೇವಾಲಯ, ಕಾನೂರು ವ್ಯಾಪ್ತಿಯ ಲಕ್ಷ್ಮಣತೀರ್ಥ ನದಿಪಾತ್ರ, ಬೇಗೂರು, ತಿತಿಮತಿ ಅರಣ್ಯ ಪ್ರದೇಶ ಸೇರಿದಂತೆ ವಿವಿಧೆಡೆಗಳಲ್ಲಿ ಈಗಾಗಲೇ ನಡೆದಿದೆ. ಕೆಲವರು ಗುಂಪಾಗಿ ಹಾಗೂ ಹಲವರು ವೈಯಕ್ತಿಕವಾಗಿ ತಾವುಗಳೇ ಗಿಡ ಖರೀದಿಸಿ ನೆಡುತ್ತಿದ್ದಾರೆ, ಇದರೊಂದಿಗೆ ಇತರರನ್ನೂ ನಾಮನಿರ್ದೇಶನದ ಮೂಲಕ ಗಿಡ ನೆಡುವಂತೆ ಮಾಡುತ್ತಿರುವದು ವಿಶೇಷವಾಗಿದೆ.

ಈ ಸಂಘಟನೆಯ ಪ್ರಯತ್ನಕ್ಕೆ ಹುಣಸೂರುವಿನಲ್ಲಿ ಡಿಎಫ್‍ಓ ಆಗಿರುವ ಅಜ್ಜಿಕುಟ್ಟಿರ ಟಿ. ಪೂವಯ್ಯ ಅವರು, ಸಹಕಾರ ನೀಡಿದ್ದು, ಸುಮಾರು ಒಂದು ಸಾವಿರ ಗಿಡಗಳನ್ನು ಒದಗಿಸಿಕೊಟ್ಟಿದ್ದಾರೆ. ಈ ಸರಪಳಿ ಇದೀಗ ಕೊಡಗು ಮಾತ್ರವಲ್ಲದೆ, ತೀರ್ಥಹಳ್ಳಿ, ಚಿಕ್ಕಮಂಗಳೂರು, ಮಂಗಳೂರು ಕಡೆಗೂ ಮುಂದುವರಿದಿದೆ. ಚಲನಚಿತ್ರ ನಟಿ ನೀತುಶೆಟ್ಟಿ ಅವರು ಮಂಗಳೂರಿನಲ್ಲಿ ಗಿಡ ನೆಡುವ ಮೂಲಕ ಈ ಅಭಿಯಾನದಲ್ಲಿ ಕೈಜೋಡಿಸಿದ್ದು, ಇದು ಮುಂದುವರಿಯುತ್ತಿದೆ. -ಶಶಿ ಸೋಮಯ್ಯ