ಮಡಿಕೇರಿ, ಜು. 29: ಪಿಕ್‍ಅಪ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಜಾನುವಾರುಗಳನ್ನು ಪೊಲೀಸರ ಮೂಲಕ ಹುಣಸೂರಿನ ಗೋಶಾಲೆಗೆ ಸಾಗಿಸಲಾಗಿದೆ. ಇಂದು ಮಧ್ಯಾಹ್ನ ವೇಳೆಗೆ ಪಿಕ್‍ಅಪ್ ವಾಹನದಲ್ಲಿ ಐದು ಜಾನುವಾರುಗಳನ್ನು ತುಂಬಿಕೊಂಡು ಸೋಮವಾರಪೇಟೆ ಮಾರ್ಗವಾಗಿ ತೆರಳುತ್ತಿದ್ದಾಗ ಮಕ್ಕಂದೂರಿನಲ್ಲಿ ಯುವಕರ ತಂಡ ವಾಹನವನ್ನು ತಡೆದು ಪ್ರಶ್ನಿಸಿದ್ದಾರೆ. ಚಾಲಕ ಜಾನುವಾರುಗಳನ್ನು ಹೊದ್ದೂರುವಿ ನಿಂದ ಶಿವಮೊಗ್ಗಕ್ಕೆ ಸಾಕಲು ಕೊಂಡೊಯ್ಯುತ್ತಿರುವುದಾಗಿ ಹೇಳಿದ್ದಾನೆ. ಜಾನುವಾರುಗಳ ಮಾಲೀಕರನ್ನು ದೂರವಾಣಿ ಮೂಲಕ ಯುವಕರು ಸಂಪರ್ಕಿಸಿದಾಗ ಅತ್ತಲಿನಿಂದ ಮಾಲೀಕ ಜಾನುವಾರು ಗಳನ್ನು ‘ನೀವೇ ಇರಿಸಿಕೊಂಡು ವಾಹನವನ್ನು ವಾಪಸ್ ಕಳುಹಿಸಿ ಕೊಡುವಂತೆ’ ಹೇಳಿದಾಗ ಸಂಶಯ ಗೊಂಡ ಯುವಕರು ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ವಾಹನ ಸಹಿತ ಜಾನುವಾರುಗಳನ್ನು ಠಾಣೆಗೆ ಕರೆದೊಯ್ದಿದ್ದಾರೆ.

ಪರಿಶೀಲಿಸಲಾಗಿ ಜಾನುವಾರು ಗಳನ್ನು ಸಾಕಲು ಸಾಗಾಟ ಮಾಡಲು ಮೂರ್ನಾಡು ಪಶುವೈದ್ಯಾಧಿಕಾರಿ ನೀಡಿರುವ ಅನುಮತಿ ಪತ್ರವನ್ನು ಚಾಲಕ ನೀಡಿದ್ದಾನೆ. ಈ ಬಗ್ಗೆ ವಿಚಾರಣೆ ನಡೆಸಿದ ಬಳಿಕ ಪೊಲೀಸರು ಚಾಲಕನನ್ನು ವಾಪಸ್ ಕಳುಹಿಸಿ, ಜಾನುವಾರುಗಳನ್ನು ಹುಣಸೂರಿನ ಗೋಶಾಲೆಗೆ ಕಳುಹಿಸಿಕೊಟ್ಟಿದ್ದಾರೆ.

ಕೂಡಿಗೆಯಲ್ಲಿ ಬಂಧನ

ಗುಡ್ಡೆಹೊಸೂರು ಕಡೆಯಿಂದ ಹೆಬ್ಬಾಲೆ ಕಡೆಗೆ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದಾರೆ ಎಂಬ ಸುಳಿವಿನ ಮೇರೆಗೆ ವಾಹನವನ್ನು ಅಡ್ಡಗಟ್ಟಿದರೂ, ವಾಹನ ಚಾಲಿಸಲು ಮುಂದಾದಾಗ ಪೆÇಲೀಸರು ವಾಹನವನ್ನು ಹಿಂಬಾಲಿಸಿ ವಾಹನ ಸೇರಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಕುಶಾಲನಗರ ಗ್ರಾಮಾಂತರ ಪೆÇಲೀಸ್ ಠಾಣಾ ವ್ಯಾಪ್ತಿಯ ಹೆಬ್ಬಾಲೆಯಲ್ಲಿ ಸಮೀಪದಲ್ಲಿ ಗೋ ಸಾಗಾಟ

(ಮೊದಲ ಪುಟದಿಂದ) ಮಾಡುತ್ತಿದ್ದ ವಾಹನ (ಕೆ.ಎ 30 ಎ1162) ಸೇರಿದಂತೆ ಜೀವನ್ ಎಂಬಾತನನ್ನು ಬಂಧಿಸಿದ್ದಾರೆ. ವಾಹನದಲ್ಲಿದ್ದ ಉಳಿದ ಮೂವರು ಪರಾರಿಯಾಗಿದ್ದಾರೆ. ವಾಹನದಲ್ಲಿದ್ದ ನಾಲ್ಕು ಹಸುಗಳನ್ನು ರಕ್ಷಣೆ ಮಾಡಲಾಗಿದೆ. ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ನಂದೀಶ್ ಕುಮಾರ್, ಸಹಾಯಕ ಠಾಣಾಧಿಕಾರಿ ಸ್ವಾಮಿ, ಸಿಬ್ಬಂದಿ ಮಂಜುನಾಥ್, ರಾಜು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಸೋಮವಾರಪೇಟೆ : ಅಕ್ರಮವಾಗಿ ಗೋವುಗಳನ್ನು ಸಾಗಾಟಗೊಳಿಸುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ, ಮೊಕದ್ದಮೆ ದಾಖಲಿಸಿದ್ದಾರೆ. ಹಟ್ಟಿಹೊಳೆಯಿಂದ ಸೋಮವಾರಪೇಟೆ ಮಾರ್ಗ ಮೂಲಕ ಪಿಕ್‍ಅಪ್ ವಾಹನ (ಕೆ.ಎ. 12 ಎ. 5284) ದಲ್ಲಿ ಎರಡು ಗೋವುಗಳನ್ನು ಅಕ್ರಮವಾಗಿ ಸಾಗಾಟಗೊಳಿಸುತ್ತಿದ್ದ ಸಂದರ್ಭ, ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರು ತಡೆಯೊಡ್ಡಿ, ವಾಹನ ಸಹಿತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ವಾಹನ ಚಾಲಿಸುತ್ತಿದ್ದ ಹೆಬ್ಬಾಲೆ ಗ್ರಾಮದ ಅಣ್ಣಯ್ಯ ಎಂಬವರ ಪುತ್ರ ದೇವರಾಜು ಎಂಬಾತನನ್ನು ಬಂಧಿಸಿದ್ದಾರೆ. ಈ ಸಂದರ್ಭ ವಾಹನದಲ್ಲಿದ್ದ ಮತ್ತೀರ್ವರು ಪರಾರಿಯಾಗಿದ್ದಾರೆ.